ಸಂಸಾರದ ವ್ಯಾಮೋಹ ಹೆಚ್ಚಾಗದಿರಲಿ….

ಗುರುಬೋಧೆ
Advertisement

ಸಂಸಾರ ಎನ್ನುವ ಶಬ್ದವನ್ನು ನಾವು ಯಾವಾಗಲೂ ಬಳಸುತ್ತಲೆ ಇರುತ್ತೇವೆ. ಅವರ ಸಂಸಾರ ಚೆನ್ನಾಗಿದೆ. ಅವರ ಸಂಸಾರ ಕೆಟ್ಟಿದೆ. ಅವರು ಸರಿಯಾದ ರೀತಿಯಲ್ಲಿ ಸಂಸಾರ ಮಾಡುತ್ತಾರೆ. ಅಥವಾ ಅವರಿಗೆ ಸಂಸಾರ ಮಾಡಲು ಬರುವುದಿಲ್ಲ ಎಂದು ಸಾಮಾನ್ಯವಾಗಿ ಹೇಳುತ್ತೇವೆ.
ಹಾಗಾದರೆ ಸಂಸಾರ ಎಂದರೇನು?. ಇದರ ಅರ್ಥ ವ್ಯಾಪ್ತಿ ಕುರಿತು ಅನುಬಾವಿಗಳು ಚಿಂತಿಸುತ್ತಾರೆ. ಅದನ್ನು ಏಕೆ ಮಾಡಿದರು, ಯಾವ ಕಾರಣಕ್ಕೆ ಮಾಡಿದರು ಎಂದು ವಿಚಾರ ಮಾಡಿದಾಗ ನಮಗೆ ಅನಿಸುತ್ತದೆ, ಇದನ್ನು ಯಾರೂ ಮಾಡಿಲ್ಲ. ಇದರ ಕಷ್ಟ ಸುಖವನ್ನು ನಾವೇ ಖುದ್ದಾಗಿ ಆಹ್ವಾನಿಸಿಕೊಂಡು ನಿರ್ಮಿಸಿಕೊಂಡಿದ್ದೇವೆ. ಶರಣರು, ಸಂತರೂ ಇದನ್ನೆ ಪರಿಭಾವಿಸುತ್ತಾರೆ.
ಒಂದರ್ಥದಲ್ಲಿ ಸಂಸಾರ ಎಂದರೆ ಬೇರೆ ಏನೂ ಅಲ್ಲ. ನಾನು, ನನ್ನದು, ನನ್ನ ಹೆಂಡತಿ, ನನ್ನ ಸಂಪತ್ತು ಎಂಬ ವ್ಯಾಮೋಹಕ್ಕೆ ಸಂಸಾರ ಎಂದು ಕರೆಯುತ್ತೇವೆ. ಒಟ್ಟಿನಲ್ಲಿ ಮೋಹ, ಮಮಕಾರಗಳನ್ನು ಒಳಗೊಂಡ ಪ್ರಪಂಚಕ್ಕೆ ಸಂಸಾರ ಎಂದು ಕರೆಯುತ್ತೇವೆ. ಈ ಸಂಸಾರ ನಮಗೆ ಯಾವ ರೀತಿ ಅಂಟಿಕೊಂಡಿದೆ ಎಂದರೆ, ಇದರಿಂದ ಹೊರಗೆ ಬರಲು ಕಷ್ಟಸಾಧ್ಯ. ಹಾಲಿನಲ್ಲಿ ಸಕ್ಕರೆ ಬೆರೆತ ಹಾಗೆ, ನಮ್ಮ ಜೊತೆ ಬಂದು ನಮ್ಮನ್ನು ಬಿಟ್ಟು ಹೋಗದ ಹಾಗೆ. ಅದು ಬಂಧನದಲ್ಲಿದೆ. ಮನುಷ್ಯ ಯಾವುದೇ ಒಂದು ಚಟಕ್ಕೆ ಅಂಟಿಕೊಂಡಿದ್ದರೆ ಅದನ್ನು ಬಿಡಿಸಲು ಹೇಗೆ ಅಸಾಧ್ಯವೋ ಅದೇ ರೀತಿ ಸಂಸಾರದ ವ್ಯಾಮೋಹ ಬಿಡಲು ಬಲು ಕಷ್ಟ.
