ಸಂಯುಮವಿಲ್ಲದ ಪ್ರತಿಭಟನೆ ಲೊಳಲೊಟ್ಟೆ

ಸಂಪಾದಕೀಯ
Advertisement

ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಗೆ ಅವಕಾಶ ಇದ್ದೇ ಇದೆ. ಆದರೆ ಪ್ರತಿಭಟನೆ ಮಾಡುವಾಗ ಶಿಸ್ತು ಸಂಯಮ ಪರಿಪಾಲನೆ ಮುಖ್ಯ. ಯಾರೇ ಪ್ರತಿಭಟನೆ ಮಾಡಲಿ ತಮ್ಮ ಉದ್ದೇಶವನ್ನು ಸ್ಪಷ್ಟಪಡಿಸಬೇಕು. ಅದು ಎಂದೂ ವಯುಕ್ತಿಕ ಆಗಿರಬಾರದು. ನಾವು ವಿಧಾನಸಭೆಯಲ್ಲಿ ಆಡಳಿತ ಪಕ್ಷಕ್ಕೆ ನೀಡು ವಷ್ಟು ಮಹತ್ವವನ್ನು ಪ್ರತಿಪಕ್ಷದವರಿಗೂ ನೀಡಿದ್ದೇವೆ. ಹೀಗಾಗಿ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಪ್ರವಾಹದಿಂದ ಆಗಿರುವ ಹಾನಿಯನ್ನು ವೀಕ್ಷಿಸಲು ಬಂದಾಗ ಅವರಿಗೆ ಹೆಜ್ಜೆಹೆಜ್ಜೆಗೂ ಅಡ್ಡಿ ಪಡಿಸುವುದು ಸರಿಯಲ್ಲ. ಕಪ್ಪು ಬಾವುಟ ಪ್ರದರ್ಶನ ತಪ್ಪಲ್ಲ. ಆದರೆ ಅವರು ಮುಂದೆ ಹೋಗುವುದಕ್ಕೆ ಅಡ್ಡಿಪಡಿಸುವುದು ಸರಿಯಲ್ಲ. ಅದು ಅನಾಗರಿಕ ವರ್ತನೆ. ಪ್ರಜಾಪ್ರಭುತ್ವದಲ್ಲಿ ಅಭಿವ್ಯಕ್ತಿ ಸ್ವಾತಂತ್ರ‍್ಯಕ್ಕೆ ಹೆಚ್ಚಿನ ಬೆಲೆ ನೀಡಿದ್ದೇವೆ. ಆದರೆ ಅದು ಸ್ವೇಚ್ಛಾಚಾರಕ್ಕೆ ತಿರುಗಬಾರದು. ಹಿಂದೆ ಪ್ರತಿಪಕ್ಷದ ನಾಯಕರಿಗೆ ಸರ್ಕಾರಿ ಸವಲತ್ತು ನೀಡಿರಲಿಲ್ಲ. ದೇವರಾಜ ಅರಸು ಕಾಲದಲ್ಲಿ ಪ್ರತಿಪಕ್ಷದ ನಾಯಕರಿಗೆ ಸಚಿವ ಸ್ಥಾನಮಾನ ನೀಡಲಾಯಿತು. ಅದು ಈಗಲೂ ಮುಂದುವರಿದಿದೆ. ರಾಜ್ಯದ ಆಗುಹೋಗುಗಳನ್ನು ಆಡಳಿತ ಪಕ್ಷ ನೋಡುವ ಹಾಗೆ ಪ್ರತಿಪಕ್ಷದವರೂ ಸಾಕ್ಷಾತ್ ಪರಿಶೀಲಿಸಲು ಅವಕಾಶವಿದೆ. ಅದರಿಂದ ವಿಧಾನಸಭೆಯಲ್ಲಿ ಚರ್ಚೆ ನಡೆದಾಗ ಜನಪ್ರತಿನಿಧಿಗಳು ತಮ್ಮ ಅನುಭವದ ಮೇಲೆ ನಿಜಾಂಶದ ಮೇಲೆ ಹೆಚ್ಚು ಬೆಳಕು ಚೆಲ್ಲಲು ಸಾಧ್ಯವಾಗುತ್ತದೆ. ಎಷ್ಟೋ ಬಾರಿ ಪ್ರತಿಪಕ್ಷಗಳು ಸಭಾತ್ಯಾಗ ಮಾಡುವುದುಂಟು. ಅದರಿಂದ ಹೆಚ್ಚು ಉಪಯೋಗವಾಗುವುದಿಲ್ಲ. ಅದಕ್ಕಿಂತ ಚರ್ಚೆಯಲ್ಲಿ ಸಕ್ರಿಯವಾಗಿ ಭಾಗವಹಿಸುವುದೇ ಉತ್ತಮ ಮಾರ್ಗ. ಚರ್ಚೆಯಲ್ಲಿ ಭಾಗವಹಿಸಬೇಕು ಎಂದರೆ ಪ್ರತಿಪಕ್ಷದವರು ಆಡಳಿತ ಪಕ್ಷದವರಷ್ಟೇ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಅತಿವೃಷ್ಟಿ ಮತ್ತು ಅನಾವೃಷ್ಟಿ ಆದಾಗ ಪ್ರತಿಪಕ್ಷದ ಸದಸ್ಯರೂ ಸ್ಥಳಕ್ಕೆ ಹೋಗಿ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಬೇಕು. ಆಗ ಜನರ ಸಮಸ್ಯೆಗಳಿಗೆ ಪರಿಹಾರ ತ್ವರಿತಗತಿಯಲ್ಲಿ ಲಭಿಸುತ್ತದೆ. ರಾಜಕೀಯ ಚರ್ಚೆಗಳು ಚುನಾವಣೆಗೆ ಸೀಮಿತಗೊಳ್ಳಬೇಕು. ಅಭಿವೃದ್ಧಿ ಕಾಮಗಾರಿಗಳಲ್ಲಿ ಆಡಳಿತ- ಪ್ರತಿಪಕ್ಷದವರು ಒಂದುಗೂಡಿ ಕೆಲಸ ಮಾಡಿದರೆ ಜೀವನದಲ್ಲಿ ಉತ್ತಮ ಗುಣಮಟ್ಟವನ್ನು ಕಾಯ್ದುಕೊಂಡು ಹೋಗುವುದು ಸುಲಭ. ಇದು ಪ್ರಜಾಪ್ರಭುತ್ವದ ಸಾರವೂ ಹೌದು. ಈಗ ಎಲ್ಲ ರಾಜಕೀಯ ಪಕ್ಷಗಳೂ ನಿಚ್ಚಳ ಬಹುಮತ ಪಡೆಯಬೇಕೆಂದು ಬಯಸುತ್ತವೆ. ಅದರ ಮೂಲಕ ಭಿನ್ನಮತವೇ ಇಲ್ಲದಂತೆ ಮಾಡುವ ಪ್ರಯತ್ನ ನಡೆಯುತ್ತದೆ. ಪ್ರಜಾಪ್ರಭುತ್ವ ದಿಂದ ಜನರಿಗೆ ಉತ್ತಮ ಪ್ರತಿಫಲ ಸಿಗಬೇಕು ಎಂದರೆ ಆಡಳಿತ- ಪ್ರತಿಪಕ್ಷಗಳು ಸಮಾನವಾಗಿರಬೇಕು. ಅದರಿಂದ ಯಾವುದೇ ಸಮಸ್ಯೆಯಾಗಲಿ ಎಲ್ಲ ದೃಷ್ಟಿಯಿಂದ ವಿಮರ್ಶೆಗೆ ಒಳಪಡುತ್ತದೆ. ಪ್ರಜಾಪ್ರಭುತ್ವದಲ್ಲಿ ಬಹುಮತವನ್ನು ಕಾಯ್ದುಕೊಂಡು ಹೋಗುವುದೇ ಮುಖ್ಯವಲ್ಲ. ಎಲ್ಲ ಅಭಿಪ್ರಾಯಗಳೂ, ದೃಷ್ಟಿಕೋನಗಳು ಒಂದುಗೂಡಬೇಕು. ಇದಕ್ಕೆ ಮುಕ್ತ ಚರ್ಚೆ ನಡೆಯಬೇಕು. ಆಗ ನಿಜವಾದ ಜನಾಭಿಪ್ರಾಯ ಮೂಡುತ್ತದೆ. ಇಲ್ಲದಿಲ್ಲಿ ಕೆಲವರ ಅಭಿಪ್ರಾಯವನ್ನೇ ಬೇರೆಯವರ ಮೇಲೆ ಹೇರಿದಂತಾಗುತ್ತದೆ. ಪ್ರತಿಪಕ್ಷದವರೂ ಕೂಡ ತಮ್ಮ ಜವಾಬ್ದಾರಿ ಅರಿತು ನಡೆಯುವುದು ಮುಖ್ಯ. ಟೀಕೆ ಮಾಡುವುದಷ್ಟೆ ನಮ್ಮ ಕೆಲಸ ಎಂದು ಮನಬಂದಂತೆ ಮಾತನಾಡಬಾರದು. ವಯುಕ್ತಿಕ ಟೀಕೆಗಳಿಗೆ ಮಿತಿ ಇರಬೇಕು. ಪ್ರತಿಪಕ್ಷದವರೂ ಜನರನ್ನು ಪ್ರತಿನಿಧಿಸುತ್ತಾರೆ ಎಂಬು ದನ್ನು ಮರೆಯಬಾರದು. ಈಗ ಆಡಳಿತ ಪಕ್ಷöದವರು ಪ್ರತಿಪಕ್ಷದವರ ಮಾತಿಗೆ ಬೆಲೆ ಕೊಡುವುದಿಲ್ಲ. ಪ್ರತಿ ಪಕ್ಷದವರು