ಶಂಕರಾಚಾರ್ಯರನ್ನು ಅಧ್ಯಯನ ಮಾಡಿದರೆ ಸನಾತನ ಧರ್ಮಕ್ಕೆ ಮಾರ್ಗ

Advertisement

ಮಂಗಳೂರು: ಶಂಕರಾಚಾರ್ಯರನ್ನು ಅಧ್ಯಯನ ಮಾಡಿದರೆ ನಾವೆಲ್ಲ ಜ್ಞಾನ, ಸತ್ಯ, ಧರ್ಮ, ಆಧ್ಯಾತ್ಮದೊಂದಿಗೆ ಸನಾತನ ಧರ್ಮಕ್ಕೆ ಮಾರ್ಗ ತೋರಿಸುತ್ತದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾದ ಅಧ್ಯಕ್ಷ ಅಶೋಕ್ ಹಾರ‍್ನಹಳ್ಳಿ ಹೇಳಿದರು.
ಅವರು ಜ.೨೨ ರಂದು ಧರ್ಮಾಧಿಕಾರಿ ಶ್ರೀ ಬೊಳ್ಳಾವ ಸತ್ಯಶಂಕರ ಅಭಿನಂದನಾ ಸಮಿತಿಯ ವತಿಯಿಂದ ಆಯೋಜಿಸಿದ್ದ, ಅಭಿನಂದನಾ ಕಾರ್ಯಕ್ರಮದಲ್ಲಿ ಸ್ಮರನ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ನಮಗೆ ಈಗ ಧರ್ಮವೇ ವ್ಯಾಪಾರೀಕರಣವಾದಂತೆ ಕಾಣುತ್ತದೆ. ನೋಡಿದಲ್ಲಿಗೆ ಹೋಗಬೇಕನಿಸುತ್ತದೆ. ನಮ್ಮ ಹಿಂದಿನವರು ನಮಗಾಗಿ ಹಾಕಿಕೊಟ್ಟ ಮಾರ್ಗವನ್ನು ನಾವು ಮರೆಯಬಾರದು, ನಾವು ಎಂದಿಗೂ ನಮ್ಮ ಪರಂಪರೆಯನ್ನು ಮರೆಯಬಾರದು. ಎಲ್ಲಿಗೇ ಹೋದರೂ ನಾವು ನಮ್ಮ ಧರ್ಮದಲ್ಲಿ ನಡೆಯಬೇಕು ಎಂದರು.
ಸತ್ಯಶಂಕರ ಅವರು ಶಂಕರರೇ ಸತ್ಯ ಎಂಬುವುದನ್ನು ತೋರಿಸಿದ್ದಾರೆ. ಈ ಭಾಗದ ಜನರು ಶೃಂಗೇರಿ ಮಠದಿಂದ ದೂರ ಇದ್ದವರನ್ನು ಒಟ್ಟಿಗೆ ಸೇರಿಸಿ ಜನರಲ್ಲಿಗೆ ಗುರುವಲ್ಲ, ಗುರುವಲ್ಲಿಗೇ ಜನರು ಎಂಬುವುದನ್ನು ಕಾರ್ಯ ರೂಪದಲ್ಲಿ ಮಾಡಿ ತೋರಿಸಿದವರು ಸತ್ಯಶಂಕರರು ಅವರು ಶಂಕರಾಚಾರ್ಯರ ಚಿಂತನೆಗಳನ್ನು ಅಚಲಗೊಳಿಸಿದ್ದಾರೆ. ಇವರು ದೇವರ ಕೆಲಸದಲ್ಲಿ ಬಹಳ ದೊಡ್ಡ ಸ್ಥಾನದಲ್ಲಿದ್ದಾರೆ ಎಂದು ಹೇಳಿದರು.
