ಶ್ರಮಜೀವಿಗೆ ಭಗವಂತನ ಗೆಳೆತನ ಸುಲಭ

Advertisement

ಸತ್ವಶುದ್ಧಿಗಿರುವ ಅನೇಕ ಪೂರ್ವಸಿದ್ಧತೆಗಳಲ್ಲಿ ಮಾನಸಿಕಶುದ್ಧಿ, ಆಹಾರಶುದ್ಧಿಯೂ ಮುಖ್ಯ. ಉಪನಿಷತ್ತು ಆದೇಶಿಸುತ್ತದೆ – “ಆಹಾರ ಶುದ್ಧೌ ಸತ್ವಶುದ್ಧಿಃ”. ಏನನ್ನಾದರೂ ಅಪೇಕ್ಷಿಸುವುದು ತಪ್ಪಲ್ಲ; ಆದರೆ ಹೇಗಾದರೂ ಅದನ್ನು ಪಡೆಯಬೇಕೆನ್ನುವುದು ತಪ್ಪು. ದೇಹ ಎಷ್ಟೇ ಸುಂದರವಾಗಿದ್ದರೂ ನೊಣ ಬಂದು ಕೂರುವುದು ಗಾಯದ ಮೇಲೆಯೇ. ಮನುಷ್ಯನಲ್ಲಿ ಎಷ್ಟೇ ಒಳ್ಳೆಯ ಗುಣಗಳಿದ್ದರೂ ಜನರ ಗಮನವಿರುವುದು ಆತನ ಕೆಟ್ಟಗುಣಗಳ ಬಗ್ಗೆಯೇ! ಆದರೂ ತನ್ನ ಮೌಲ್ಯವನ್ನು ಬಿಟ್ಟುಕೊಡಬಾರದು. ಕರ್ಣನಿಗೆ ಒಬ್ಬ ಉತ್ತಮ ಮನುಷ್ಯನಾಗಿ ಬದುಕಲು ಬೇಕಾದ ಎಲ್ಲಾ ಸವಲತ್ತುಗಳೂ, ಸಂಸ್ಕಾರಗಳೂ ಸಿಕ್ಕಿದ್ದವು. ಆದರೆ ಸದಾ ಆತನಲ್ಲಿ ಹೊಗೆಯಾಡುತ್ತಿದ್ದ ಕಹಿಭಾವನೆ, ಅತೃಪ್ತಿಯಿಂದಾಗಿ ಅವನಲ್ಲಿದ್ದ ಉತ್ಕೃಷ್ಟ ದಾನಗುಣವನ್ನು ನಾವಿಂದಿಗೂ ನೆನೆಯುತ್ತಿದ್ದರೂ ಕೂಡಾ ಅವನ ಕರ್ಮಫಲವನ್ನು ಬದಲಾಯಿಸಲು ಸಾಧ್ಯವಾಗಲಿಲ್ಲ. ಮನಮೆಚ್ಚಿದ ಹೆಂಡತಿ, ಮಗ ಎಲ್ಲ ಇದ್ದರೂ ಅವರೊಡನೆ ಜೀವನದ ಕೊನೆಯವರೆಗೂ ಬದುಕುವ ಸೌಭಾಗ್ಯವನ್ನೇ ಕಳೆದುಕೊಂಡ ದುರ್ದೈವಿಯಾದ. ತ್ರೇತಾಯುಗದಲ್ಲಿ ಮೋಸದಿಂದ ವಾಲಿಯನ್ನು ಸಂಹಾರ ಮಾಡಿದ ರಾಮ ದ್ವಾಪರಯುಗದಲ್ಲಿ ಒಬ್ಬ ಅನಾಮಿಕ ಬೇಡನ ಬಾಣದಿಂದ ಅದೇ ರೀತಿಯ ಅಂತ್ಯವನ್ನು ಕಂಡ! ಇದುವೇ ಕರ್ಮಫಲವೆಂದರೆ.
