ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಬಾಂದ್ರಾದಲ್ಲಿ ಹೊಂದಿರುವ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಮೇಲೆ ಭಾನುವಾರ ಗುಂಡಿನ ದಾಳಿ ನಡೆದಿದೆ.
ಮುಂಜಾನೆ ೪.೫೦ರ ವೇಳೆ ಅಪರಿಚಿತ ದುಷ್ಕರ್ಮಿಗಳು ಗ್ಯಾಲಕ್ಸಿ ಅಪಾರ್ಟ್ಮೆಂಟ್ ಹೊರಗಡೆ ಐದು ಸುತ್ತು ಗುಂಡು ಹಾರಿಸಿದ್ದಾರೆ. ಮನೆಯ ಗೋಡೆ ಮೇಲೆ ಗುಂಡಿನ ದಾಳಿಯ ಗುರುತು ಕಂಡುಬಂದಿದೆ. ಶೆಲ್‌ಗಳು ಬಾಲ್ಕನಿಯಲ್ಲಿ ಪತ್ತೆಯಾಗಿವೆ.
ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ದುಷ್ಕರ್ಮಿಗಳು ೭.೬೫ ಎಂಎಂ ಬೋರ್ ಪಿಸ್ತೂಲ್‌ನಿಂದ ದಾಳಿ ಮಾಡಿದ್ದಾರೆ. ಹೆಲ್ಮಟ್ ಹಾಕಿಕೊಂಡು ಬೈಕ್‌ನಲ್ಲಿ ಬಂದಿರುವ ದುಷ್ಕರ್ಮಿಗಳನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ದಾಳಿ ನಂತರ ದುಷ್ಕರ್ಮಿಗಳು ಬಾಂದ್ರಾದಲ್ಲಿ ಬೈಕ್ ಬಿಟ್ಟು ರಿಕ್ಷಾದಲ್ಲಿ ಪರಾರಿಯಾಗಿದ್ದಾರೆ. ರಿಕ್ಷಾದಲ್ಲಿ ದಹಿಸರ್ ನಾಕಾ ದಾಟಿರುವುದರಿಂದ ಮುಂಬೈನಿಂದ ಪರಾರಿಯಾಗಿರಬಹುದೆಂದು ಹೇಳಲಾಗುತ್ತಿದೆ.
ಗುಂಡಿನ ದಾಳಿ ನಡೆದಾಗ ಸಲ್ಮಾನ್ ಖಾನ್ ಮತ್ತು ತಂದೆ ಸಲೀಂ ಖಾನ್ ಮತ್ತವರ ಕುಟುಂಬದವರು ಮನೆಯಲ್ಲಿದ್ದರು. ಅವರೆಲ್ಲರೂ ಆರೋಗ್ಯವಾಗಿದ್ದಾರೆ. ದಾಳಿ ಬಳಿಕ ಈ ನಿವಾಸಕ್ಕೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.
ತನ್ಮಧ್ಯೆ ದರೋಡೆಕೋರ ಲಾರೆನ್ಸ್ ಬಿಷ್ಣೋಯಿ ಅವರ ಸಹೋದರ ಅನ್ಮೋಲ್ ಬಿಷ್ಣೋಯಿ ಈ ದಾಳಿ ಮಾಡಿರುವುದಾಗಿ ಫೇಸ್‌ಬುಕ್‌ನಲ್ಲಿ ವೈರಲ್ ಆಗಿದೆ. ಇಲ್ಲಿಯವರೆಗೆ ಗುಂಡಿನ ದಾಳಿ ಮಾಡಿದವರು ಯಾರು ಎಂಬುದು ಖಚಿತವಾಗಿಲ್ಲ. ಫೇಸ್‌ಬುಕ್ ಪೋಸ್ಟ್ ಪ್ರಕಾರ, `ದಬ್ಬಾಳಿಕೆ ವಿರುದ್ಧ ಯುದ್ಧವಾದರೂ ಸರಿ ಸಲ್ಮಾನ್‌ಖಾನ್. ನಿಮಗೆ ಟ್ರೇಲರ್ ತೋರಿಸಲು ಇದನ್ನು ಮಾಡಿದ್ದೇವೆ. ಇದರಿಂದ ನಮ್ಮ ಸಾಮರ್ಥ್ಯ ಅರ್ಥ ಮಾಡಿಕೊಳ್ಳಿ. ಪರೀಕ್ಷೆ ಮಾಡಬೇಡಿ. ನೀವು ದೇವರೆಂದು ಪರಿಗಣಿಸುವ ದಾವೂದ್ ಇಬ್ರಾಹಿಂ ಹಾಗೂ ಛೋಟಾ ಶಕೀಲ್ ಹೆಸರಿನ ಎರಡು ಪ್ರಾಣಿಗಳನ್ನು ಸಾಕಿದ್ದೇವೆ. ಹೆಚ್ಚು ಮಾತನಾಡುವ ಅಭ್ಯಾಸ ನಮಗಿಲ್ಲ. ಲಾರೆನ್ಸ್ ಬಿಷ್ಣೋಯಿ ಗ್ರೂಪ್, ಗೋಲ್ಡಿ ಬ್ರಾರ್ ಗ್ರೂಪ್, ಕಲಾ ಜತೆಡಿ ಗ್ರೂಪ್ ,ರೋಹಿತ್ ಗೋಡರಾ ಗ್ರೂಪ್ ಎಂದು ಬರೆಯಲಾಗಿದೆ.