ಸಂವಿಧಾನ ರಕ್ಷಣೆಗೆ ಮೋದಿ ಕೆಳಗಿಳಿಸಿ

Advertisement

ಬೀದರ್: ದೇಶದಲ್ಲಿ ಪ್ರಜಾಪ್ರಭುತ್ವದ ಉಳಿವಿಗಾಗಿ, ಸಂವಿಧಾನದ ರಕ್ಷಣೆಗಾಗಿ ಹಾಗೂ ಮುಂದಿನ ಪೀಳಿಗೆಯ ಉಜ್ವಲ ಭವಿಷ್ಯಕ್ಕಾಗಿ ಎಚ್ಚೆತ್ತುಕೊಂಡು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರನ್ನು ಅಧಿಕಾರ­ದಿಂದ ಕೆಳಗಿಳಿಸುವ ಕೆಲಸ ಜನರು ಮಾಡಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಲ್ಲಿ ಕರೆ ನೀಡಿದರು.
ಬೀದರ್‌ನಲ್ಲಿ ಮಂಗಳವಾರ ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ವಿವಿಧ ಸಂಘಟನೆಗಳಿಂದ ೩೭೧(ಜೆ) ತಿದ್ದುಪಡಿಯ ದಶಮಾನೋತ್ಸವ ಹಾಗೂ ಇದಕ್ಕೆ ಕಾರಣರಾದ ತಮಗೆ ನೀಡಿದ ಅಭಿನಂದನಾ ಸಮಾ­ರಂ­ಭವನ್ನು ಉದ್ಘಾಟಿಸಿ, ದೇಶದಲ್ಲಿ ಮತ್ತೊಮ್ಮೆ ಮನುವಾದ ತರುವುದು ಬಿಜೆಪಿ, ಆರ್‌ಎಸ್‌ಎಸ್ ಉದ್ದೇಶವಾಗಿದ್ದರೆ, ಇದನ್ನು ತಡೆಯುವುದು ನಮ್ಮ ಉದ್ದೇಶವಾ­ಗಿದೆ. ದೇಶದಲ್ಲಿ ಬಸವೇಶ್ವರರ ತತ್ವ, ನಾರಾಯಣಗುರು ಅವರ ತತ್ವದ ಮೇಲೆ ಎಲ್ಲಾ ಜಾತಿ-ಧರ್ಮದವರು ಒಂದೇ ಎಂದು ತಿಳಿದು ಸಂವಿಧಾನದ ಮಾರ್ಗದಲ್ಲಿ ಸಾಗಬೇಕೆಂದು ನಾವು ಬಯಸಿದರೆ, ಬಿಜೆಪಿಯವರು ಅದನ್ನು ಸಹಿಸುವುದಿಲ್ಲ ಎಂದು ಟೀಕಿಸಿದರು.
ಸಂವಿಧಾನ ಪ್ರಕಾರ ನಡೆದುಕೊಂಡು ಬರುವಂತಹ ಸಂಸ್ಥೆಗಳಾದ ಚುನಾವಣಾ ಆಯೋಗ, ಐಟಿ, ಇಡಿ ಇವುಗಳೆಲ್ಲವನ್ನೂ ಬಿಜೆಪಿ, ಆರ್‌ಎಸ್‌ಎಸ್, ಮೋದಿ ತಮ್ಮ ಹಿಡಿತದಲ್ಲಿಟ್ಟುಕೊಳ್ಳುತ್ತಿದ್ದಾರೆ. ದೇಶದಲ್ಲಿ ಬಡವರಿಗಾಗಿ ೮೦ ಕೋಟಿ ಜನರಿಗೆ ಉಚಿತ ಆಹಾರ ಕೊಡುತ್ತಿದ್ದೇನೆ ಎಂದು ಎಲ್ಲಿ ಹೋದರಲ್ಲಿ ದೊಡ್ಡ ದೊಡ್ಡ ಮಾತುಗಳಾಡುತ್ತಾರೆ. ನಿಮಗಿಂತ ಮುಂಚೆಯೇ ಸೋನಿಯಾಗಾಂಧಿ ಅವರು ಅನೇಕ ಕಾಯಿದೆಗಳು ಜಾರಿಗೆ ತಂದಿದ್ದರೆ, ಸಿದ್ದರಾಮಯ್ಯ ನೇತೃತ್ವದಲ್ಲಿ ನಾವು ಉಚಿತ ಅನ್ನಭಾಗ್ಯ ಕೊಟ್ಟಿದ್ದೇವೆ. ಬಿಜೆಪಿಯವರು