ವಿಲಾಸ ಜೋಶಿ
ಬೆಳಗಾವಿ: ಬೆಳಗಾವಿ ಕ್ಷೇತ್ರಕ್ಕೆ ಬಿಜೆಪಿ `ವಾರಸುದಾರ’ ಯಾರು ಎನ್ನುವುದು ಸ್ಪಷ್ಟವಾಗುತ್ತಿಲ್ಲ. ಕಾಂಗ್ರೆಸ್‌ನಿಂದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಪುತ್ರ ಮೃಣಾಲ್ ಹೆಸರು ಅಂತಿಮವಾಗಿದ್ದರೂ ಘೋಷಣೆ ಮಾತ್ರ ಆಗಿಲ್ಲ. ಆದರೆ ಬಿಜೆಪಿಯಲ್ಲಿ ಸ್ಥಳೀಕರಿಗೆ ಟಿಕೆಟ್ ಕೊಡಿ ಎನ್ನುವ ಕೂಗು ಹುಟ್ಟಿಕೊಂಡ ನಂತರ ಶೆಟ್ಟರ್ ಆಡಿದ ಮಾತುಗಳಿಂದ ಒಂದಿಷ್ಟು ವಿವಾದಗಳು ಹುಟ್ಟಿಕೊಂಡವು.
ಇದರಿಂದ ಸಹಜವಾಗಿ ಬೆಳಗಾವಿ ಬಿಜೆಪಿಗರು ಮುನಿಸಿಕೊಂಡು ಕೊನೆ ಕ್ಷಣದ ಕಸರತ್ತು ಎನ್ನುವಂತೆ ದೆಹಲಿ ಪ್ರಯಾಣ ಬೆಳೆಸುವ ತೀರ್ಮಾನ ಮಾಡಿದ್ದಾರೆ. ಡಾ. ಪ್ರಭಾಕರ ಕೋರೆ ಅವರೊಂದಿಗೆ ಚರ್ಚೆ ನಡೆಸಿ ನಾಳೆ ಬೆಳಗ್ಗೆ ದೆಹಲಿ ಹೈನಾಯಕರ ಬಾಗಿಲು ತಟ್ಟುವ ತೀರ್ಮಾನ ಮಾಡಿದ್ದಾರೆಂದು ಹೇಳಲಾಗುತ್ತಿದೆ.
ಇಷ್ಟು ದಿನ ಬೆಳಗಾವಿಗರಿಗೆ ಟಿಕೆಟ್ ಕೊಡಬೇಕು ಎನ್ನುವ ಬೇಡಿಕೆ ಇತ್ತು, ಆದರೆ ಶೆಟ್ಟರ್ ಆಡಿದ ಮಾತಿನಿಂದ ಕೆರಳಿದ ಬಿಜೆಪಿ ನಾಯಕರು ಅವರನ್ನು ಬಿಟ್ಟು ಬೇರೆ ಯಾರಿಗಾದರೂ ಕೊಡಿ ಎನ್ನುವ ಪ್ರಸ್ತಾವನೆಯನ್ನು ಇಟ್ಟಿದ್ದಾರೆಂದು ಗೊತ್ತಾಗಿದೆ.
ಆರಂಭದಲ್ಲಿ ಹಾಲಿ ಸಂಸದೆ ಮಂಗಲಾ ಅಂಗಡಿ ಅವರ ಕುಟುಂಬಕ್ಕೆ ಟಿಕೆಟ್ ಎನ್ನುವುದು ಖಾತರಿ ಆಗಿತ್ತು. ಆದರೆ ಸರ್ವೇ ರಿಪೋರ್ಟ್ ಸರಿ ಬಾರದ ಕಾರಣ ಕುಟುಂಬದವರಿಗೆ ಟಿಕೆಟ್ ನಿರಾಕರಿಸಲಾಯಿತು ಎಂದು ಹೇಳಲಾಗಿದೆ.
ಶೆಟ್ಟರ್ ಸಹ ಆರಂಭದಲ್ಲಿ ಅಂಗಡಿ ಕುಟುಂಬದವರಿಗೆ ಟಿಕೆಟ್ ಕೊಡಬೇಕು ಎನ್ನುವ ಬೇಡಿಕೆ ಇಟ್ಟಿದ್ದರು, ಆದರೆ ಕೊನೆಗಳಿಗೆಯಲ್ಲಿ ತಮಗೇ ಬೇಕು ಎಂದು ಪಟ್ಟು ಹಿಡಿದರು.