ಸಂತ ಶರೀಫ, ಗುರುಗೋವಿಂದ ಭಟ್ಟರ ಮಹಾರಥೋತ್ಸವ

Advertisement

ಶಿಗ್ಗಾವಿ(ಗ್ರಾಮೀಣ): ಭಾವೈಕ್ಯದ ತಾಣವಾದ ತಾಲೂಕಿನ ಶಿಶುನಾಳ ಗ್ರಾಮದ ಪಂಚಾಗ್ನಿ ಮಠದಲ್ಲಿ ಸಂತ ಶರೀಫರು ಹಾಗೂ ಗುರುಗೋವಿಂದ ಭಟ್ಟರ ಮಹಾರಥೋತ್ಸವ ಸಾವಿರಾರು ಭಕ್ತರ ಸಡಗರ-ಸಂಭ್ರಮದ ನಡುವೆ ವಿಜೃಂಭಣೆಯಿಂದ ನೆರವೇರಿತು.
ವಿವಿಧ ಜಿಲ್ಲೆಗಳಿಂದ ಭಕ್ತರು ತಂಡೋಪತಂಡವಾಗಿ ಆಗಮಿಸಿದ್ದರು. ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಸತ್ಪುರುಷ ಸಂತ ಶಿಶುನಾಳ ಶರೀಫರು ಸರಳ ಸಾಲುಗಳಲ್ಲಿ ಸರ್ವ ಧರ್ಮದ ತಿರುಳು ಒಂದೇ ಎಂದು ಸಾರಿದವರು. ಪ್ರತಿವರ್ಷ ನಡೆಯುವ ಅವರ ಜಾತ್ರಾ ಮಹೋತ್ಸವಕ್ಕೆ, ಮಹಾರಥೋತ್ಸವಕ್ಕೆ ಎತ್ತಿನ ಬಂಡಿ ಮೂಲಕ ಭಕ್ತರು ಆಗಮಿಸುತ್ತಾರೆ. ಭಕ್ತರಲ್ಲಿ ಅನೇಕರು ಚಿಲುಮೆ ಸೇವನೆ ಮಾಡಿ ಶರೀಫರನ್ನು ಸ್ಮರಿಸಿದ್ದು ಸಾಮಾನ್ಯವಾಗಿತ್ತು.
ಶರೀಫ ಗಿರಿಯಲ್ಲಿ ಬೆಳಗ್ಗೆಯಿಂದ ನಡೆಯುವ ಧಾರ್ಮಿಕ ವಿಧಿವಿಧಾನಗಳು ಹಾಗೂ ವಿಶೇಷ ಪೂಜೆ ಬಳಿಕ ಭಕ್ತರು ಭಕ್ತಿಯಿಂದ ಕಟ್ಟಿಕೊಂಡು ಬಂದ ಅನ್ನದ ಬುತ್ತಿಯನ್ನೇ ಪ್ರಸಾದ ರೂಪದಲ್ಲಿ ನೀಡಲಾಗುತ್ತದೆ. ನೂಕುನುಗ್ಗಲು ನಡುವೆ ಅನ್ನ ಪ್ರಸಾದ ಪಡೆಯುತ್ತಿದ್ದ ದೃಶ್ಯ ಸಹಜವಾಗಿತ್ತು.
ಸಂಜೆ ನಡೆದ ಮಹಾರಥೋತ್ಸವಕ್ಕೆ ವಿಶೇಷ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ವಿಶ್ವಸ್ಥ ಸಮಿತಿಯ ಧರ್ಮದರ್ಶಿಗಳು, ಜನಪ್ರತಿನಿಧಿಗಳು ಹಾಗೂ ಮಠಾಧೀಶರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಶಿಗ್ಗಾವಿ ಪೊಲೀಸರು ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು.