ಆಪ್ತ-ಸಮಾಲೋಚನೆಗೆ ಬಂದಿದ್ದ ಆ ಪೋಷಕರು ಸುಮಾರು ಮಧ್ಯ ವಯಸ್ಸನ್ನು ದಾಟಿದವರು. ಅವರ ಒಬ್ಬನೇ ಮಗ ಆಂತರಿಕ ಪರೀಕ್ಷೆಯಲ್ಲಿ ಒಂದು ವಿಷಯದಲ್ಲಿ ಅನುತ್ತೀರ್ಣನಾಗಿದ್ದಾನೆ ಎಂದು ಅವರಿಗೆ ಗೊತ್ತಾದ ತಕ್ಷಣ ಬಂದಿದ್ದರು. ತುಂಬಾ ಆತಂಕಕ್ಕೆ ಒಳಗಾಗಿದ್ದರು. ಸರ್ ನಮ್ಮ ಮಗನಿಗೆ ಸ್ವಲ್ಪ ಸಮಾಲೋಚನೆ ಮಾಡುತ್ತೀರಾ'' ಎಂದು ಕೇಳಿದರು. ಮಗನ ಬಗ್ಗೆ ಸ್ವಲ್ಪ ವಿವರವಾಗಿ ಹೇಳಿ ಅಂದಾಗ ಅವರು ಅಂದಿದ್ದಿಷ್ಟು: ಎಲ್.ಕೆ.ಜಿ.ಯಿಂದ ಹನ್ನೆರಡನೇ ತರಗತಿಯವರೆಗೆ ಸದಾ ತರಗತಿಯಲ್ಲಿ ಮೊದಲ ಸ್ಥಾನದಲ್ಲಿ ಬರುತ್ತಿದ್ದ ಮಗ ಈಗ ಇಂಜಿನಿಯರಿಂಗ್‌ಗೆ ಬಂದ ತಕ್ಷಣ ಯಾಕೋ ಮಂಕಾಗಿದ್ದಾನೆ. ಈಗ ಅಷ್ಟೊಂದು ಚೆನ್ನಾಗಿ ಓದುತ್ತಿಲ್ಲ, ಮೊನ್ನೆ ನಡೆದ ಆಂತರಿಕ ಪರೀಕ್ಷೆಯ ತಯಾರಿಯಲ್ಲೇ ಅವನು ತಡವರಿಸುತ್ತಿದ್ದ. ಆಗಲೇ ಅಂದುಕೊಂಡಿದ್ದೆ, ಇವನು ದಾರಿ ತಪ್ಪುತ್ತಿದ್ದಾನೆ ಅಂತ. ಅವತ್ತೇ ಅವನಿಗೆ ಕೂರಿಸಿಕೊಂಡು ಬೈದಿದ್ದೆ. ಕೊನೆಗೆ ರಾತ್ರಿಯಿಡೀ ಕುಳಿತು ಓದಿದ್ದ, ಆದರೂ ಆ ಪರೀಕ್ಷೆಯಲ್ಲಿ ಉತ್ತೀರ್ಣನಾಗಿಲ್ಲ, ನಮ್ಮ ಮನೆಯವರು ಇವನ ಪರೀಕ್ಷೆಯ ದಿನ ಆಫೀಸ್‌ಗೆ ರಜಾ ಹಾಕಿ ಅವನನ್ನು ಕಾಲೇಜಿಗೆ ಬಿಟ್ಟು ಬಂದಿದ್ದರು. ನಿಮ್ಮ ಮಗನನ್ನು ಕರೆಸಿ, ನಾನು ಮಾತನಾಡುತ್ತೇನೆ ಎಂದೆ. ಮಗನನ್ನು ಕರೆದುಕೊಂಡು ಬಂದರು. ತುಂಬಾ ನಾಜೂಕಾಗಿ ಡ್ರೆಸ್ ಧರಿಸಿದ್ದ ಅವನ ವಯಸ್ಸಿನವರಿಗಿಂತಲೂ ದಪ್ಪನಾಗಿದ್ದ, ಎತ್ತರದ ಹುಡುಗನಾಗಿದ್ದರಿಂದ ಬೆನ್ನು ಸ್ವಲ್ಪ ಗೂನಾಗಿತ್ತು. ಅಗತ್ಯವೆನಿಸಿದ ಪ್ರಶ್ನೆಗಳನ್ನು ಕೇಳಿಯಾದ ಮೇಲೆ, ನಾನು ಕೇಳಿದ ಪ್ರಶ್ನೆಗಳಿಗೆ ಆತ ಸ್ವಲ್ಪ ಕಸಿವಿಸಿಗೊಂಡಿದ್ದರೂ ಅವನಲ್ಲೇನು ಕೊರತೆಯಿದೆ ಎಂದು ನನಗನಿಸಲಿಲ್ಲ. ಪೋಷಕರದ್ದು ಅತಿಯಾದ ನಿರೀಕ್ಷೆಯಿರಬೇಕು ಎಂದು ಭಾವಿಸಿ, ಅವನನ್ನು ತರಗತಿಗೆ ಕಳುಹಿಸಿ ಅವರ ಬಳಿಯೇ ಮಾತನಾಡಲು ಶುರು ಮಾಡಿದೆ. ನೋಡಿ, ನಿಮ್ಮ ಮಗನನ್ನು ನೋಡಿದಾಗ ಅವನು ಮಾನಸಿಕವಾಗಿ ಆರೋಗ್ಯವಾಗಿದ್ದಾನೆ ಅಂತ ನನಗನ್ನಿಸಿದೆ. ಕೇವಲ ಒಂದು ವಿಷಯದಲ್ಲಿ ಆಂತರಿಕ ಪರೀಕ್ಷೆಯಲ್ಲಿ ಚೆನ್ನಾಗಿ ಮಾಡಿಲ್ಲ ಎಂದಾಕ್ಷಣ ಅವನು ದಾರಿ ತಪ್ಪುತ್ತಿದ್ದಾನೆ ಎಂದುಕೊಳ್ಳುವುದು ಆರೋಗ್ಯಕರವಾದ ಲಕ್ಷಣವಲ್ಲ. ಮುಂದೆ ಚೆನ್ನಾಗಿ ಮಾಡುತ್ತಾನೆ ಎಂದೆ. ಅದಕ್ಕೆ ಆ ಹುಡುಗನ ತಾಯಿ ಅಳಲಿಕ್ಕೆ ಶುರು ಮಾಡಿದರು.
ಇಲ್ಲ ಸರ್ ಅವನಿಗೆ ಎಲ್ಲವನ್ನೂ ಕೊಟ್ಟಿದ್ದೇವೆ, ಯಾವುದಕ್ಕೂ ಕಡಿಮೆ ಮಾಡಿಲ್ಲ. ಆದರೂ ಉತ್ತೀರ್ಣನಾಗಿಲ್ಲ ಎಂದರೆ ಏನರ್ಥ? ಬೇರೆ ಪೋಷಕರ ಹಾಗೆ ಅವನಿಗೆ ಓದಲು ಹೇಳಿ, ನಾವು ಸಿನಿಮಾ ನೋಡುವುದು, ಮೊಬೈಲ್‌ನಲ್ಲಿ ಹಾಡು ಕೇಳುವುದು ಮಾಡುವುದಿಲ್ಲ, ನಾವೂ ಕೂಡ ಅವನ ಬಳಿಯೇ ಕುಳಿತಿರುತ್ತೇವೆ. ಅವನಿಗೆ ಪರೀಕ್ಷೆ ಹತ್ತಿರದಲ್ಲಿದೆ ಎಂದು ನಾವು ಕೂಡ ಎಲ್ಲಿಯೂ ಆಚೆ ಹೋಗುವುದಿಲ್ಲ. ಇಷ್ಟೆಲ್ಲಾ ಅವನಿಗೋಸ್ಕರ ಮಾಡಿದರೂ ಅವನು ಪರೀಕ್ಷೆಯಲ್ಲಿ ಡುಮ್ಕಿ ಹೊಡೆದು ಈಗ ಏನೂ ಆಗದೆ ಇರುವ ಹಾಗೆ ಕುಳಿತಿರುವುದನ್ನು ನೋಡಿದರೆ ನಮಗೇ ಭಯವಾಗುತ್ತಿದೆ. ಸರ್, ನನಗಂತೂ ಮೂರು ದಿನದಿಂದ ನಿದ್ದೆಯಿಲ್ಲ” ಎಂದರು.
