ಸದರ್ನ್ ಸ್ಮಾಷರ್ಸ್ ತಂಡಕ್ಕೆ ವಾಡೇಕರ್ ಟ್ರೋಫಿ

Advertisement

ಹುಬ್ಬಳ್ಳಿ: ಮೂರು ದಿನಗಳ ಕಾಲ ನಗರದಲ್ಲಿ ನಡೆದ ವಿಕಲಚೇತನರ ರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸದರ್ನ್ ಸ್ಮಾಷರ್ಸ್ ತಂಡವು ೬೦ ರನ್‌ಗಳ ದಾಖಲಿಸಿ ಅಜಿತ್ ವಾಡೇಕರ್ ಟ್ರೋಫಿ ಗಳಿಸಿತು. ವೆಸ್ಟರ್ನ್ ರೇಂಜರ್ಸ್ ತಂಡವು ರನ್ನರ್ ಅಪ್ ಆಗಿ ಹೊರ ಹೊಮ್ಮಿತು. ಟ್ರೋಫಿ ಗಳಿಸಿದ ಸದರ್ನ್ ಸ್ಮಾಷರ್ಸ್ ತಂಡಕ್ಕೆ ೨.೫೦ ಲಕ್ಷ ಚೆಕ್‌ನ್ನು ಆಯೋಜಕರು ವಿತರಣೆ ಮಾಡಿದರು.
ಇಲ್ಲಿನ ರಾಜನಗರದಲ್ಲಿರುವ ಕೆಎಸ್‌ಸಿಎ ಕ್ರೀಡಾಂಗಣ, ಜಿಮ್ಖಾನ್ ಮೈದಾನ ಸೇರಿ ಮೂರು ಕಡೆಗಳಲ್ಲಿ ಕಳೆದ ಮೂರು ದಿನಗಳಿಂದ ಪಂದ್ಯಗಳು ನಡೆದಿದ್ದವು. ಒಟ್ಟು ೧೮ ತಂಡಗಳು ಭಾಗವಹಿಸಿದ್ದವು. ಮುಂಬೈನ್ ಅಖಿಲ ಭಾರತ ದೈಹಿಕ ಅಂಗವಿಕಲರ ಸಂಸ್ಥೆ, ಕರ್ನಾಟಕ ಜಿಮ್ಖಾನ ಅಸೋಸಿಯೇಶನ್ ಜಂಟಿಯಾಗಿ ಅಜಿತ್ ವಾಡೇಕರ್ ಟ್ರೋಫಿ ರಾಷ್ಟ್ರಮಟ್ಟದ ಅಂಗವಿಕಲರ ಕ್ರಿಕೆಟ್ ಪಂದ್ಯವನ್ನು ನಗರದಲ್ಲಿ ಆಯೋಜಿಸಲಾಗಿತ್ತು.
ರೇಖಾ ಅಜಿತ್ ವಾಡೇಕರ್, ಪ್ರಸಾದ ದೇಸಾಯಿ, ವಿನೋದ ದೇಶಪಾಂಡೆ, ಅಶೋಕ ವಾಡೇಕರ್, ಬ್ರಿಜೇಶ್ ಸೋಲ್ಕರ್, ಶಿವಾನಂದ ಗುಂಜಾಳ, ಬಾಬಾ ಬೂಸದ ಹಾಗೂ ಇತರರಿದ್ದರು.
ಪಂದ್ಯದ ವಿವರ: ಮೊದಲು ಬ್ಯಾಟ್ ಮಾಡಿದ ಸದರ್ನ್ ಸ್ಮಾಷರ್ಸ್ ತಂಡವು ನಿಗದಿತ ೨೦ ಓವರ್‌ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು ೧೯೭ ರನ್ ಗಳಿಸಿತು. ನಂತರ ಬ್ಯಾಟ್ ಮಾಡಿದ ವೆಸ್ಟರ್ನ್ ರೇಂಜರ್ಸ್ ತಂಡವು ೨೦ ಓವರ್‌ಗಳಲ್ಲಿ ೭ ವಿಕೆಟ್ ಕಳೆದುಕೊಂಡು ೧೩೭ ರನ್ ಗಳಿಸುವಲ್ಲಿ ಮಾತ್ರ ಸಾಧ್ಯವಾಯಿತು.