ಮಂಗಳೂರಿನಿಂದ ಶೃಂಗೇರಿಗೆ ಕೇವಲ ೩ ಗಂಟೆಗಳ ಕಾಲವಕಾಶವಿದೆ ನಾವು ಶೃಂಗೇರಿಗೆ ತೆರಳದೇ ರಾಜ್ಯ-ದೇಶವನ್ನೆಲ್ಲ ಸುತ್ತುತ್ತಿದ್ದೇವೆ. ನಮಗೆ ಶೃಂಗೇರಿ ದೂರವಿಲ್ಲ. ನಮ್ಮ ಮನಸ್ಸಿನಿಂದ ಶೃಂಗೇರಿ ದೂರವಾಗಿದೆ. ಶೃಂಗೇರಿಯಲ್ಲಿರುವ ಪ್ರತಿಯೋರ್ವ ಸನ್ಯಾಸಿಯೂ ಒಂದೊಂದು ದೊಡ್ಡ ಸಾಧನೆಯನ್ನು ಮಾಡಿದ್ದು, ಅದು ರೋಮಾಂಚಕವಾಗಿದೆ ಎಂದರು.
ಈ ಸಂದರ್ಭದಲ್ಲಿ ಧರ್ಮಾಧಿಕಾರಿ ಬೊಳ್ಳಾವ ಸತ್ಯಶಂಕರ ಅವರನ್ನು ಶೃಂಗೇರಿ ಶ್ರೀ ಶಾರದಾ ಪೀಠದ ದಕ್ಷಿಣಾಮ್ನಾಯ ಹಾಗೂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ, ಆಡಳಿತಾಧಿಕಾರಿ ಡಾ| ವಿ.ಆರ್. ಗೌರಿಶಂಕರ್ ಅಭಿನಂದಿಸಿದರು.
ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಶೃಂಗೇರಿ ಶ್ರೀ ಶಾರದಾ ಪೀಠದ ದಕ್ಷಿಣಾಮ್ನಾಯ ಹಾಗೂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ, ಆಡಳಿತಾಧಿಕಾರಿ ಡಾ| ವಿ.ಆರ್. ಗೌರಿಶಂಕರ್ ವಹಿಸಿ ಮಾತನಾಡಿದರು.
ಅಭಿನಂದನೆಯನ್ನು ಸ್ವೀಕರಿಸಿ ಶೃಂಗೇರಿ ಮಠ ಕೋಟೆಕಾರಿನ ದ.ಕ. ಜಿಲ್ಲಾ ಧರ್ಮಾಧಿಕಾರಿ ಬೊಳ್ಳಾವ ಸತ್ಯಶಂಕರ ಅವರು ಮಾತನಾಡಿದರು.
ಕರ್ನಾಟಕ ಬ್ಯಾಂಕಿನ ಅಧ್ಯಕ್ಷ ಪ್ರದೀಪ್ ಕುಮಾರ್ ಪಂಜ, ಮಾಜಿ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಟಿ. ಶ್ಯಾಮ ಭಟ್, ಬೆಟ್ಟಂಪಾಡಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ| ವರದರಾಜ ಚಂದ್ರಗಿರಿ, ಶೃಂಗೇರಿ ಮಠದ ಕುಂದಾಪು ಮತ್ತು ಭಟ್ಕಾಳ ಪ್ರಾಂತ ಧರ್ಮಾಧಿಕಾರಿ ಲೋಕೇಶ ಅಡಿಗ, ಉಡುಪಿ ಪ್ರಾಂತ ಧರ್ಮಾಧಿಕಾರಿ ಎಸ್. ವಾಗೀಶ ಶಾಸ್ತ್ರಿ, ಶ್ರೀ ಸೋಮನಾಥ ದೇವಸ್ಥಾನದ ವ್ಯವಸ್ಥಾಪನ ಅಧ್ಯಕ್ಷ ಬಿ.ಬಿ. ರವೀಂದ್ರನಾಥ ರೈ, ಎನ್.ಕೆ. ಜಗನ್ನಿವಾಸ ರಾವ್, ವರದರಾಯ ಸುಬ್ರಾಯ ನಾಗ್ವೇಕರ್, ಕೆ. ಕೇಶವ ಆಚಾರ್ಯ, ಪಿ. ಲಕ್ಷ್ಮೀನಾರಾಯಣ ರಾವ್, ಪ್ರೊ. ಸಾಯಿನಾಥ ಮಲ್ಲಿಗೆಮಾಡು ಮತ್ತಿತರರು ಇದ್ದರು.