ಧಾರವಾಡ: ಅಯೋಧ್ಯಾ ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ನಗರದಾದ್ಯಂತ ಹಬ್ಬದ ವಾತಾವರಣ ಕಂಡು ಬರುತ್ತಿದೆ.
ನಗರದ ವಿವಿಧ ದೇವಸ್ಥಾನಗಳನ್ನು ತಳಿರು, ತೋರಣಗಳಿಂದ ಅಲಂಕರಿಸಲಾಗಿದ್ದು, ದೀಪಾಲಂಕಾರದಿಂದ ದೇವಸ್ಥಾನಗಳನ್ನು ಸಿಂಗರಿಸಲಾಗಿದೆ. ಶ್ರೀರಾಮ ದೇವಸ್ಥಾನ ಹಾಗೂ ಹನುಮಾನ್ ದೇವಸ್ಥಾನಗಳಲ್ಲದೇ ವಿವಿಧ ದೇವಾಲಯಗಳಲ್ಲಿ ಅಲಂಕಾರ ಮಾಡಲಾಗುತ್ತಿದೆ. ಗಾಂಧಿಚೌಕದಲ್ಲಿ ರಾಮನ ಕಟೌಟ್ ನಿಲ್ಲಿಸಲಾಗಿದ್ದು, ಕೇಸರಿ ಧ್ವಜಗಳಿಂದ ಅಲಂಕಾರ ಮಾಡಲಾಗಿದೆ. ಸಂಭ್ರಮದ ಹಿನ್ನೆಲೆಯಲ್ಲಿ ಕೆಲ ಅಂಗಡಿಗಳು, ಶಾಪಿಂಗ್ ಕಾಂಪ್ಲೆಕ್ಸ್ಗಳನ್ನು ಕೇಸರಿ ತೋರಣಗಳಿಂದ ಸಿಂಗರಿಸಲಾಗಿದೆ. ಹಿಂದೂ ಸಂಘಟನೆ ಕಾರ್ಯಕರ್ತರು ಮನೆ ಮನೆಗೆ ಶ್ರೀರಾಮನ ಚಿತ್ರವಿರುವ ಕೇಸರಿ ಬಾವುಟವನ್ನು ವಿತರಿಸಿದ್ದಾರೆ. ಕೆಲವರು ಈಗಾಗಲೇ ತಮ್ಮ ಮನೆಗಳ ಮೇಲೆ ಬಾವುಟವನ್ನು ಕಟ್ಟಿದ್ದಾರೆ. ಹಲವು ದೇವಸ್ಥಾನಗಳ ಮೇಲೆ ಕೂಡ ಬಾವುಟ ಹಾರಿಸಲಾಗಿದೆ.