ಸರ್ಕಾರಿ ವರ್ಗಾವಣೆ ದೇವರ ಕೆಲಸ ಅಲ್ಲ

ಸಂಪಾದಕೀಯ
Advertisement

ಯಾವುದೇ ಹೊಸ ಸರ್ಕಾರ ಬಂದರೂ ನೌಕರರ ಸಾರ್ವತ್ರಿಕ ವರ್ಗಾವಣೆ ದೊಡ್ಡ ಪಿಡುಗು. ಇದರಲ್ಲಿ ಸತ್ಯಸಂಧರು ಯಾರೂ ಇಲ್ಲ. ಪ್ರಾಮಾಣಿಕ ನೌಕರರು ಮಾತ್ರ ಬಲಿಪಶುಗಳು.

ಸರ್ಕಾರಿ ಕೆಲಸ ದೇವರ ಕೆಲಸ ಎಂದು ವಿಧಾನಸೌಧದ ಹೆಬ್ಬಾಗಿಲಿನ ಮೇಲೆ ಬರೆಯಲಾಗಿದೆ. ಅದರೆ ಸರ್ಕಾರಿ ನೌಕರರ ವರ್ಗಾವಣೆ ದೇವರ ಕೆಲಸವಂತೂ ಅಲ್ಲ. ಮುಖ್ಯಮಂತ್ರಿ ಮತ್ತು ಇತರ ಸಚಿವರು ಪ್ರಮಾಣವಚನ ಸ್ವೀಕರಿಸಿದ ಕೂಡಲೇ ಮೊದಲು ನಡೆಯುವುದೇ ಸಾರ್ವತ್ರಿಕ ವರ್ಗಾವಣೆ. ಎಲ್ಲದಕ್ಕೂ ಒಂದೇ ಒಕ್ಕಣೆ `ಸಾರ್ವಜನಿಕ ಹಿತ’. ಆದರೆ ಒಬ್ಬ ಸರ್ಕಾರಿ ನೌಕರನ ವರ್ಗಾವಣೆಯಲ್ಲೂ ಸಾರ್ವಜನಿಕ ಹಿತ ಇರುವುದಿಲ್ಲ. ಒಂದು ಸರ್ಕಾರ ಹೋಗಿ ಮತ್ತೊಂದು ಸರ್ಕಾರ ಬಂದ ಕೂಡಲೇ ಹಿಂದಿನ ಸರ್ಕಾರ ನೇಮಿಸಿದ ಎಲ್ಲ ನೌಕರರು ಅದಕ್ಷರಾಗಿ ಕಂಡುಬರುತ್ತಾರೆ. ಅವರು ಬದಲಾದ ಕೂಡಲೇ ಆಡಳಿತದಲ್ಲಿ ಬದಲಾವಣೆಯ ಗಾಳಿ ಬೀಸಿ ಬಿಡುತ್ತದೆ. ಇದು ಹಲವು ದಶಕಗಳಿಂದ ನಡೆದು ಬಂದಿರುವ ಪದ್ಧತಿ.
ಹಿಂದೆ ಕಾಂಗ್ರೆಸ್ ಸರ್ಕಾರ ಹಲವು ವರ್ಷಗಳು ಅಧಿಕಾರದಲ್ಲಿ ಮುಂದುವರಿದಿದ್ದರಿಂದ ವರ್ಗಾವಣೆ ದೊಡ್ಡ ಸಮಸ್ಯೆ ಆಗಿರಲಿಲ್ಲ. ಸಚಿವರು ಬದಲಾಗುತ್ತಿದ್ದರು. ಅದಕ್ಕೆ ತಕ್ಕಂತೆ ಅವರ ಸಿಬ್ಬಂದಿ ಬದಲಾಗುತ್ತಿದ್ದರು. ಈಗ ರಾಜಕೀಯ ಪಕ್ಷಗಳ ಆಡಳಿತವೇ ಬದಲಾಗುತ್ತಿದೆ. ಮುಖ್ಯಮಂತ್ರಿಯಿಂದ ಹಿಡಿದು ಎಲ್ಲ ಸಚಿವರು ಅಧಿಕಾರವಹಿಸಿಕೊಂಡ ಕೂಡಲೇ ಅವರ ನಿವಾಸ, ಆಡಳಿತ ಕಚೇರಿ ನವೀಕರಣಗೊಳ್ಳುತ್ತದೆ. ವ್ಯಕ್ತಿ ಬದಲಾಗುತ್ತಿದ್ದಂತೆ ವಾಸ್ತು ನಿಯಮಗಳೂ ಬದಲಾಗುತ್ತದೆ. ಸರ್ಕಾರಿ ನೌಕರರು ಕಾನೂನು ಪ್ರಕಾರ ಕೆಲಸ ಮಾಡುತ್ತಾರೋ, ಸಚಿವರ ಮರ್ಜಿಗೆ ತಕ್ಕಂತೆ ಕೆಲಸ ಮಾಡುತ್ತಾರೋ ತಿಳಿಯುವುದಿಲ್ಲ. ನೌಕರರ ವರ್ಗಾವಣೆ ಏನೋ ನಡೆಯುತ್ತದೆ, ಆದರೂ ಅದು ದಂಧೆಯಲ್ಲ ಎಂದು ಸಮರ್ಥನೆ ನೀಡಿದರೂ ಈ ಸಮರ್ಥನೆಯನ್ನು ಯಾರೂ ಒಪ್ಪುವುದಿಲ್ಲ. ರಾಜ್ಯದಲ್ಲಿ ಒಟ್ಟು ೮ ಲಕ್ಷ ನೌಕರರು ಇದ್ದಾರೆ. ಇದರಲ್ಲಿ ಶೇಕಡ ೧೦ ರಷ್ಟು ನೌಕರರು ವರ್ಗಾವಣೆಗೊಂಡರೂ ದೊಡ್ಡ ಸಮೂಹವೇ ಆಗುತ್ತದೆ. ಎರಡು ವರ್ಷಕ್ಕೊಮ್ಮೆ ವರ್ಗಾವಣೆ ನಡೆಯಬೇಕು ಎಂದು ನಿಯಮ ಹೇಳುತ್ತದೆ. ಇದರ ಪಾಲನೆ ಆಗುವುದಿಲ್ಲ. ನಿಯಮಗಳನ್ನು ಸರ್ಕಾರವಾಗಲೀ, ಸರ್ಕಾರಿ ನೌಕರರಾಗಲೀ ಗಂಭೀರವಾಗಿ ಪರಿಗಣಿಸುವುದಿಲ್ಲ.
ಆಡಳಿತ ವ್ಯವಸ್ಥೆಯಲ್ಲಿ ವರ್ಗಾವಣೆ ಒಂದು ಅಂಗ. ಆದರೆ ಇದು ಪಾರದರ್ಶಕವಾಗಿ ನಡೆಯುವುದೇ ಇಲ್ಲ. ಸರ್ಕಾರಿ ನೌಕರರಲ್ಲಿ ದಕ್ಷತೆ ಮತ್ತು ಪ್ರಾಮಾಣಿಕತೆಗಿಂತ ಶಾಸಕರು ಮತ್ತು ಸಚಿವರ ಸಾಮೀಪ್ಯವೇ ಮುಖ್ಯವಾಗುತ್ತದೆ. ನೌಕರರು ಶಾಸಕರು ಮತ್ತು ಸಚಿವರ ಶಿಫಾರಸು ಪತ್ರ ತರುತ್ತಾರೆ. ಮುಖ್ಯಮಂತ್ರಿ ಕಚೇರಿಯಿಂದಲೂ ಶಿಫಾರಸು ಪತ್ರ ರವಾನೆಯಾಗುತ್ತಿದೆ. ಇದು ತಪ್ಪು ಎಂದು ಜನ ಪ್ರತಿನಿಧಿಗಳು ಭಾವಿಸಿಲ್ಲ.
ನೌಕರರ ವರ್ಗಾವಣೆ ಆಯಾ ಇಲಾಖೆಯ ಆಡಳಿತದ ಅವಿಭಾಜ್ಯ ಅಂಗ ಎಂದಾದರೆ ಜನಪ್ರತಿನಿಧಿಗಳು ಶಿಫಾರಸು ಪತ್ರ ನೀಡುವ ಅಗತ್ಯವೇನು? ಈ ವರ್ಗಾವಣೆ ಮೂಲ ಬೇರು ಜಾತೀಯತೆ ಮತ್ತು ಭ್ರಷ್ಟಾಚಾರದಲ್ಲಿದೆ. ನಿಷ್ಠೆ ಮತ್ತು ಪ್ರಾಮಾಣಿಕತೆ ಬಲಿಯಾಗುವುದು ಸ್ಪಷ್ಟ. ಪ್ರಾಮಾಣಿಕ ಅಧಿಕಾರಿಯನ್ನು ಶಿಕ್ಷಿಸುವುದಕ್ಕೂ ವರ್ಗಾವಣೆ ಅಸ್ತ್ರ ಬಳಕೆಯಾಗುತ್ತಿದೆ.
ಮುಖ್ಯಮಂತ್ರಿ ಅನುಭವಿ ರಾಜಕಾರಣಿ. ಹಿಂದೆ ಅಡಳಿತ ಸುಧಾರಣೆ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಿದವರು. ಅವರಿಗೆ ನಿಜಾಂಶ ಗೊತ್ತಿದೆ. ಆಡಳಿತ ನಡೆಸುವವರಿಗೆ ಇವರು ನಮ್ಮವರು- ಅವರು ಬೇರೆಯವರು ಎಂಬ ಭಾವನೆ ಬಂದರೆ ದಕ್ಷತೆ ತಂತಾನೇ ಕುಸಿಯುತ್ತದೆ. ನೌಕರರ ವರ್ಗಾವಣೆ ರಾಜಕೀಯರಹಿತವಾಗಿ ಪಾರದರ್ಶಕವಾಗಿ ಕೌನ್ಸೆಲಿಂಗ್ ಮೂಲಕ ನಡೆದರೆ ಸಾರ್ವಜನಿಕ ಹಿತ ಕಾಪಾಡಬಹುದು. ಅದಕ್ಕೆ ಜನಪ್ರತಿನಿಧಿಗಳೇ ಅವಕಾಶ ನೀಡುವುದಿಲ್ಲ.