ಬೆಂಗಳೂರು: ಭಾರತದ ಪ್ರಮುಖ ಕಾನೂನು ಸಂಹಿತೆಗಳ ಕನ್ನಡ ಆವೃತ್ತಿಗಳು ಜನಸಾಮಾನ್ಯರಿಗೆ ಸರಳ ಭಾಷೆಯಲ್ಲಿ ಕಾನೂನು ಅರ್ಥಮಾಡಿಸಲು ಸಹಕಾರಿಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ, ರಾಜಾಭಾಷಾ (ವಿಧಾಯೀ) ಆಯೋಗ ಹಾಗೂ ಭಾಷಾಂತರ ನಿರ್ದೇಶನಾಲಯದ ವತಿಯಿಂದ ಆಯೋಜಿಸಿರುವ ಭಾರತ ದಂಡ ಸಂಹಿತೆ, ದಂಡ ಪ್ರಕ್ರಿಯಾ ಸಂಹಿತೆ ಮತ್ತು ಭಾರತ ಸಾಕ್ಷ್ಯ ಅಧಿನಿಯಮಗಳ ದ್ವಿ-ಭಾಷಾ ಕನ್ನಡ ಆವೃತ್ತಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಕಾನೂನಿನ ಜ್ಞಾನ ಮತ್ತು ಅರಿವು ಬಹಳ ಮುಖ್ಯ. ಇದುವರೆಗೂ ಪಾಲಿಸಿಕೊಂಡಿರುವ ಐಪಿಸಿ, ಸಿಆರ್‍ಪಿಸಿ, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಬಹುತೇಕ ಕಾನೂನುಗಳು ಆಂಗ್ಲಭಾಷೆಯಲ್ಲಿದೆ. ಈ ಬಾರಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆಯು ಭಾರತ ದಂಡ ಸಂಹಿತೆ, ದಂಡ ಪ್ರಕ್ರಿಯಾ ಸಂಹಿತೆಗಳನ್ನು ಕನ್ನಡ ಭಾಷೆಯಲ್ಲಿ ತರ್ಜುಮೆ ಮಾಡಿರುವುದು ಅತ್ಯಂತ ಮಹತ್ವದ ಕಾರ್ಯವಾಗಿದೆ. ಇದರಿಂದ ಜನಸಾಮಾನ್ಯರಿಗೆ , ಗ್ರಾಮೀಣ ಪ್ರದೇಶದ ಜನರೂ ಈ ಕಾನೂನುಗಳನ್ನು ಅರ್ಥಮಾಡಿಕೊಂಡು, ಅವಶ್ಯಕತೆಯಿದ್ದಾಗ ಬಳಕೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ರಿಯಾಯತಿ ದರದಲ್ಲಿ ಕನ್ನಡ ಆವೃತ್ತಿಗಳು ಮಾರಾಟ
ಹಲವು ಪ್ರಮುಖ ಕಾನೂನುಗಳ ಜೊತೆಗೆ ಕೃಷ್ಣಾ ಜಲವಿವಾದ, ಕಾವೇರಿ ಜಲವಿವಾದ ಸೇರಿದಂತೆ ಪ್ರಮುಖ ಅಂತರರಾಜ್ಯ ನ್ಯಾಯಮಂಡಳಿಯ ತೀರ್ಪುಗಳು, ವರದಿಗಳು ಸಹ ಕನ್ನಡದಲ್ಲಿ ಲಭ್ಯವಿದೆ. ಇವುಗಳು ಸರ್ಕಾರದ ಗ್ರಂಥಾಲಯಗಳಲ್ಲಿ ಜನರ ಬಳಕೆಗೆ ಲಭ್ಯವಾಗಬೇಕು. ಪ್ರತಿಯೊಂದು ತಾಲ್ಲೂಕು ಕಚೇರಿ ಹಾಗೂ ಪೊಲೀಸ್ ಠಾಣೆಗಳಲ್ಲಿಯೂ ಗೃಹ ಇಲಾಖೆ ಒದಗಿಸಬೇಕು. ಇವುಗಳನ್ನು ವೆಬ್‍ಸೈಟ್‍ಗಳಲ್ಲಿ ಸಾರ್ವಜನಿಕರಿಗೆ ಸುಲಭವಾಗಿ ದೊರೆಯುವಂತೆ ವ್ಯವಸ್ಥೆಗೊಳಿಸಬೇಕು. ಈ ಸಂಹಿತೆಗಳ ಕನ್ನಡ ಆವೃತ್ತಿಗಳನ್ನು ರಿಯಾಯತಿ ದರದಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡುವ ವ್ಯವಸ್ಥೆಯನ್ನು ಮಾಡಲಾಗುವುದು ಎಂದರು.