ನಿಮ್ಮ ಮಗನ ಆರೋಗ್ಯ, ಬುದ್ಧಿಶಕ್ತಿ ಚೆನ್ನಾಗಿಯೇ ಇದೆ. ಅವನ ಬಗ್ಗೆ ಅತಿಯಾದ ಕಾಳಜಿ ಬೇಡ. ಅವನು ಚೆನ್ನಾಗಿಯೇ ಓದುತ್ತಾನೆ. ಅವನಿಗೆ ಅವನ ಗುರಿಯ ಬಗ್ಗೆ ಸ್ಪಷ್ಟ ನಿಲುವಿದೆ. ಎಲ್ಲ ಪರೀಕ್ಷೆಯಲ್ಲೂ ಅಗ್ರಶ್ರೇಯಾಂಕದಲ್ಲೇ ಬರಬೇಕು ಎನ್ನುವುದು ಅವಾಸ್ತವಿಕ ಗುರಿ. ಭವಿಷ್ಯದ ಘಟನೆಗಳನ್ನು ಅಂದಾಜಿಸಲಾಗುವುದಿಲ್ಲ, ಕೆಲವೊಮ್ಮೆ ಬಾಹ್ಯ ಕಾರಣಗಳಿಂದ, ನಮ್ಮ ಕೈಯಲ್ಲಿರದ ಕಾರಣಗಳಿಂದ ಅನುತ್ತೀರ್ಣಗೊಳ್ಳಬಹುದು. ಅದರಲ್ಲಿ ಯಾವ ಅಪರಾಧ, ಸ್ವ-ವಂಚನೆಯೂ ಇಲ್ಲ.
ಅನುತ್ತೀರ್ಣಕ್ಕೆ ತಾರ್ಕಿಕ ಕಾರಣಗಳಿದ್ದರೆ ಅವನನ್ನು ದೂಷಿಸಬೇಡಿ. ಮುಂದೆ ಪ್ರಯತ್ನಿಸು ಎಂದು ಹುರಿದುಂಬಿಸಿ. ಆಗ ಅವನು ಖುಷಿಯಾಗಿ ಓದುತ್ತಾನೆ. ಒಮ್ಮೆ ಅನುತ್ತೀರ್ಣಗೊಂಡರೆ ಆಕಾಶ ಕಳಚಿ ಬೀಳುವುದಿಲ್ಲ ಎಂದು ಅವನಿಗೆ ಮನವರಿಕೆ ಮಾಡಿ. ಅದು ಅವನ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಆದರೆ ನೀವು ಮಾಡುತ್ತಿರುವುದು ಅವನು ಅನುತ್ತೀರ್ಣಗೊಳ್ಳಲೇಬಾರದು ಎನ್ನುವ ಮನೋಭಾವನೆ. ಸೋಲುವುದು ಸಹಜ ಎಂದು ನಿಮ್ಮ ಮಗನಿಗೆ ಮನವರಿಕೆ ಮಾಡಿ. ಅದರಲ್ಲಿ ಯಾವ ತಪ್ಪು, ಅಪರಾಧ, ಸ್ವ-ವಂಚನೆಯೂ ಇಲ್ಲ.ಹಾಗಿದ್ದರೆ ಕೆಲವೊಮ್ಮೆ ಚಿಕ್ಕ ವಯಸ್ಸಿನಲ್ಲಿ ಅನುತ್ತೀರ್ಣರಾದ ಹುಡುಗರು ಮುಂದೆ ಆತ್ಮವಿಶ್ವಾಸ ಕಳೆದುಕೊಳ್ಳುತ್ತಾರಲ್ಲ ಅದಕ್ಕೆ ಏನನ್ನುತ್ತೀರಿ'' ಎಂದು ಕೇಳಿದರು. ಹೌದು, ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ, ಅವರನ್ನು ಹೀಯಾಳಿಸಿ, ಅವರು ಸೋತಿದ್ದು ಅವರ ಸೋಮಾರಿತನದಿಂದ ಅಥವಾ ಅವರ ಕೈಯಲ್ಲಿ ಏನೂ ಗೆಲ್ಲಲಾಗುವುದಿಲ್ಲ ಎಂದು ಅವರ ತುಂಬ ಹತ್ತಿರದವರು ಹೇಳುತ್ತಿದ್ದಾಗ ಆ ಹುಡುಗರ ಆತ್ಮವಿಶ್ವಾಸ ಕುಗ್ಗುತ್ತದೆ. ಅವರು ಮುಂದೆಂದೂ ಗೆಲ್ಲುವ ಪ್ರಯತ್ನವನ್ನೂ ಮಾಡುವುದಿಲ್ಲ. ಆದರೆ ಅದರ ಬದಲಾಗಿ ಅವರನ್ನು ಹೀಯಾಳಿಸದೆ, ಹುರಿದುಂಬಿಸಿ, ಇನ್ನೂ ಪ್ರಯತ್ನಪಡು ಎಂದು ಹೇಳಿದಾಗ ಅವರು ಸೋಲನ್ನೇ ಗೆಲುವಿನ ಮೆಟ್ಟಿಲನ್ನಾಗಿಸಿಕೊಳ್ಳುತ್ತಾರೆ.