ನಾವು ಮಾಡಿರುವ ಎಲ್ಲವನ್ನೂ ತಮ್ಮದೆಂದು ಹೇಳಿಕೊಳ್ಳುತ್ತಾರೆ ಎಂದ ಲೇವಡಿ ಮಾಡಿದರು. ಮೋದಿಯವರು ಹುಟ್ಟುವ ಮುಂಚೆಯೇ ನೆಹರು ಅವರು ದೇಶದಲ್ಲಿ ದೊಡ್ಡ ದೊಡ್ಡ ಕಾರ್ಖಾನೆಗಳು, ಏಮ್ಸ್, ಇಂಜಿನಿಯರಿಂಗ್ ಕಾಲೇಜುಗಳನ್ನು ತಂದಿದ್ದಾರೆ. ಅಂತಹ ಪಕ್ಷದ ನಾಯ­ಕರಿಗೆ ನೀವು ಬೈಯ್ಯುತ್ತೀರಿ. ನಮ್ಮ ಬಳಿ ಅಂತಹ ಶಕ್ತಿ ಇರುವುದರಿಂದಲೆ ನೀವು ನಮ್ಮ ಹಿಂದೆ ಬೀಳುತ್ತೀರಿ ಎಂದು ಹೇಳಿದರು
ಬಿಜೆಪಿಯವರು ಜನರನ್ನು ಹಾಗೂ ಧರ್ಮವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಇಂದು ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿವೆ. ಖಾಲಿ ಇರುವ ೩೦ ಲಕ್ಷ ಹುದ್ದೆಗಳನ್ನು ಭರ್ತಿ ಮಾಡುತ್ತಿಲ್ಲ. ಅದಕ್ಕೆ ಕಾರಣ, ಶೇ.೫೦ ರಷ್ಟು ಕೆಲಸಗಳು ಬಡವರ, ದಲಿತರ, ಹಿಂದುಳಿದ ಮಕ್ಕಳಿಗೆ ಸಿಗುತ್ತದೆ ಎಂಬ ಕಾರಣಕ್ಕಾಗಿ ಅದನ್ನು ಭರ್ತಿ ಮಾಡುವ ಕೆಲಸ ಮಾಡುತ್ತಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಭಾಲ್ಕಿಯ ಶ್ರೀ ಗುರುಬಸವ ಪಟ್ಟದ್ದೇವರು, ಶ್ರೀ ಬೆಲ್ದಾಳ್ ಶರಣರು, ಶ್ರೀ ವರಜ್ಯೋತಿ ಭಂತೆ, ನೆಲ್ಸನ್ ಸುಮಿತ್ರ, ಗ್ಯಾನಿ ದರ್ಬಾರಸಿಂಗ್, ಮಂತ್ರಿ ರಹೀಂ ಖಾನ್, ಶಾಸಕ ಬಿ.ಆರ್.ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಅರವಿಂದ ಕುಮಾರ ಅರಳಿ, ಡಾ. ಚಂದ್ರಶೇಖರ ಪಾಟೀಲ್, ಭೀಮರಾವ ಪಾಟೀಲ್, ಮಾಜಿ ಸಂಸದ ನರಸಿಂಗರಾವ್ ಸೂರ್ಯವಂಶಿ, ಮಾಜಿ ಶಾಸಕರಾದ ರಾಜಶೇಖರ ಪಾಟೀಲ್, ಅಶೋಕ ಖೇಣಿ, ಮುಖಂಡರಾದ ನರಸಿಂಗರಾವ್ ಸೂರ್ಯವಂಶಿ, ಬಸವರಾಜ ಬುಳ್ಳಾ, ಮಾವಳ್ಳಿ ಶಂಕರ್, ಕೆ. ಪುಂಡಲೀಕರಾವ್, ಡಾ. ಭೀಮಸೇನರಾವ್ ಶಿಂದೆ, ಯುವ ಮುಖಂಡ ಸಾಗರ್ ಖಂಡ್ರೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದತ್ತಾತ್ರಿ ಮೂಲಗೆ ಮತ್ತಿತರರಿದ್ದರು.