ಶಾಸನಸಭೆಯಲ್ಲಿ ಸಂಯುಕ್ತ ಕರ್ನಾಟಕ ಗುಂಗು

Advertisement

ಅಧಿವೇಶನ ಪ್ರಗತಿಯಲ್ಲಿರುವ ಸಂದರ್ಭದಲ್ಲಿ ಜರುಗುವ ಘಟನಾವಳಿಗಳನ್ನು ಪತ್ರಿಕಾ ಸಂಪಾದಕೀಯ ಅಥವಾ ವರದಿಗಳನ್ನು ಆಧರಿಸಿ ಶಾಸನಸಭೆಯಲ್ಲಿ ಗಂಭೀರ ಚರ್ಚೆ ನಡೆಯುವುದು ಅಪರೂಪವೇನಲ್ಲ; ತಂತ್ರಜ್ಞಾನದ ಮಹಿಮೆಯಿಂದಾಗಿ ಮಾಧ್ಯಮ ಕ್ಷೇತ್ರ ಪೈಪೋಟಿಗೆ ಬಿದ್ದಿರುವ ಸಂದರ್ಭದಲ್ಲಿ ಪತ್ರಿಕಾ ಲೇಖನಗಳನ್ನು ಆಧರಿಸಿದ ಪ್ರಸ್ತಾಪಗಳು ಕೊಂಚ ಅಪರೂಪವಾಗಿರಬಹುದು. ಆದರೆ, ನಿಜರೂಪದಲ್ಲಿ ಇಂತಹ ಪ್ರಸಂಗಗಳು ಮಾರ್ದನಿಗೊಳ್ಳುತ್ತಲೇ ಇವೆ ಎಂಬುದಕ್ಕೆ ಸಂಯುಕ್ತ ಕರ್ನಾಟಕ ಪತ್ರಿಕೆಯ ಫೆಬ್ರವರಿ ೧೩ರ ತಾರೀಕಿನ ರಾಜ್ಯಪಾಲರ ವರ್ತನೆ - ಅಪವರ್ತನೆ' ಎಂಬ ಶೀರ್ಷಿಕೆಯ ಸಂಪಾದಕೀಯವೇ ನಿದರ್ಶನ. ಈ ಲೇಖನ ಪ್ರಕಟವಾದ ದಿನವೇ ಸಾರ್ವಜನಿಕ ವಲಯದ ವಿವಿಧ ಸ್ತರಗಳ ಜನರ ವಿಶ್ಲೇಷಣೆಗೆ ಪಾತ್ರವಾಗಿದ್ದು ಬಹುಜನರ ಗಮನಕ್ಕೆ ಬಾರದ ಸಂಗತಿ. ಆದರೆ, ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯನ್ನು ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಮಳವಳ್ಳಿಯ ನರೇಂದ್ರಸ್ವಾಮಿ ಪ್ರಾರಂಭಿಸಿ ಸಭಾಧ್ಯಕ್ಷ ಯು.ಟಿ. ಖಾದರ್ ಪೂರ್ವಾನುಮತಿಯೊಂದಿಗೆ ಇಡೀ ಸಂಪಾದಕೀಯವನ್ನು ಓದಿದಾಗ ಸದನದಲ್ಲಿ ಒಂದು ರೀತಿಯ ಕುತೂಹಲ. ಏಕೆಂದರೆ, ಚರ್ಚೆ ಆರಂಭಿಸುವವರು ಸಾಮಾನ್ಯವಾಗಿ ತಮ್ಮ ಲೋಕಾನುಭವ ಹಾಗೂ ಲೋಕದೃಷ್ಟಿಯನ್ನು ಆಧರಿಸಿ ತಮ್ಮ ನಿಲುವನ್ನು ಪ್ರಸ್ತಾಪಿಸುವುದು ವಾಡಿಕೆ. ಆದರೆ, ನರೇಂದ್ರ ಸ್ವಾಮಿಯವರು ತಮ್ಮ ನಿಲುವಿನ ಬದಲು ಸಂಪಾದಕೀಯವನ್ನು ಮೊದಲಿನಿಂದ ಕೊನೆಯವರೆಗೆ ಓದಿದ್ದಂತೂ ನಿಜಕ್ಕೂ ಅಪರೂಪ. ನರೇಂದ್ರಸ್ವಾಮಿ ಅವರು ಸಂಪಾದಕೀಯ ಓದಿದ ನಂತರ ಹಲವಾರು ಮಂದಿ ವಿವಿಧ ಪಕ್ಷಗಳ ಸದಸ್ಯರು ಮೊಗಸಾಲೆಯಲ್ಲಿ ಸಂಪಾದಕೀಯ ಲೇಖನದ ಪೂರ್ವಾಪರಗಳನ್ನು ಚರ್ಚಿಸಿ ಅದರಲ್ಲಿರುವ ತತ್ವ ಮತ್ತು ಸತ್ವಗಳನ್ನು ಅಗ್ನಿಪರೀಕ್ಷೆಗೆ ಗುರಿಪಡಿಸಿದ್ದು ಪರಿಸ್ಥಿತಿಯ ಇನ್ನೊಂದು ಮಗ್ಗಲು. ಇದರ ವಿಸ್ತರಣೆಯ ರೂಪದಲ್ಲಿ ಮಹತ್ವ ಪಡೆದುಕೊಂಡ ಪ್ರಕರಣವೆಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಪಾಲರ ಭಾಷಣಕ್ಕೆ ಧನ್ಯವಾದ ಅರ್ಪಿಸುವ ಚರ್ಚೆಗೆ ಉತ್ತರ ಕೊಡುವ ಸಂದರ್ಭದಲ್ಲಿ ಮತ್ತೆ ಸಂಯುಕ್ತ ಕರ್ನಾಟಕದ ಸಂಪಾದಕೀಯ ಸಾಲುಗಳನ್ನು ಓದಿ ಸದನದಲ್ಲಿ ವಿದ್ಯುತ್ ಸಂಚಾರವಾಗುವಂತೆ ಮಾಡಿದ್ದು ಪರಿಸ್ಥಿತಿಯ ಇನ್ನೊಂದು ಮುಖ. ಸಿದ್ದರಾಮಯ್ಯ ಅವರು ಲೇಖನವನ್ನು ಓದುವಾಗ ಪ್ರತಿಪಕ್ಷಗಳಿಗೆ ತಿವಿಯುವ ರೀತಿಯಲ್ಲಿ ಕೆಲವು ಸಾಲುಗಳನ್ನು ಪ್ರಾಸಬದ್ಧವಾಗಿ ಓದುತ್ತಾ.....ಈ ಸಂಪಾದಕೀಯ ಬರೆದಿರುವುದು ನಾನಲ್ಲಾ. ಸಂಯುಕ್ತ ಕರ್ನಾಟಕದ ಪತ್ರಿಕೆಯ ಸಂಪಾದಕರ ಲೇಖನವಿದು. ನನ್ನ ಅಭಿಪ್ರಾಯ ಎಂದು ತಪ್ಪಾಗಿ ಭಾವಿಸಬೇಡಿ’ ಎಂದು ಹೇಳುತ್ತಿರುವಂತೆಯೇ ಬಿಜೆಪಿಯ ಬಿಜಾಪುರದ ಬಸನಗೌಡ ಯತ್ನಾಳ್ ಇದನ್ನು ಯಾಕ ಬರದಾರ. ಇದರ ಹಿಂದೆ ಯಾರ ಅದಾರ. ಅದನ್ನೂ ಹೇಳ್ರಿ' ಎಂದು ಪಟ್ಟು ಹಾಕಲು ನೋಡಿದರು.ಹೌದ್ರಿ ಇದು ಸಂಯುಕ್ತ ಕರ್ನಾಟಕ ಸಂಪಾದಕೀಯ. ಸಂಪಾದಕರು ಬರೆದದ್ದು’ ಎಂದು ಮಾರ್ನುಡಿದು ಮತ್ತೊಮ್ಮೆ ಅದರ ಸಾಲುಗಳ ವಿವರಣೆಗೆ ತೊಡಗುತ್ತಿದ್ದಂತೆಯೇ ಯತ್ನಾಳ್ ಅವರು ತಮ್ಮ ಮಾತಿನ ಲಹರಿಯಲ್ಲೇ ಇನ್ನೂ ಮುಂದುವರಿದಿದ್ದರು.
ಅಂದ ಹಾಗೆ, ಶಾಸನಸಭೆ ಹಾಗೂ ಸಂಸತ್ತಿನಲ್ಲಿ ಪತ್ರಿಕಾ ಲೇಖನಗಳು ಮಾರ್ದನಿಗೊಳ್ಳುವುದು ಹೊಸದೇನೂ ಅಲ್ಲ. ವಿದ್ಯುನ್ಮಾನ ಮಾಧ್ಯಮಗಳು ಬರುವ ಮೊದಲು ವೃತ್ತಪತ್ರಿಕೆಗಳಲ್ಲಿ ಪ್ರಕಟವಾಗುವ ವರದಿಗಳೇ ಈ ಶಾಸನಸಭೆಗಳ ಮಹತ್ವದ ಚರ್ಚೆಗೆ ಗ್ರಾಸವಾಗುತ್ತಿದ್ದವು. ಏಕೆಂದರೆ, ಚುನಾಯಿತ ಪ್ರತಿನಿಧಿಗಳಿಗೆ ಪತ್ರಿಕೆಗಳನ್ನು ಬಿಟ್ಟರೆ ಬೇರೆ ಮೂಲದಿಂದ ಮಾಹಿತಿ ದೊರೆಯುವುದು ಕಷ್ಟವಾಗುತ್ತಿತ್ತು. ೧೯೮೩-೮೪ರಲ್ಲಿ ಜನತಾ ಪಕ್ಷದ ಗಾಂಧಿನಗರದ ಶಾಸಕ ಎಂ.ಎಸ್. ನಾರಾಯಣರಾವ್ ಟೈಂಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ರಾಮಕೃಷ್ಣ ಹೆಗಡೆ ಸರ್ಕಾರದ ರೀತಿ ನೀತಿಗಳನ್ನು ರಾಜ್ಯಪಾಲರ ಭಾಷಣದಲ್ಲಿ ಪ್ರಸ್ತಾಪಿಸಿರುವ ವಿಧಾನವನ್ನು ಆಧರಿಸಿದ ಸಂಪಾದಕೀಯವನ್ನು ಆಗಿನ ಸಭಾಧ್ಯಕ್ಷ ಡಿ.ಬಿ. ಚಂದ್ರೇಗೌಡ ಅವರ ಪೂರ್ವಾನುಮತಿಯೊಂದಿಗೆ ಓದಿದ್ದರು. ದೂರವಾಣಿ ಕದ್ದಾಲಿಕೆ ಪ್ರಸಂಗಕ್ಕೆ ಸಂಬಂಧಿಸಿದಂತೆ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯಲ್ಲಿ ಅರುಣ್ ಶೌರಿ ಬರೆದಿದ್ದ ಸುದೀರ್ಘ ಲೇಖನವನ್ನು ವೀರೇಂದ್ರ ಪಾಟೀಲರ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಎಸ್. ಬಂಗಾರಪ್ಪನವರು ಸಭಾಧ್ಯಕ್ಷ ಎಸ್.ಎಂ. ಕೃಷ್ಣ ಅವರ ಸಮ್ಮತಿಯೊಂದಿಗೆ ಓದಿದ್ದರು. ೭೦ರ ದಶಕದಲ್ಲಿ ವಿವಾದದ ತರಂಗಗಳನ್ನು ಎಬ್ಬಿಸಿದ್ದ ಸುಮಿತ್ರಾ ದೇಸಾಯಿ ನಿಗೂಢ ನಾಪತ್ತೆಗೆ ಸಂಬಂಧಿಸಿದ ಸಂಯುಕ್ತ ಕರ್ನಾಟಕದ ವಿಶೇಷ ವರದಿ ಶಾಸನಸಭೆಯಲ್ಲಿ ಕೋಲಾಹಲ ಸೃಷ್ಟಿಸಿತ್ತು. ಅದೇ ರೀತಿ ರೈತರ ಮೇಲೆ ಮಧುಗಿರಿಯಲ್ಲಿ ಜರುಗಿದ ಗೋಲಿಬಾರ್ ಪ್ರಕರಣವೂ ಕೂಡಾ ಸಂಯುಕ್ತ ಕರ್ನಾಟಕದಲ್ಲಿ ವರದಿಯ ರೂಪದಲ್ಲಿ ಮಾತಿನ ಚಕಮಕಿಗೆ ಕಾರಣವಾಗಿ ಗೃಹ ಮಂತ್ರಿಯಾಗಿದ್ದ ಎಂ.ವಿ. ರಾಮರಾವ್ ರಾಜೀನಾಮೆಗೆ ಕಾರಣವಾಗಿತ್ತು.
ಸಂಸತ್ತಿನಲ್ಲಿ ಮಧು ದಂಡವತೆ, ಜಾರ್ಜ್ ಫರ್ನಾಂಡಿಸ್, ಮಧುಲಿಮೆಯೇ, ಎಲ್.ಕೆ. ಆಡ್ವಾಣಿ, ಇಂದ್ರಜಿತ್ ಗುಪ್ತ, ಪೀಲೂ ಮೋದಿ, ಪ್ರೊ. ಎನ್.ಜಿ. ರಂಗ ಮೊದಲಾದವರು ಪತ್ರಿಕಾ ಲೇಖನಗಳನ್ನು ಆಧರಿಸಿ ಕಲಾಪ ಹೊಸ ರೂಪ ಪಡೆದುಕೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು.

ವಿಧಾನ ಸಭೆಯಲ್ಲೂ ಪ್ರತಿಧ್ವನಿ
ವಿಧಾನಸಭೆ: ಬಹುಶಃ ಕರ್ನಾಟಕ ವಿಧಾನಸಭೆಯಲ್ಲಿ ಇದೇ ಪ್ರಥಮ ಬಾರಿಗೆ ರಾಜ್ಯಪಾಲರ ಭಾಷಣ ಕುರಿತ ಮಾಧ್ಯಮ ಸಂಪಾದಕೀಯಗಳು ಬಹುದೊಡ್ಡ ಪ್ರಮಾಣದಲ್ಲಿ ಸದ್ದು ಮಾಡಿದ ಪ್ರಸಂಗ ಮಂಗಳವಾರ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಇವನ್ನು ಉಲ್ಲೇಖಿಸುವ ಮೂಲಕ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರ ನೀಡಿದರು.
