ಬೆಂಗಳೂರು: ಲೋಕಸಭಾ ಚುನಾವಣೆಯ ನಂತರ ರಾಜ್ಯ ಸರಕಾರ ಉರುಳಿ ಬೀಳಲಿದೆ ಎನ್ನುವ ಎಚ್ ಡಿ ಕುಮಾರಸ್ವಾಮಿ ಅವರ ಮಾತು ಬರೀ ಹಗಲುಗನಸು ಎಂದು ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಅವರು ಮಾತನಾಡಿರುವ ಅವರು ಕೆಲವೇ ತಿಂಗಳುಗಳಲ್ಲಿ ಸರ್ಕಾರ ಬೀಳುತ್ತೆ ಎಂಬುದು ಕುಮಾರಸ್ವಾಮಿ ಅವರ ರಾಜಕೀಯ ಹೇಳಿಕೆ ಅಷ್ಟೇ. ಈ ಸರ್ಕಾರ ಬೀಳಿಸಬೇಕಾದ್ರೆ 60 ಶಾಸಕರು ಬೇಕು. ಇಬ್ಬರಿಂದ ನಾಲ್ಕು ಶಾಸಕರನ್ನ ಕರೆದುಕೊಂಡು ಬರಲಿ. ಬಿಜೆಪಿಯ ಶಾಸಕರೇ ನಮ್ಮೊಂದಿಗಿದ್ದಾರೆ. ಜೆಡಿಎಸ್ನವರು ಅತಂತ್ರರಾಗಿದ್ದಾರೆ, ಜೆಡಿಎಸ್ ಪಕ್ಷದ ಅನೇಕರು ಕಾಂಗ್ರೆಸ್ಸಿನ ಸಂಪರ್ಕದಲ್ಲಿ ಇದ್ದಾರೆ. ಪೆನ್ ಡ್ರೈವ್ ಪ್ರಕರಣವು ಅವರಿಗೆ ತಲೆನೋವಾಗಿ ಪರಿಣಮಿಸಿದೆ , ಪ್ರಜ್ವಲ್ ರೇವಣ್ಣನವರ ಕಾಮಕಾಂಡವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಕುಮಾರಸ್ವಾಮಿ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ. ಈ ಮೂಲಕ ಕ್ಲೀನ್ ಚಿಟ್ ತೆಗೆದುಕೊಂಡು, ಬಿಜೆಪಿಯಿಂದ ಪರಿಶುದ್ಧತೆಯ ಸರ್ಟಿಫಿಕೇಟ್ ಪಡೆದುಕೊಳ್ಳುವ ಯೋಜನೆ ಇದೆ ಎಂದರು.