ಹಿಂದೂ ವಿವಾಹಪದ್ಧತಿಯಲ್ಲಿ ಮಾಂಗಲ್ಯಧಾರಣೆ ನಂತರದಲ್ಲಿ ವಧೂವರರು ಯಜ್ಞಕುಂಡದ ಸುತ್ತ ಕೈಕೈ ಹಿಡಿದುಕೊಂಡು ಏಳು ಪ್ರದಕ್ಷಿಣೆ ಹಾಕುವ ಕ್ರಮದ ಹಿಂದಿನ ಮಹತ್ವವೇನು? ಒಂದು ಪ್ರದಕ್ಷಿಣೆ (ಸುತ್ತು) ಅಂದರೆ ೩೬೦ ಡಿಗ್ರಿ. ವೇದಗಣಿತದ ಪ್ರಕಾರ; ೧ ರಿಂದ ೯ರೊಳಗಿನ ಅಂಕೆಗಳ ಪೈಕಿ ೭ನ್ನು ಹೊರತುಪಡಿಸಿ ಇನ್ನೆಲ್ಲಾ ಅಂಕೆಗಳು ೩೬೦ನ್ನು ಭಾಗಿಸುತ್ತವೆ! ಹಾಗಾಗಿ ೭ಕ್ಕೆ ಅಷ್ಟೊಂದು ಮಹತ್ವ. ಏಳು ಪ್ರದಕ್ಷಿಣೆ ಹಾಕಿದರೆ ವಧೂವರರ ಸಂಬಂಧವನ್ನು ಯಾರಿಂದಲೂ ವಿಭಾಗಿಸಲು ಸಾಧ್ಯವಿಲ್ಲವೆಂಬ ತಾತ್ಪರ್ಯ, ನಂಬಿಕೆ. ಒಂದು ವಾಹನವನ್ನು ಹೊಸದಾಗಿ ಖರೀದಿಸುವಾಗ ಮಾಡುವ ವಿವರವಾದ ವಿಮರ್ಶೆಗಿಂತ ಕಡಿಮೆ ಅವಧಿಯಲ್ಲಿ ಹೊಸ ವ್ಯಕ್ತಿಯನ್ನು ನಮ್ಮ ಬದುಕಿನೊಳಗೆ ಸಂಗಾತಿಯಾಗಿ, ಗೆಳೆಯನಾಗಿ, ಪಾಲುದಾರನಾಗಿ, ಸಹಚರನಾಗಿ, ಮಾರ್ಗದರ್ಶಿಯಾಗಿ ವಿವಿಧ ರೂಪಗಳಲ್ಲಿ ಪ್ರವೇಶಿಸಲು ಅವಕಾಶ ನೀಡುವುದೇ ವೈಯಕ್ತಿಕ ಸಂಬಂಧಗಳಲ್ಲಿ ಬಿರುಕುಂಟಾಗಲು ಕಾರಣ. ಆ ವ್ಯಕ್ತಿಯ ನುಡಿ ಮತ್ತು ನಡೆಗಳಲ್ಲಿ ಸಾಮ್ಯತೆ ಕಾಣದಿದ್ದಾಗ ಪ್ರವೇಶ ನಿರಾಕರಿಸುವುದೇ ಇದಕ್ಕೆ ಪರಿಹಾರ ಮತ್ತು ಪ್ರಜ್ಞಾವಂತಿಕೆಯ ಲಕ್ಷಣವೂ.
