ಸರ್ಕಾರ ಪರಿಶಿಷ್ಟರ ಪರವಾಗಿದೆ: ಶ್ರೀರಾಮುಲು

Advertisement

ದಾವಣಗೆರೆ: ಅಹಿಂದ ವರ್ಗದ ಚಾಂಪಿಯನ್ ಎಂದು ಹೇಳಿಕೊಳ್ಳುವ ಸ್ವಯಂ ಘೋಷಿತ ನಾಯಕ ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗಲೇ ಪರಿಶಿಷ್ಟರಿಗೆ ಮೀಸಲಾತಿ ಹೆಚ್ಚಿಸಬಹುದಿತ್ತಾದರೂ ರಾಜಕೀಯ ಇಚ್ಛಾಶಕ್ತಿ ಇರದ ಕಾರಣ ಅವರು ನೀಡಲಿಲ್ಲ. ಆದರೆ, ಬಿಜೆಪಿ ಸರಕಾರ ಪರಿಶಿಷ್ಟರಿಗೆ ಮೀಸಲಾತಿ ಹೆಚ್ಚಿಸಿ ಕೆಳ ಸಮುದಾಯಗಳ ಪರವಾಗಿದೆ ಎಂದು ತೋರಿಸಿಕೊಟ್ಟಿದೆ ಎಂದು ಸಚಿವ ಶ್ರೀರಾಮುಲು ಹೇಳಿದರು.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪರಿಶಿಷ್ಟ ಜಾತಿ ಪಂಗಡ ಹಿಂದುಳಿದ ವರ್ಗಗಳ ಹೆಸರೇಳಿಕೊಂಡು ರಾಜಕಾರಣ ಮಾಡಿದ ಕಾಂಗ್ರೆಸ್ ಅಧಿಕಾರ ಹಿಡಿದ ಮೇಲೆ ಹಿಂದೂಗಳ ಜಾತಿಗಳ ಬೆನ್ನಿಗೆ ಚೂರಿಹಾಕಿತು. ಆದರೆ, ಬಿಜೆಪಿ ಕೊಟ್ಟ ಮಾತಿಗೆ ತಪ್ಪದೆ ಮೀಸಲಾತಿ ಕೊಟ್ಟ ಪಕ್ಷ, ಕಾಂಗ್ರೆಸ್ ಮೀಸಲಾತಿ ನೀಡದ ಪಕ್ಷ ಎಂದು ಟೀಕಿಸಿದರು.
ಕೆಳ ಸಮುದಾಯದವರು ಕಾಂಗ್ರೆಸ್ ಪಕ್ಷ ತಿರಸ್ಕಾರ ಮಾಡುತ್ತಿದ್ದು, ಕೆಳ ಸಮುದಾಯಕ್ಕೆ ಭಾರತೀಯ ಜನತಾ ಪಾರ್ಟಿ ಇದೆ ಅಂತ ಗಟ್ಟಿ ಧ್ವನಿಯಲ್ಲಿ ಹೇಳುವ ಕೆಲಸವಾಗುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅಧಿಕಾರಲ್ಲಿದ್ದಾಗ ಮೀಸಲಾತಿ ಕೊಡಬಹುದಿತ್ತು. ಅವರು ಮನಸು ಮಾಡದೇ ಇರೋದಕ್ಕೆ ಮೀಸಲಾತಿ ಕೊಡಲು ಆಗಲಿಲ್ಲ. ಹಿಂದುಳಿದ ಜಾತಿಗಳು ಬಗ್ಗೆ ಮಾತಾನಾಡೋ ನಯಾ ಪೈಸೆ ಅಧಿಕಾರ ಸಿದ್ದರಾಮಯ್ಯಗೆ ಇಲ್ಲ ಎಂದು ಕಿಡಿಕಾರಿದರು.
ಇತ್ತೀಚಿಗೆ ಸಿದ್ದರಾಮಯ್ಯ ಶ್ರೀರಾಮುಲು ಎಂದು ಜಪ ಮಾಡುತ್ತಿದ್ದಾರೆ. ಒಂದು ಹೊಗಳುತ್ತಾರೆ ಇಲ್ಲ ತೆಗಳುತ್ತಾರೆ. ಏಕೆಂದರೆ ಬಿಜೆಪಿ ಕಂಡರೆ ಅವರಿಗೆ ಭಯ ಶುರುವಾಗಿದೆ. ನಿದ್ದೆಕೆಟ್ಟಿದೆ ಎಂದು ಸಿದ್ದರಾಮಯ್ಯ ಟೀಕೆಗೆ ವ್ಯಂಗ್ಯವಾಡಿದರು.