ಆಡಳಿತದವರ ಪ್ರತಿ ಹೆಜ್ಜೆಯನ್ನೂ ಬೇರೆ ರೀತಿಯಲ್ಲಿ ನೋಡುವುದನ್ನು ಬಿಡಬೇಕು. ಆಡಳಿತ-ಪ್ರತಿಪಕ್ಷದವರ ಮೂಲ ಉದ್ದೇಶ ಜನಹಿತ ಕಾಪಾಡುವುದು. ಅದು ಈಗ ಬಹುತೇಕ ಮಾಯವಾಗುತ್ತಿದೆ. ಜನಹಿತದ ಹೆಸರಿನಲ್ಲಿ ವಯುಕ್ತಿಕ ಟೀಕೆಗಳು ಸಾರ್ವಜನಿಕವಾಗಿ ಕೇಳಿ ಬರುತ್ತಿದೆ. ಇದು ಆರೋಗ್ಯ ಕರ ಲಕ್ಷಣವಲ್ಲ. ಪ್ರತಿಪಕ್ಷದ ನಾಯಕ ಸ್ಥಾನ ಮುಖ್ಯಮಂತ್ರಿ ಸ್ಥಾನದಷ್ಟೇ ಪ್ರಮುಖ. ಅದರಿಂದ ಸಿರಾಮಯ್ಯನವರು ಕೂಡ ತಮ್ಮ ರೀತಿ-ನೀತಿಯಲ್ಲಿ ಘನತೆ ಗೌರವ ಉಳಿಸಿಕೊಂಡು ಬೇರೆ ರಾಜ್ಯದವರು ನಮ್ಮ ಕಡೆ ತಿರುಗಿ ನೋಡುವಂತೆ ಮಾಡಬೇಕು. ಪಕ್ಷದ ಕಾರ್ಯ ಕರ್ತರು ಇರುವುದು ತಮ್ಮ ಪಕ್ಷದ ನೀತಿ-ಧೋರಣೆಗಳನ್ನು ಜನಸಾಮಾನ್ಯರಿಗೆ ತಿಳಿಸುವ ಹಾಗೂ ಕಷ್ಟಕಾಲದಲ್ಲಿ ಜನಸಾಮಾನ್ಯರಿಗ ನೆರವು ನೀಡುವ ಮತ್ತು ತಮ್ಮ ಪಕ್ಷö ಸರಿಯಾಗಿ ಸ್ಪಂದಿಸುವಂತೆ ನೋಡಿಕೊಳ್ಳಬೇಕು. ಈಗ ಎಲ್ಲ ಪಕ್ಷಗಳ ಕಾರ್ಯಕರ್ತರು ಶಿಸ್ತು, ಸಂಯಮವನ್ನು ಗಾಳಿಗೆ ತೂರಿದಂತೆ ಕಂಡು ಬರುತ್ತಿದೆ. ಸಮಾಜ ಘಾತುಕ ಶಕ್ತಿಗಳು ಪಕ್ಷದ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವ ಪರಿಸ್ಥಿತಿ ಎಲ್ಲ ಕಡೆ ಕಂಡು ಬರುತ್ತಿದೆ. ಆಂತರಿಕ ಪ್ರಜಾಪ್ರಭುತ್ವ ಎಲ್ಲ ಪಕ್ಷಗಳಲ್ಲಿ ಕುಸಿಯುತ್ತಿದೆ. ಅದರ ಪ್ರಭಾವ ಹೊರಗಡೆ ಹಿಂಸಾಚಾರ ಮತ್ತು ಅನಾರೋಗ್ಯಕರ ಪ್ರತಿಭಟನೆಗಳು ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಯಾವ ರಾಜಕೀಯ ಪಕ್ಷವೂ ಅಪವಾದವಾಗಿ ಉಳಿದಿಲ್ಲ. ಯಾವುದೇ ರಾಜಕೀಯ ಪಕ್ಷದ ಕಾರ್ಯಕರ್ತರು ಬೀದಿಗಿಳಿದರೆ ಜನ ಗೌರವದಿಂದ ಸ್ವಾಗತಿಸುವಂತೆ ಇರಬೇಕು. ಈಗ ಡಿಜಿಟಲ್ ಮಾಧ್ಯಮ ಜನಪ್ರಿಯಗೊಂಡಿದೆ. ಅದರ ಮೂಲಕ ಪ್ರತಿಯೊಂದು ರಾಜಕೀಯ ಪಕ್ಷ ತನ್ನ ನೀತಿ-ಧೋರಣೆಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಕೈಗೊಳ್ಳಬಹುದು. ಆಗ ಪ್ರಬುದ್ಧ ಸಮಾಜ ಕಟ್ಟಲು ಸಾಧ್ಯ.

editorial