ದೇಶದೆಲ್ಲೆಡೆ ಜನತೆ ಸಾತಂತ ಅಮೃತ ಮಹೋತ್ಸವದ ಸಂಭ್ರಮದಲ್ಲಿರುವಾಗಲೇ ಶಿವಮೊಗ್ಗದಲ್ಲಿ ಫ್ಲೆಕ್ಸ್ ಹಾಕುವ ವಿಚಾರಕ್ಕೆ ಯುವಕನೊಬ್ಬನ ಮೇಲೆ ಚಾಕು ಇರಿದು ಗಾಯಗೊಳಿಸಿರುವುದು ಸಂಭ್ರಮದ ಸಂದರ್ಭದಲ್ಲಿ ಕಪ್ಪು ಚುಕ್ಕೆಯಂತಾಯಿತು. ಹಿಂದೂ ಸಂಘಟನೆಯ ಕಾರ್ಯಕರ್ತ ಹರ್ಷನ ಕೊಲೆ ಪ್ರಕರಣ ಇನ್ನೂ ಹಸಿರಾಗಿರುವಾಗಲೇ, ಮಲೆನಾಡಿನ ಹೆಬ್ಬಾಗಿಲಿನಲ್ಲಿ ಇಂತಹದೊಂದು ಘಟನೆ ನಡೆದಿವುದು ವಿಷಾದದ ಸಂಗತಿ. ಕನ್ನಡ ನಾಡು ಸರ್ವಜನಾಂಗದ ಶಾಂತಿಯ ತೋಟ' ಎಂದು ಹಾಡಿರುವ ರಾಷಕವಿ ಕುವೆಂಪು ಜನ್ಮ ತಾಳಿದ ಜಿಲ್ಲೆಯಲ್ಲಿಯೇ ಇಂತಹ ಘಟನೆಗಳು ಮರುಕಳಿಸುತ್ತಿವೆ. ಅಂದು
ಏಸೂರು ಕೊಟ್ಟರೂ ಈಸೂರು ಕೊಡೆವು’ ಎಂದು ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ತ್ರಿವರ್ಣ ಧಜ ಹಾರಿಸಿ ಸಾತಂತ ಚಳವಳಿಗೆ ಜನರನ್ನು ಪ್ರೇರೇಪಿಸಿದ ಮಲೆನಾಡಿನಲ್ಲಿ, ನಂತರ ರೈತ ಚಳವಳಿ, ಕಾಗೋಡು ಸತ್ಯಾಗ್ರಹದಂತಹ ಹೋರಾಟಗಳಲ್ಲಿ ಯಶಸ್ಸು ಸಾಧಿಸಿ ಸಾಮಾಜಿಕ ಚಳವಳಿಗೆ ನಾಂದಿ ಹಾಡಿದ ಜಿಲ್ಲೆ ಶಿವಮೊಗ್ಗ. ಇಲ್ಲಿನ ಜನತೆ ಶಾಂತಿ ಪ್ರಿಯರು, ಸುಶಿಕ್ಷತರು, ಎಲ್ಲರೊಂದಿಗೆ ಒಟ್ಟುಗೂಡಿ ಜೀವನ ಮಾಡಿದಂತಹವರ ನೆಲೆಯಾಗಿದೆ. ಹಬ್ಬ-ಹರಿದಿನ, ಜಾತ್ರೆ-ಉತ್ಸವಗಳನ್ನು ಒಟ್ಟುಗೂಡಿಯೇ ಆಚರಿಸುತ್ತಾರೆ. ಇಂತಹ ಸೌಹಾರ್ದಯತ ವಾತಾವರಣದಲ್ಲಿ ಹುಳಿ ಹಿಂಡುವ ಕೆಲಸ ನಡೆಯುತ್ತಿದೆ. ಸೌಹಾರ್ದ ವಾತಾವರಣ ಕದಡುವಂತಹ ಕೃತ್ಯದಲ್ಲಿ ಭಾಗಿಯಾದವರನ್ನು ಹಿಡಿದು ಹೆಡೆಮುರಿ ಕಟ್ಟಬೇಕಿದೆ. ಸಮಾಜ ಘಾತುಕ ಶಕ್ತಿಗಳು ಮತ್ತೆ ಮತ್ತೆ ತಲೆ ಎತ್ತದಂತೆ ಕಠಿಣ ಕ್ರಮ ಜರುಗಿಸಬೇಕಿದೆ.
ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿ ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿರುವುದರಿಂದ ಅಲ್ಲಿನ ಜನತೆ ಆತಂಕಕ್ಕೀಡಾಗಿದ್ದಾರೆ. ಸಾಲದೆಂಬಂತೆ ತಮ್ಮ ರಾಜಕೀಯ ಓಟಿನಾಸೆಗಾಗಿ ಬಾಯಿಗೆ ಬಂದಂತೆ ಮಾತನಾಡುವ ರಾಜಕೀಯ ಧುರೀಣರು ಉರಿಯುವ ಬೆಂಕಿಗೆ ತುಪ್ಪ ಸುರಿಯುತ್ತಿದ್ದರೆ. ಜವಾಬ್ಧಾರಿಯುತ ಸ್ಥಾನದಲ್ಲಿರುವ ರಾಜಕೀಯ ನಾಯಕರ ಹೇಳಿಕೆಗಳಿಂದ ಜನರ ಮನಸ್ಸುಗಳು ಅರಳಬೇಕೆ ಹೊರತು, ಕೆರಳುವಂತಾಗಬಾರದು, ಪರಿಸ್ಥಿತಿಯ ಸೂಕ್ಷ್ಮತೆ ಅರಿತುಕೊಂಡು ಯಾವ ಸಮಾಜದ ಜನರ ಮನಸ್ಸಿಗೂ ನೋವಾಗದಂತೆ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಬೇಕು. ಅಂತಹ ಕೆಲಸ ತಮ್ಮ ಕಡೆಯಿಂದ ಆಗದಿರೆ ಸುಮ್ಮನಿರಬೇಕು. ವಿನಾಕಾರಣ ಇಲ್ಲಸಲ್ಲದ ಹೇಳಿಕೆ ನೀಡಿ, ಜನರನ್ನು ಇನ್ನಷ್ಟು ರೊಚ್ಚಿಗೆಬ್ಬಿಸಬಾರದು. ಮಲೆನಾಡಿನ ಶಿವಮೊಗ್ಗದಲ್ಲಿ ಕೆಲ ಸೂಕ್ಷ್ಮ ಪ್ರದೇಶಗಳಲ್ಲಿ ನಡೆದಿರುವ ಹಿಂಸಾತ್ಮಕ ಘಟನೆಗಳು ಹಾಗೂ ಭದ್ರಾವತಿ ನಗರದಲ್ಲಿ ಚಾಕು ಇರಿತದ ಪ್ರಕರಣದ ನಂತರ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ನೀಡುತ್ತಿರುವ ಹೇಳಿಕೆಗಳಿಂದ ಜನರಲ್ಲಿ ತಪ್ಪು ಮಾಹಿತಿ ಹೋಗಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಬಾರದು. ಭದ್ರಾವತಿಯಲ್ಲಿ ನಡೆದ ಘಟನೆಗೂ ಶಿವಮೊಗ್ಗದ ಘಟನೆಗೂ ಯಾವುದೇ ಸಂಬಂಧವಿಲ್ಲ ಎಂಬುದು ಪೊಲೀಸ್ ತನಿಖೆಯಿಂದ ತಿಳಿದಿದ್ದು, ವೈಯಕ್ತಿಕ ಜಗಳವನ್ನು ಕೆಲವು ದುಷ್ಕರ್ಮಿಗಳು ಶಿವಮೊಗ್ಗ ಘಟನೆಗೆ ಸಂಬಂಧ ಕಲ್ಪಿಸಿ ಇನ್ನಷ್ಟು ದುಷ್ಕೃತ್ಯ ಎಸಗಲು ಪ್ರಯತ್ನ ನಡೆಸಿ ಬಗ್ಗೆ ಪೊಲೀಸರು ಪತ್ತೆ ಮಾಡಿದ್ದಾರೆ. ಹಿಂಸಾತ್ಮಕ ಘಟನೆಗಳಿಗೆ ಕಾರಣವಾಗುವ ವ್ಯಕ್ತಿಗಳು ಮತ್ತು ಸಂಘಟನೆಗಳಿಗೆ ಮುಲಾಜಿಲ್ಲದೆ ಶಿಕ್ಷೆಯ ರುಚಿ ತೋರಿಸಬೇಕು. ಮುಂದಿನ ದಿನಗಳಲ್ಲಿ ಯಾವತ್ತೂ ಇಂತಹ ಕೃತ್ಯಗಳಿಗೆ ಇಂಬು ಕೊಡದಂತೆ ಸರ್ಕಾರ ಕಟ್ಟೆಚ್ಚರ ವಹಿಸಬೇಕು. ಸಮಾಜಘಾತುಕ ಶಕ್ತಿಗಳ ಮೇಲೆ ಹದ್ದಿನ ಕಣ್ಣಿಡುವ ಮೂಲಕ ಮಲೆನಾಡಿನ ಶಾಂತಿಪ್ರಿಯ ನಾಗರಿಕರಿಗೆ ರಕ್ಷಣೆ ನೀಡಬೇಕು.