ಯಾಕೆ ಸರ್, ನೀವು ಸಕಾರಾತ್ಮಕವಾಗಿ ಯೋಚಿಸುವುದಿಲ್ಲ, ಸೋಲುವುದೂ ಒಳ್ಳೆಯದೇ ಅಂತ ಹೇಳುತ್ತೀರಲ್ಲ? ಎಂದು ಅವರ ಪತ್ನಿಯು ಕೇಳಿದರು.
ನೋಡಿ, ಸಕಾರಾತ್ಮಕ ಚಿಂತನೆಗೂ ಇತಿ-ಮಿತಿಗಳಿವೆ. ನಾವ್ಯಾರೂ ಸರ್ವಶಕ್ತರಲ್ಲ. ಕೇವಲ ಸರ್ವಶಕ್ತರಾದವರು ಮಾತ್ರ ತಾನು ಸೋಲುವುದಿಲ್ಲ ಎನ್ನುತ್ತಾನೆ. ಜೀವನದ ಬೇರೆ-ಬೇರೆ ಸಂದರ್ಭಗಳಲ್ಲಿ, ಅನಿಶ್ಚಿತ ಸಮಯದಲ್ಲಿ ನಮ್ಮ ಎಲ್ಲ ಪ್ರಯತ್ನದ ನಡುವೆಯೂ ನಮಗೆ ಸೋಲಾಗಬಹುದು. ಆ ಸೋಲು ನಮ್ಮ ವೈಯಕ್ತಿಕ ಗುಣಗಳಿಂದಲ್ಲದೆ, ಯಾದೃಚ್ಛಿಕ ಕಾರಣಗಳಿಂದ ಆಗಿರಬಹುದು, ಆ ಸೋಲು ತುಂಬಾ ಬೆಲೆಯುಳ್ಳದ್ದಾಗಿರಬಹುದು. ಆ ಸಮಯದಲ್ಲಿ, ಆ ಸೋಲನ್ನು ಒಪ್ಪಿಕೊಳ್ಳಲು ನಾವು ಸಿದ್ಧರಾಗಿರುವುದಿಲ್ಲ. ಅದು ಖಿನ್ನತೆಗೆ, ಆತ್ಮಹತ್ಯೆಗೆ ಕಾರಣವಾಗಬಹುದು. ಅದಕ್ಕಾಗಿ, ವಿದ್ಯಾರ್ಥಿಗಳಿಗೆ, ನಮ್ಮ ಮಕ್ಕಳಿಗೆ ಸೋಲಿನ ಅನುಭವವಿದ್ದರೆ, ಆ ಸೋಲನ್ನು ಒಪ್ಪಿಕೊಳ್ಳಲು ಕಲಿಸಿದರೆ, ಅದು ಕೇವಲ ನಮ್ಮ ಪ್ರಯತ್ನಕ್ಕೆ ಸೋಲೇ ಹೊರತು, ನಮ್ಮ ಅಸ್ಮಿತೆಗೆ, ನಮ್ಮ ವ್ಯಕ್ತಿತ್ವಕ್ಕೆ ಆದ ಸೋಲಲ್ಲ ಎಂದು ಮನವರಿಕೆ ಮಾಡಿಕೊಟ್ಟಾಗ ಅದು ಅವರ ಆತ್ಮವಿಶ್ವಾಸವನ್ನು ಹೆಚ್ಚು ಮಾಡುತ್ತದೆ. ಎಂತಹ ಸಂದರ್ಭದಲ್ಲೂ ಎದೆಗುಂದದೆ ಮುನ್ನಡೆಯುವ, ಸೋತರೂ ಅದರಿಂದ ಹತಾಶರಾಗದೆ, ಪುನಃ ಪ್ರಯತ್ನ ಮಾಡುವ ನಂಬಿಕೆಯನ್ನು ಹುಟ್ಟುಹಾಕುತ್ತದೆ ಎಂದೆ. ನನ್ನ ಮುಂದೆ ಕುಳಿತ ಪೋಷಕರ ಕಣ್ಣು ಒದ್ದೆಯಾಗಿತ್ತು.