ಬೆಳಗಾವಿ: ಸರ್ಕಾರಕ್ಕೆ ಪಂಚಮಶಾಲಿ ಮೀಸಲಾತಿ ಬಿಕ್ಕಟ್ಟು ಎದುರಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಿಲುವೆನು ಎಂದು ಕೇಳಿದಾಗ ಡಿ.ಕೆ. ಶಿವಕುಮಾರ್ ಅವರು ಮಾಧ್ಯಮಗಳಿಗೆ ಬುಧವಾರ ಪ್ರತಿಕ್ರಿಯೆ ನಿಡಿದ್ದು ‘ನಮ್ಮ ನಾಯಕರು ಈ ವಿಚಾರವಾಗಿ ಮಾತನಾಡಿದ್ದಾರೆ. ಉಳಿದಂತೆ ಯಾರೂ ಬಂದು ನಮ್ಮ ಬಳಿ ಚರ್ಚೆ ಮಾಡಿಲ್ಲ. ಸರ್ಕಾರ ಮೊದಲು ನಿಲುವು ಪ್ರಕಟಿಸಲಿ. ಕಾನೂನು ಅಡಚಣೆಗಳೇನು ಎಂಬುದು ಗೊತ್ತಿಲ್ಲ. ಈ ವಿಚಾರವಾಗಿ ಆಡಳಿತ ಪಕ್ಷ ತೀರ್ಮಾನ ಮಾಡಬೇಕು. ಕಾನೂನು ಏನಿದೆ ಎಂದು ಪರಿಶೀಲಿಸಿ ತೀರ್ಮಾನ ಕೈಗೊಳ್ಳಬೇಕು. ಮೀಸಲಾತಿ ಹೆಚ್ಚಳ ಮಾಡುವಂತೆ ಬಹಳ ಸಮಾಜಗಳು ಒತ್ತಾಯ ಮಾಡುತ್ತಿವೆ. ಪರಿಶಿಷ್ಟ ಜಾತಿಗೆ ಸೇರಿಸಬೇಕು ಎಂದು ಕುರುಬರು ಹೋರಾಟ ಮಾಡುತ್ತಿದ್ದಾರೆ. ಇನ್ನು ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಮೀಸಲಾತಿ ಹೆಚ್ಚಳದ ವಿಚಾರವಾಗಿ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ. ಆದರೆ 50 % ಮಿತಿ ಮೀರಿ ಮೀಸಲಾತಿ ನೀಡಲು ಸಾಧ್ಯವಿಲ್ಲ ಎಂದು ರಾಜ್ಯಸಭೆಯಲ್ಲಿ ಸಚಿವರು ಉತ್ತರ ನೀಡಿದ್ದಾರೆ. ಹೀಗೆ ಮೀಸಲಾತಿ ವಿಚಾರ ಗೊಂದಲದ ಗೂಡಾಗಿದೆ. ಹೀಗಾಗಿ ಕಾನೂನು ಅಂಶಗಳನ್ನು ಅರಿಯಲು ಎಐಸಿಸಿಯಿಂದ ಒಂದು ಸಮಿತಿ ಮಾಡಲಾಗಿದೆ. ನಾವೆಲ್ಲ ಚರ್ಚೆ ಮಾಡಿ ತೀರ್ಮಾನಕ್ಕೆ ಬರುತ್ತೇವೆ’ ಎಂದರು.
ಮೀಸಲಾತಿ ಹೆಚ್ಚಳ ಮಸೂದೆ ಮಂಡನೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಸರ್ಕಾರ ತರಾತುರಿಯಲ್ಲಿ ಮೀಸಲಾತಿ ಹೆಚ್ಚಳ ಮಾಡಿದೆ. ಅವರಿಗೆ ನಿಜಕ್ಕೂ ಕಾಳಜಿ ಇದ್ದಿದ್ದರೆ ಸಂಸತ್ತಿನಲ್ಲಿ ಮಸೂದೆ ಮಂಡಿಸಿ, ಸಂವಿಧಾನದ 9ನೇ ಶೆಡ್ಯೂಲ್ ಗೆ ಸೇರಿಸಿ ತಿದ್ದುಪಡಿ ತರಲಿ. ಅದನ್ನು ಮಾಡದೇ ಇಲ್ಲಿ ಏನೇ ಮಾಡಿದರೂ ಪ್ರಯೋಜನವಿಲ್ಲ. ಇಲ್ಲಿ ಕಾನೂನು ತರುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಹೇಗಿದ್ದರೂ ಸಂಸತ್ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಈ ಕಾನೂನನ್ನು ಅಲ್ಲಿಗೆ ಕಳುಹಿಸಿ, ಅನುಮೋದನೆ ಪಡೆಯಲಿ. ಆತುರದಲ್ಲಿ ನಾವು ಮಾಡಿದ್ದೇವೆ ಎಂದು ತೋರಿಸಿಕೊಳ್ಳಲು ಈ ರೀತಿ ಮಾಡುತ್ತಿದ್ದಾರೆ. ಈ ಮೀಸಲಾತಿ ಹೆಚ್ಚಳ ವಿಚಾರವಾಗಿ ನಾಗಮೋಹನ್ ದಾಸ್ ಸಮಿತಿಯನ್ನು ರಚನೆ ಮಾಡಿದ್ದು ನಾವು’ ಎಂದು ಉತ್ತರಿಸಿದರು.