ಹುಬ್ಬಳ್ಳಿ: ಶಬರಿಮಲೈಗೆ ಹೋಗುವ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಹುಬ್ಬಳ್ಳಿ ಹಾಗೂ ಬೆಳಗಾವಿಯಿಂದ ಕೇರಳದ ಕೊಲ್ಲಂಗೆ ಎರಡು ಹಂತಗಳಲ್ಲಿ ವಿಶೇಷ ರೈಲುಗಳನ್ನು ನೈಋತ್ಯ ರೈಲ್ವೆ ಓಡಿಸಲಿದೆ.
ಮೊದಲ ಹಂತವಾಗಿ ಬೆಳಗಾವಿಯಿಂದ ನವೆಂಬರ್ ೨೦ ಮತ್ತು ಹುಬ್ಬಳ್ಳಿಯಿಂದ ನವೆಂಬರ್ ೨೭ರಂದು ಈ ರೈಲು ಸಂಚರಿಸುತ್ತದೆ. ನವೆಂಬರ್ ೨೦ರಂದು ಬೆಳಿಗ್ಗೆ ೧೧.೩೦ಕ್ಕೆ ಹೊರಡುವ ರೈಲು (ಸಂಖ್ಯೆ ೦೭೩೫೭) ಮರುದಿನ ಮಧ್ಯಾಹ್ನ ೩.೧೫ಕ್ಕೆ ಕೊಲ್ಲಂ ತಲುಪುತ್ತದೆ. ನವೆಂಬರ್ ೨೧ರಂದು ಸಂಜೆ ೫.೧೦ಕ್ಕೆ ಹೊರಟು ಮರುದಿನ ರಾತ್ರಿ ೧೧ಕ್ಕೆ ಬೆಳಗಾವಿ ಸೇರುತ್ತದೆ. ಈ ರೈಲು ಧಾರವಾಡ, ಹುಬ್ಬಳ್ಳಿ, ರಾಣೆಬೆನ್ನೂರು, ತುಮಕೂರು, ಕೆ.ಆರ್.ಪುರಂ ಮಾರ್ಗವಾಗಿ ಸಂಚರಿಸುತ್ತದೆ.
ನವೆಂಬರ್ ೨೭ರಂದು ಹುಬ್ಬಳ್ಳಿಯಿಂದ ಹೊರಡುವ ವಿಶೇಷ ರೈಲು (೦೭೩೫೯) ಮಧ್ಯಾಹ್ನ ೨.೪೦ಕ್ಕೆ ಹೊರಟು ಮರುದಿನ ಮಧ್ಯಾಹ್ನ ೩.೧೫ಕ್ಕೆ ಕೊಲ್ಲಂ ತಲುಪುತ್ತದೆ. ನವೆಂಬರ್ ೨೮ರಂದು ಸಂಜೆ ೫.೧೦ಕ್ಕೆ ಕೊಲ್ಲಂನಿಂದ ಹೊರಟು ಮರುದಿನ ರಾತ್ರಿ ೮ಕ್ಕೆ ಹುಬ್ಬಳ್ಳಿ ಸೇರುತ್ತದೆ.
ಇದಲ್ಲದೇ ಬೆಳಗಾವಿ-ಕೊಲ್ಲಂ-ಬೆಳಗಾವಿ ಏಳು ವಿಶೇಷ ರೈಲುಗಳು ಡಿಸೆಂಬರ್ ೪ರಿಂದ ಜನವರಿ ೧೫ನೇ ತಾರೀಕಿನವರೆಗೆ ಸಂಚರಿಸಲಿವೆ. ಪ್ರತಿ ಭಾನುವಾರ ಬೆಳಿಗ್ಗೆ ೧೧.೩೦ ಹಾಗೂ ಪ್ರತಿ ಸೋಮವಾರ ಸಂಜೆ ೫.೧೦ಕ್ಕೆ ಹೊರಡುವ ಇವು ಧಾರವಾಡ-ಹುಬ್ಬಳ್ಳಿ ಮಾರ್ಗವಾಗಿ ಸಂಚರಿಸುತ್ತವೆ. ಶಬರಿಮಲೈ ಯಾತ್ರಾರ್ಥಿಗಳಿಗಾಗಿ ಜನವರಿ ೧೫ರವರೆಗೆ ವಿಶೇಷ ರೈಲು ಓಡಿಸುವಂತೆ ಬೆಳಗಾವಿ ಸಂಸದರಾದ ಮಂಗಳಾ ಅಂಗಡಿ ಮನವಿ ಮಾಡಿದ್ದನ್ನು ಪುರಸ್ಕರಿಸಿ ಇಲಾಖೆ ಇವನ್ನು ಓಡಿಸಲಿದೆ ಎಂದು ನೈಋತ್ಯ ರೈಲ್ವೆ ಪ್ರಧಾನ ಸಾರ್ವಜನಿಕ ಸಂಪರ್ಕಾಧಿಕಾರಿ ಅನೀಶ್ ಹೆಗಡೆ ತಿಳಿಸಿದ್ದಾರೆ.