ಹುಟ್ಟಿದ ೨೪ ಗಂಟೆಯೊಳಗೆ ಮಗುವಿನ ದೇಹಕ್ಕೆ ಒಂದು ವಿಶಿಷ್ಟವಾದ ಪರಿಮಳ ಸೃಷ್ಟಿಯಾಗುತ್ತದೆ ಮತ್ತು ಅದು ಆ ಮಗುವಿನ ಜೀವಮಾನದುದ್ದಕ್ಕೂ ಮುಂದುವರಿಯುತ್ತದೆ. ಈ ವಿಶಿಷ್ಠತೆಯೇ ವ್ಯಕ್ತಿಯ ಜೈವಿಕ ಗುರುತು. ಹೀಗಾಗಿ ವ್ಯಕ್ತಿ ವ್ಯಕ್ತಿಯ ಮಧ್ಯೆಯ ಆಕರ್ಷಣೆಗೆ ಮತ್ತು ದೇಹದ ವಿಶಿಷ್ಠ ಪರಿಮಳಕ್ಕೆ ನೇರ ಸಂಬಂಧವಿದೆ. ಎಷ್ಟೋ ಬಾರಿ ಮಕ್ಕಳಿಲ್ಲದ ದಂಪತಿ ಮಗುವನ್ನು ದತ್ತುತೆಗೆದುಕೊಂಡಾಗ ಆ ಮಗು ಆ ದಂಪತಿಗಳ ಪ್ರೀತಿ, ವಾತ್ಸಲ್ಯಕ್ಕೆ ಸ್ಪಂದಿಸದಿರುವ ಕಾರಣ ಈ ದೈಹಿಕ ಪರಿಮಳದ ಪ್ರಭಾವವೇ ಆಗಿರುತ್ತದೆ. ಪರಿಮಳ ಮತ್ತು ನೆನಪಿಗೂ ನೇರ ಸಂಬಂಧವಿದೆ. ಇದು ಮರೆಗುಳಿ ಕಾಯಿಲೆಯವರಲ್ಲಿ ಸಾಬೀತಾಗುತ್ತದೆ. ಇವರ ನೆನಪಿನ ಶಕ್ತಿ ಅಳಿದುಹೋಗಿದ್ದರೂ, ಕೆಲವು ಪರಿಮಳಗಳ ಸಹಾಯದಿಂದ ಹಿಂದೆ ಘಟಿಸಿದ ಘಟನೆಗಳನ್ನು ಮರಳಿ ಸ್ಮರಣೆಗೆ ತರಬಹುದು. ಮನುಷ್ಯನಲ್ಲಿ ಸತುವಿನ ಕೊರತೆ ವಾಸನೆ, ರುಚಿ, ಸ್ಮರಣಶಕ್ತಿ, ರೋಗನಿರೋಧಕ ಶಕ್ತಿಗಳ ಕಳೆದುಕೊಳ್ಳುವಿಕೆಗೆ ಕಾರಣ. ಸತುವಿನ ಅಂಶವಿರುವ ಪೆಪ್ಪರಮಿಂಟು ಸೇವಿಸಿದರೆ ಈ ಕೊರತೆ ನೀಗುತ್ತದೆ.
ಹುಟ್ಟಿನೊಂದಿಗೇ ಬರುವ ಹುಟ್ಟುಮಚ್ಚೆಗಳು ಹಿಂದಿನ ಜೀವನದ ಘಟನೆಗಳೊಂದಿಗೆ ತಳುಕುಹಾಕಿಕೊಂಡಿರುತ್ತವೆ. ಹಿಂದಿನ ಜೀವನದ ಅಂತ್ಯಕ್ಕೆ ಕಾರಣವಾದ ಘಟನೆಗಳ (ಗಂಭೀರ ಗಾಯ, ಇರಿತ, ಅನಾರೋಗ್ಯ, ಯುದ್ಧ-ಅಪಘಾತಗಳಲ್ಲಿನ ಅಕಾಲಿಕ ಸಾವು ಇತ್ಯಾದಿ) ಪರಿಣಾಮ ಈ ಜನ್ಮದಲ್ಲಿ ‘ಹುಟ್ಟುಮಚ್ಚೆಗಳಾಗಿ’ ವ್ಯಕ್ತಿಯ ದೇಹದಲ್ಲಿ ಪ್ರಕಟವಾಗುತ್ತವೆ. ಧ್ಯಾನವೇ ಇತ್ಯಾದಿ ಅಧ್ಯಾತ್ಮಿಕ ಸಾಧನೆಗಳಿಂದ ಉನ್ನತಹಂತಗಳನ್ನು ತಲುಪುತ್ತಿದ್ದಂತೆ ಈ ಜನ್ಮಗುರುತುಗಳ ರಹಸ್ಯ ಹಿನ್ನೆಲೆ ಅನುಭವಕ್ಕೆ ಬರುತ್ತದೆ. ಮನುಷ್ಯನ ದೇಹದಲ್ಲಿರುವ ಜೀವಕೋಶಗಳು ಜನ್ಮಾಂತರದ ನೆನಪುಗಳನ್ನು ತಮ್ಮಲ್ಲಿ ದಾಖಲಿಸಿಕೊಂಡು ಮುಂದಿನ ಜನ್ಮಕ್ಕೂ ಈ ಮಾಹಿತಿಗಳನ್ನು ದಾಟಿಸುತ್ತವೆ. ಬೇರೆ ಬೇರೆ ವಿಧಾನಗಳ ಮೂಲಕ ದೇಹದ ಜಾಗೃತಾವಸ್ಥೆಯನ್ನು ಉನ್ನತಸ್ತರಗಳಿಗೆ ಏರಿಸುತ್ತಾ ಸಾಗಿದಂತೆ ಜೀವಕೋಶಗಳಲ್ಲಿ ಸುಪ್ತವಾಗಿರುವ ಹಿಂದಿನ ಜೀವನದ ಮಾಹಿತಿಯನ್ನು ಅರಿಯಲು ಸಾಧ್ಯವಾಗುತ್ತದೆ. ರೇಕಿಯಲ್ಲಿ ಇದನ್ನು ‘ರಿಗ್ರೆಷನ್ ಥೆರಪಿ’ ಎಂದು ಕರೆಯಲಾಗುತ್ತದೆ.