ಸಿದ್ದರಾಮಯ್ಯ ತಮ್ಮ ಸುದೀರ್ಘ ಭಾಷಣದಲ್ಲಿ ಅರ್ಧಗಂಟೆಗಳಷ್ಟು ಸಮಯವನ್ನು ಪತ್ರಿಕೆಗಳು ರಾಜ್ಯಪಾಲರ ಭಾಷಣದ ಬಗ್ಗೆ ಏನು ಹೇಳಿವೆ ಎಂಬುದಕ್ಕೆ ಮೀಸಲಿಟ್ಟಿದ್ದು ಗಮನ ಸೆಳೆಯಿತು.
ರಾಜ್ಯಪಾಲರಿಂದ ಸುಳ್ಳು ಹೇಳಿಸಿದ್ದೇವೆ ಎಂಬ ನಿಮ್ಮ ಆರೋಪ ಸಹಜ. ಆದರೆ ಎಲ್ಲ ಮಾಧ್ಯಮಗಳೂ ಭಾಷಣವನ್ನು ಶ್ಲಾಘಿಸಿ ಸಂಪಾದಕೀಯ ಬರೆದಿವೆ. ಇದಕ್ಕೆ ಏನನ್ನುತ್ತೀರಿ ಎಂದು ಪ್ರತಿಪಕ್ಷ ಬಿಜೆಪಿಗೆ ಸವಾಲು ಹಾಕಿದ ಸಿದ್ದರಾಮಯ್ಯ ನಂತರ ಒಂದೊಂದೇ ಪತ್ರಿಕೆಗಳ ಸಂಪಾದಕೀಯಗಳನ್ನು ಉದಾಹರಿಸಲಾರಂಭಿಸಿದರು.
ಅವರು ಮೊದಲು ಕೈಗೆತ್ತಿಕೊಂಡಿದ್ದೇ ಸಂಯುಕ್ತ ಕರ್ನಾಟಕ'ದ ಸಂಪಾದಕೀಯ. ರಾಜ್ಯಪಾಲರು ಜಂಟಿ ಅಧಿವೇಶನದ ದಿನ ಮಾಡಿದ ಭಾಷಣ ಕರ್ನಾಟಕದ ಅಭಿವೃದ್ಧಿಗೆ ಪೂರಕ ಎಂಬುದಾಗಿ ಪತ್ರಿಕೆ ಬರೆದಿತ್ತು. ಸಂಯುಕ್ತ ಕರ್ನಾಟಕ ಸಂಪಾದಕೀಯ ರಾಜ್ಯಪಾಲರ ಭಾಷಣದ ಗಟ್ಟಿತನವನ್ನು ಗುರುತಿಸಿದೆ. ರಾಜ್ಯದ ಪ್ರಗತಿಗೆ ನಮ್ಮ ಸರ್ಕಾರದ ನೀಲನಕ್ಷೆಯ ಕುರಿತು ರಾಜ್ಯಪಾಲರ ಭಾಷಣ ಹೇಳಿರುವುದು ಮೆಚ್ಚುಗೆ ತೋರಿಸಿದೆ. ಇದನ್ನು ಇಡೀ ಸದನ ಗಮನಿಸಬೇಕು. ಆಡಳಿತಾರೂಢರಾಗಿ ನಾವಷ್ಟೇ ಹೇಳಿದ್ದರೆ ಮಾತು ಬೇರೆ. ಪತ್ರಿಕೆ ಹೇಳಿರುವ ಮಾತುಗಳಿವು ಎಂಬುದನ್ನು ವಿರೋಧ ಪಕ್ಷ ನೋಡಲಿ’ ಎಂದು ಸಿದ್ದರಾಮಯ್ಯ ಹೇಳಿದರು. ಅಷ್ಟೇ ಅಲ್ಲ ಸಂಪಾದಕೀಯವನ್ನು ಹೆಚ್ಚೂ ಕಡಿಮೆ ಪೂರ್ಣವಾಗಿ ಓದಿದರು. ಇತರ ಪತ್ರಿಕೆಗಳಲ್ಲಿ ರಾಜ್ಯಪಾಲರ ಭಾಷಣದ ಪರ ಬಂದ ಸಂಪಾದಕೀಯಗಳ ಕೆಲ ಸಾಲುಗಳನ್ನು ಕೂಡ ಓದಿ ವಿರೋಧ ಪಕ್ಷವನ್ನು ಟೀಕಿಸಿದರು.