ಶ್ರೀ ಗವಿಸಿದ್ಧೇಶ್ವರರ ಅದ್ದೂರಿ ಮಹಾರಥೋತ್ಸವ

Advertisement

ಕೊಪ್ಪಳ: ದಕ್ಷಿಣ ಭಾರತದ ಕುಂಭಮೇಳ ಎಂಬ ಹೆಗ್ಗಳಿಕೆಯ ಗವಿಸಿದ್ಧೇಶ್ವರರ ೨೦೭ನೇ ಮಹಾರಥೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಭಾನುವಾರ ಅದ್ದೂರಿಯಾಗಿ ಜರುಗಿತು.
ಗವಿಮಠದ ಕರ್ತೃ ಗದ್ದುಗೆಯಿಂದ ಗವಿಸಿದ್ಧೇಶ್ವರರ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ ನಂದಿಕೋಲು, ಕಂಸಾಳೆಗಳೊಂದಿಗೆ ಅದ್ದೂರಿ ಮೆರವಣಿಗೆ ಮೂಲಕ ರಥೋತ್ಸವಕ್ಕೆ ಕರೆತಂದರು. ರಥೋತ್ಸವ ಸುತ್ತು ಹಾಕುವ ವೇಳೆ ನಟ ಅಪ್ಪು ಭಾವಚಿತ್ರ ಹಿಡಿದು, ಅಭಿಮಾನಿಗಳು ರಥೋತ್ಸವ ಸುತ್ತಿದರು. ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ರಥೋತ್ಸವಕ್ಕೆ ಪೂಜೆ ಸಲ್ಲಿಸಿದರು.
ಗೋಧೂಳಿ ಮುಹೂರ್ತದಲ್ಲಿ…
ಬಳಿಕ ಗವಿಶ್ರೀ ನೇತೃತ್ವದಲ್ಲಿ ಆಧ್ಯಾತ್ಮಿಕ ಚಿಂತಕ, ಈಶಾ ಫೌಂಡೇಶನ್‌ನ ಸದ್ಗುರು ಅವರು ಗವಿಸಿದ್ಧೇಶ್ವರರ ರಥೋತ್ಸವಕ್ಕೆ ಧ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಿದರು.
ಪ್ರತಿವರ್ಷದಂತೆ ಈ ವರ್ಷವೂ ನಗರದ ಗವಿಮಠದ ಮೈದಾನದಲ್ಲಿ ಗೋಧೂಳಿ ಮುಹೂರ್ತದಲ್ಲಿ ರಥೋತ್ಸವವೂ ಸಾಗಿತು. ‘ಗವಿಸಿದ್ಧೇಶ್ವರ ಮಹಾರಾಜಕೀ ಜೈ’ ಎನ್ನುವ ಘೋಷಣೆ ಮೊಳಗಿತು. ಗವಿಶ್ರೀಗಳು ಹಸಿರು ನಿಶಾನೆ ತೋರಿಸಿ, ರಥ ಎಳೆಯುವಂತೆ ಭಕ್ತರಿಗೆ ಸೂಚಿಸಿದರು.
ರಥ ಬೀದಿಯಲ್ಲಿ ಹಾಕಿದ್ದ ರಂಗೋಲಿಯೂ ಎಲ್ಲರ ಗಮನ ಸೆಳೆಯಿತು. ಜನರು ಉತ್ತತ್ತಿ ಎಸೆದು ಭಕ್ತಿ ಸಮರ್ಪಿಸಿದರು. ೧೯೯೨ರಲ್ಲಿ ಗವಿಸಿದ್ಧೇಶ್ವರರು ಜೀವಂತ ಸಮಾಧಿಯಾಗಿದ್ದು, ಕರ್ತೃ ಗದ್ದುಗೆ ನಿರ್ಮಾಣವಾಗಿ ಇಂದಿಗೆ ೨೦೭ ವರ್ಷಗಳಾಯಿತು. ಜೀವಂತ ಸಮಾಧಿಯಾದ ದಿನದಂದು ಪ್ರತಿವರ್ಷವೂ ರಥೋತ್ಸವ ಜರುಗುತ್ತಿದ್ದು, ೨೦೭ನೇ ರಥೋತ್ಸವ ವಿಜೃಂಭಣೆಯಿಂದ ಜರುಗಿತು.
ನೈವ್ಯೇದ್ಯ ಅರ್ಪಣೆ…
ಸುತ್ತಲಿನ ಜಿಲ್ಲೆ, ತಾಲೂಕು ಹಾಗೂ ಗ್ರಾಮಗಳಿಂದ ಲಘು ವಾಹನ, ದ್ವಿಚಕ್ರವಾಹನ, ಎತ್ತಿನ ಬಂಡಿ ಹಾಗೂ ಪಾದಯಾತ್ರೆ ಮೂಲಕ ಲಕ್ಷಾಂತರ ಭಕ್ತರು ಆಗಮಿಸಿದರು. ನಡುರಾತ್ರಿಯಿಂದಲೇ ಭಕ್ತರು ಗವಿಮಠಕ್ಕೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ಗವಿಸಿದ್ಧೇಶ್ವರರ ಗದ್ದುಗೆಯ ದರ್ಶನ ಪಡೆದರು. ತೆಂಗಿನಕಾಯಿ, ಹೂವು, ನೈವ್ಯೇದ್ಯಗಳನ್ನು ಅರ್ಪಿಸಿ, ಕೃತಾರ್ಥರಾದರು.
ನಗು ನಗುತಾ ಮನೆಗೆ ಹೋದಾಗಲೇ ನನಗೆ ಜಾತ್ರೆ ಮುಗಿದಹಾಗೇ. ಮುಂದಿನ ಜಾತ್ರೆಗೆ ಪ್ರತ್ಯಕ್ಷ ಆಹ್ವಾನ ನೀಡುತ್ತೇನೆ ಎಂದು ಗವಿಶ್ರೀ ತಿಳಿಸಿದರು.
ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್, ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ಮಾಜಿ ಸಚಿವರಾದ ಗಾಲಿ ಜನಾರ್ಧನ ರೆಡ್ಡಿ, ಬಸವರಾಜ ರಾಯರಡ್ಡಿ, ವೆಂಕಟರಾವ್ ನಾಡಗೌಡರ, ಸಂಸದ ಸಂಗಣ್ಣ ಕರಡಿ, ಎಂಎಲ್ಸಿ ಹೇಮಲತಾ ನಾಯಕ್, ಶಾಸಕರಾದ ಪರಣ್ಣ ಮುನವಳ್ಳಿ, ರಾಘವೇಂದ್ರ ಹಿಟ್ನಾಳ್, ಬಿಜೆಪಿ ಮುಖಂಡ ಸಿ.ವಿ. ಚಂದ್ರಶೇಖರ ಇದ್ದರು.