ದೈಹಿಕವಾಗಿ ಹಸಿವುಂಟಾದಾಗ ಸೇವಿಸಿದ ಆಹಾರವನ್ನು ಜೀರ್ಣಿಸುವ ವ್ಯವಸ್ಥೆಯನ್ನು ಪ್ರಕೃತಿ ನಮ್ಮ ದೇಹದಲ್ಲಿಟ್ಟಿದೆ. ಆದರೆ ‘ಹಸಿವಾಗಿದೆ’ ಎಂಬ ಭ್ರಮೆಯಲ್ಲಿ ಸೇವಿಸಿದ ಆಹಾರ ಜೀರ್ಣವಾಗುವುದಿಲ್ಲ; ಬದಲಿಗೆ ದೇಹದಲ್ಲಿ ಸಂಗ್ರಹವಾಗುತ್ತಾ ಸಾಗುತ್ತದೆ. ಸಂಗ್ರಹಣೆಯಿಂದ ಗೊಂದಲಕ್ಕೆ ಒಳಗಾಗುವ ಜೀರ್ಣಾಂಗ ವ್ಯವಸ್ಥೆ ಮತ್ತು ಅಂಗಗಳು ಕೈಚೆಲ್ಲಿದಾಗ ದೇಹ ಮಾನಸಿಕ ಹಾಗೂ ಅತಿತೂಕ ಸಮಸ್ಯೆ ಸೇರಿದಂತೆ ದೀರ್ಘಾವಧಿಯ ಗಂಭೀರ ಕಾಯಿಲೆಗಳಿಗೆ ತುತ್ತಾಗುತ್ತದೆ. ಹೀಗಾಗಿ ಪರಿಹಾರ ನಮ್ಮ ಕೈಯಲ್ಲೇ ಇದೆ! ನಿರ್ಜಲೀಕರಣ ಆದಾಗಲೂ ಮಿದುಳು ‘ಹಸಿವೆಯೆಂದೇ’ ಭಾವಿಸುತ್ತದೆ. ಅಂಥ ಸಂಧರ್ಭದಲ್ಲಿ ನೀರುಕುಡಿಯುವ ನಿರ್ಧಾರ ನೀವೇ ತೆಗೆದುಕೊಳ್ಳಬೇಕು. ವೇಗವಾಗಿ ಅಥವಾ ತುಂಬಾನೇ ನಿಧಾನವಾಗಿ ತಿನ್ನುವುದು ಮಿದುಳಿನ ನಿಯಂತ್ರಣಕೇಂದ್ರವನ್ನು ಅತಿಕ್ರಮಿಸುವುದರಿಂದ ಹಸಿವು ನೀಗಿದ ಪೂರ್ಣಸಂದೇಶ ಸಿಗುವುದಿಲ್ಲ. “ಹೊಟ್ಟೆ ತುಂಬಿದೆ” ಎಂಬ ಸಂದೇಶ ರವಾನಿಸಲು ಮಿದುಳು ಸರಿಸುಮಾರು ೨೦ ನಿಮಿಷ ತೆಗೆದುಕೊಳ್ಳುತ್ತದೆ.