ಯಾರಿಗಾದರು ದೆವ್ವ ಬಡಿದುಕೊಂಡಿದ್ದರೆ ಯಾವುದೇ ಮಂತ್ರವಾದಿಯನ್ನು ಕರೆಯಿಸಿ ದೆವ್ವ ಬಿಡಿಸಬಹುದು ಎಂದೆನ್ನುತ್ತಾರೆ. ಅಂದರೆ, ಸಂಸಾರ ಎಂಬ ದೆವ್ವ ಬಡಿದವರಿಗೆ ಇದರಿಂದ ಹೊರಬರಬೇಕಾದರೆ ಕಷ್ಟವಾಗುತ್ತದೆ….
ಸಂಸಾರದ ಮೋಹದ ಬಲೆಗೆ ಬಿದ್ದ ಮನುಷ್ಯ, ಮನುಷ್ಯತ್ವ ಮರೆತು ಕೆಟ್ಟ ಕರ್ಮ ಮಾಡಿ ಪರಿತಪಿಸುತ್ತಾನೆ. ಹಾಗೆಯೆ ಸಂಸಾರದ ಭರದಲ್ಲಿ ಸಂಸ್ಕಾರ ಮರೆಯಬಾರದು. ಈ ಸಂಸಾರದ ಮೋಹದ ಬಲೆಯಿಂದ ಹೊರಗೆ ಬರಬೇಕಾದರೆ ಸೃಷ್ಟ ಗುರುವಿನ ಮಾರ್ಗದರ್ಶನದಿಂದ ಮಾತ್ರ ಸಾಧ್ಯ. ಹಾಗೆಂದರೆ, ಸಂಸಾರ ಬಿಟ್ಟು ಸನ್ಯಾಸಿ ಆಗುವ ಅವಶ್ಯಕತೆ ಇಲ್ಲ. ಪ್ರಪಂಚದೊಂದಿಗೆ ಪಾರಮಾರ್ಥ ಕಾಣು ಎಂದು ಅನುಭಾವಿಗಳು ಹೇಳುತ್ತಾರೆ. ಹಜರತ್ ಮೊಹಮ್ಮದ್ ಪೈಗಂಬರ್ ಅವರು ತನ್ನ ಕುಟುಂಬದ ಜೊತೆಗೆ ಪ್ರವಾದಿತ್ವ, ಧರ್ಮ ಬೋಧನೆ, ನೈತಿಕ ಮಾರ್ಗದರ್ಶನ ಮಾಡುತ್ತಿದ್ದರು. ಬಸವಣ್ಣನವರು ಕೂಡ ಕಾಯಕವೇ ಕೈಲಾಸ ಎಂದು ಬೋಧಿಸಿ, ಕಾಯಕದೊಂದಿಗೆ ಸತ್ಕರ್ಮಗಳನ್ನು ಹೇಗೆ ಮಾಡಬೇಕು ಎಂಬುವುದನ್ನು ಪ್ರತಿಪಾದಿಸುತ್ತಾರೆ.
ಬಿಜ್ಜಳ ರಾಜನ ಪ್ರಧಾನಮಂತಿಯಾಗಿದ್ದರೂ ಅಣ್ಣ, ತನ್ನ ಕುಟುಂಬದೊಂದಿಗೆ ಜೀವನ ಕಳೆಯುತ್ತಿದ್ದರು. ಹೀಗಾಗಿ ಸಂಸಾರ ಯಾರಿಗೂ ಬಿಟ್ಟಿಲ್ಲ. ಅಥವಾ ನಾವ್ಯಾರೂ ಸಂಸಾರವನ್ನು ಬಿಟ್ಟಿಲ್ಲ. ಅದರ ವ್ಯಾಮೋಹ ಮಾತ್ರ ಕೊಂಚ ಕಡಿಮೆ ಮಾಡಿ ಭಗವಂತನ ಸ್ತುತಿಯೊಂದಿಗೆ ಬಾಳು ಸಾರ್ಥಕವಾಗಲಿ.