ಉಡುಪಿ: ಇಲ್ಲಿನ ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆಯುತ್ತಿರುವ ಓವರ್ ಪಾಸ್ ಕಾಮಗಾರಿ ಪ್ರದೇಶದಲ್ಲಿ ಸೋಮವಾರ ಮಣ್ಣು ಕುಸಿಯುತ್ತಿದ್ದು, ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ.
ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಸಂತೆಕಟ್ಟೆ ಪ್ರದೇಶದಲ್ಲಿ ಆರಂಭಗೊಂಡಿರುವ ಓವರ್ ಪಾಸ್ ಕಾಮಗಾರಿ ನಡೆಯುವ ಪ್ರದೇಶದಲ್ಲಿ ಮಣ್ಣು ಕುಸಿಯಲು ಆರಂಭವಾಗಿದ್ದು, ಅದರಿಂದ ಅಲ್ಲಿ ನಿರ್ಮಿಸಲಾದ ತಡೆಗೋಡೆಗಳಿಗೂ ಹಾನಿಯಾಗಿದೆ. ಅಷ್ಟು ಮಾತ್ರವಲ್ಲದೆ, ಮಣ್ಣು ಕುಸಿತ ಹೆಚ್ಚಾಗುತ್ತಿದ್ದು ಅದರಿಂದ ಪಕ್ಕದಲ್ಲೇ ಇರುವ ಬೃಹತ್ ಕಟ್ಟಡ ಹಾಗೂ ನಿವಾಸಿಗಳಲ್ಲಿ ಆತಂಕ ಮೂಡಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಕೂಡಲೇ ಕ್ರಮ ವಹಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಕಾಮಗಾರಿ ನಡೆಯುತ್ತಿರುವ ಪರ್ಯಾಯ ಮಾರ್ಗವೂ ಸರಿಯಾದ ಡಾಂಬರೀಕರಣ ಇಲ್ಲದ ಕಾರಣ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಸಂತೆಕಟ್ಟೆ ಬಳಿ ಕಾಮಗಾರಿ ಹಂತದಲ್ಲಿರುವ ಓವರ್ ಪಾಸ್ ಕಾಮಗಾರಿಯ ಬೃಹತ್ ಹೊಂಡ ಕುಸಿಯತೊಡಗಿದೆ. ಮಳೆಗಾಲಕ್ಕೂ ಮುನ್ನ ಓವರ್ ಪಾಸ್ ಕಾಮಗಾರಿ ಪ್ರಾರಂಭಿಸಲಾಗಿತ್ತು. ಅದಕ್ಕಾಗಿ ಬೃಹತ್ ಹೊಂಡ ತೋಡಲಾಗಿತ್ತು. ಹೊಂಡದಲ್ಲಿ ಭಾರೀ ಪ್ರಮಾಣದ ಬಂಡೆ ಕಲ್ಲು ಕಂಡುಬಂದ ಕಾರಣ ಕಾಮಗಾರಿ ಬಹುತೇಕ ನಿಧಾನಗೊಂಡಿತ್ತು. ಬಳಿಕ ಭಾರೀ ಮಳೆಗೆ ಟಾರ್ಪಲ್ ಅಳವಡಿಸಲಾಗಿತ್ತು. ಆದರೆ, ಇಂದು ಕಾಮಗಾರಿ ಸ್ಥಳದಲ್ಲಿ ಕುಸಿಯುತ್ತಿದ್ದು ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಡಿತಗೊಳ್ಳುವ ಭೀತಿ ಎದುರಾಗಿದೆ.