‘ಶತಂ ವಿಹಾಯಭೋಕ್ತವ್ಯಂ’ – ನೂರು ಕಾರ್ಯಗಳನ್ನು ಬದಿಗಿಟ್ಟು ಊಟಮಾಡಬೇಕು. ‘ಸಹಸ್ರಂ ಸ್ನಾನಮಾಚರೇತ್’ – ಸಾವಿರ ಕೆಲಸಗಳನ್ನು ಬದಿಗಿಟ್ಟು ಮೊದಲು ಸ್ನಾನಮಾಡಬೇಕು. ಜೋಗ ಜಲಪಾತದ ಮೇಲೆ ಹಗ್ಗದ ಮೇಲೆ ನಡೆಯುವುದು ನಿಜಕ್ಕೂ ಸಾಹಸ. ಹಾಗೆ ನಡೆಯದಿರುವುದು ಬುದ್ಧಿವಂತಿಕೆ! ಆಯ್ಕೆ ನಿಮ್ಮದು. ನಿಮ್ಮ ಬುದ್ಧಿವಂತಿಕೆ ದೇವರು ನಿಮಗೆ ಕೊಟ್ಟ ಕೊಡುಗೆ. ಅದನ್ನು ಬಳಸಿ ಮಾಡುವ ಸತ್ಕಾರ್ಯ ನೀವು ದೇವರಿಗೆ ಕೊಡುವ ಕಾಣಿಕೆ! ಸಮಸ್ಯೆ ಎದುರಾದಾಗ ಅದನ್ನು ಎದುರಿಸುವುದು ಹೇಗೆಂದು ಯೋಚಿಸಬೇಕು. ಪರಿಹಾರವೇ ಮತ್ತೊಂದು ಸಮಸ್ಯೆ ಸೃಷ್ಟಿಸಬಾರದು, ಅಷ್ಟೆ. “ಚಾರ್ಲಿ ಚಾಪ್ಲಿನ್‌ನನ್ನು ಹೋಲುವ” ಸ್ಪರ್ಧೆಯಲ್ಲಿ ಸ್ವತಃ ಚಾರ್ಲಿ ಚಾಪ್ಲಿನ್ ಭಾಗವಹಿಸಿದ್ದ. ಸ್ಪರ್ಧೆಯ ತೀರ್ಪುಗಾರರು ಆತನಿಗೆ ನೀಡಿದ ಸ್ಥಾನ ‘ಮೂರನೆಯದ್ದು’! “ನಾವು ಯಾರು” ಎಂಬುದರ ನಿರ್ಣಯ ಪ್ರತಿಕ್ಷಣವೂ ನಮಗೇ ಬಿಟ್ಟಿದ್ದು. ನಮ್ಮ ಆಯ್ಕೆಗಳು ಒಂದೋ ನಮ್ಮನ್ನು ಪ್ರೇರೇಪಿಸುತ್ತವೆ ಇಲ್ಲವೇ ಸುಮ್ಮನಿರುತ್ತವೆ. ಗುರಿಯ ಸ್ಪಷ್ಟ ದೃಶ್ಯೀಕರಣ ಮೊದಲ ಉತ್ತಮ ಹೆಜ್ಜೆಯಾಗಿದ್ದರೂ ಸಂತೋಷದಿಂದ ಪ್ರೇರಿತವಾದ ಜೀವನ ಇನ್ನೂ ಹೆಚ್ಚಿನದನ್ನು ಬಯಸುತ್ತದೆ. ಬಯಸಿದ ಬದುಕಿಗೆ ಕ್ರಿಯೆ ಬೇಕು.
ಋಗ್ವೇದ ನಿರೂಪಿಸುವಂತೆ; “ನ ಋತೇಶ್ರಾಂತಸ್ಯ ಸಖ್ಯಾಯ ದೇವಾಃ” – ಯಾರು ಶ್ರಮವಹಿಸುವುದಿಲ್ಲವೋ ಅವರೊಂದಿಗೆ ಭಗವಂತನೂ ಗೆಳೆತನ ಮಾಡುವುದಿಲ್ಲ. ಆದ್ದರಿಂದ ಶ್ರಮವೇ ಸಂಪತ್ತಿಗೂ ಒಳ್ಳೆಯ ಬಾಳ್ವೆಗೂ ಹೆಗ್ಗುರುತು. ಶ್ರಮದಿಂದಲೇ ಶ್ರೀರಾಮನೂ ಸಹ ಕಾಡಿನಲ್ಲಿ ಕಷ್ಟವನ್ನನುಭವಿಸಿ ರಾಕ್ಷಸ ಸೈನ್ಯವನ್ನು ನಾಶಮಾಡುವಂತಾಯಿತು.