ಹುಬ್ಬಳ್ಳಿ: ಹಬ್ಬಗಳು ನಮ್ಮ ದೈನಂದಿನ ಬದುಕಿನ ಏಕತಾನತೆಯನ್ನು ಮರೆಸುತ್ತವೆ. ಬದುಕಿಗೆ ಹೊಸ ಅಸೆ, ಜೀವನೋತ್ಸಾಹ ಹೆಚ್ಚಿಸುತ್ತವೆ. ಇಂತಹ ಒಂದು ಹಬ್ಬ “ಅಕ್ಷಯ ತೃತೀಯ’.
ಇದು ಸಮೃದ್ಧಿಯ ಪ್ರತೀಕವಾಗಿ ಆಚರಿಸಲ್ಪಡುವ ಹಬ್ಬ. ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ದಿನವೇ ಅಕ್ಷಯ ತೃತೀಯ. ಈ ದಿವಸ ಯಾವುದೇ ಶುಭ ಕಾರ್ಯಗಳನ್ನು ಮಾಡಿದರೂ ಅದು ಯಶಸ್ವಿಯಾಗಿ ನಡೆದು, ಅಕ್ಷಯ ಫಲಗಳನ್ನು ನೀಡುವುದೆಂಬ ನಂಬಿಕೆ ಜನಮನದಲ್ಲಿದೆ.
ಅಕ್ಷಯ ತೃತೀಯದಂದು ಚಿನ್ನ, ಬೆಳ್ಳಿ, ಮುತ್ತು, ರತ್ನ ಇತ್ಯಾದಿ ಬೆಲೆಬಾಳುವ ವಸ್ತುಗಳ ಖರೀದಿಗೆ, ಗೃಹಪ್ರವೇಶ, ಭೂಮಿ ಪೂಜೆ, ವ್ಯಾಪಾರ ವಹಿವಾಟಿನಲ್ಲಿ ಹಣ ತೊಡಗಿಸಿ ಕಾರ್ಯ ಪ್ರಾರಂಭಿಸಿದರೆ ಉತ್ತರೋತ್ತರ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಬಲವಾದ ವಿಶ್ವಾಸವಿದೆ. ಕೈಗೊಂಡ ಕೆಲಸಗಳೆಲ್ಲವೂ ಅಕ್ಷಯವಾಗುವುದೆಂದು ನಂಬಲಾಗಿದೆ. ರೈತರು ಹೊಲದಲ್ಲಿ ಮೊಟ್ಟ ಮೊದಲು ಉತ್ತು ಬಿತ್ತುವುದಕ್ಕೂ ಇದು ಪುಣ್ಯ ಮುಹೂರ್ತ. ಹೊಸ ಉದ್ಯಮ, ಉದ್ಯೋಗಗಳನ್ನು ಪ್ರಾರಂಭಿಸಲು ಇದಕ್ಕಿಂತ ಪ್ರಶಸ್ತ ದಿನ ಮತ್ತೂಂದಿಲ್ಲ.
ಅಕ್ಷಯ ತೃತೀಯದಂದೇ ಅವತಾರವೆತ್ತಿದವರು…!
೧ ಪರಶುರಾಮ
೨ ಬಸವಣ್ಣನವರು
೩ ಛತ್ರಪತಿ ಶಿವಾಜಿ
೪ ಗುರುನಾನಕರು
ಏನೀದಿನದ ವಿಶೇಷ…..
ಮಹಾಭಾರತ ಬರೆಯಲು ಆರಂಭಿಸಿದ ಶುಭ. ಕರು ನಾಡ ದೇವಿ ಚಾಮುಂಡೇಶ್ವರಿ ಮಹಿಷಾ ಸುರರನ್ನು ಸಂಹಾರ ಮಾಡಿ ಜಗತ್ತಿನ ಕಂಟಕವನ್ನು ಕಳೆದಿದ್ದೂ ಈ ದಿನ. ಭಗೀರತ ಮಹರ್ಷಿಯ ತಪಸ್ಸಿಗೆ ಒಲಿದು ಮಾತೆಯು ಭುವಿಗೆ ಇಳಿದಿದ್ದೂ ಅಕ್ಷಯ ತೃತೀಯದ ಪುಣ್ಯದಿನವೇ. ಬಡತನದಲ್ಲಿ ಬೆಂದು ಬಸವಳಿದಿದ್ದ ಕುಚೇಲ ತನ್ನ ಪ್ರಿಯ ಸಖನಾದ ಶ್ರೀಕೃಷ್ಣನ ಬಳಿ ಹೋಗಿ ತನ್ನಲ್ಲಿದ್ದ ಹಿಡಿ ಅವಲಕ್ಕಿಯನ್ನು ಕೊಟ್ಟಾಗ ಶ್ರೀ ಕೃಷ್ಣ ಅದನ್ನೇ ಪ್ರೀತಿಯಿಂದ ಸ್ವೀಕರಿಸಿ, ಬಾಲ್ಯದ ಗೆಳೆಯನಿಗೆ ಸಕಲ ಸಂಪತ್ತನ್ನು ಕರುಣಿಸಿದ್ದು ಇದೇ ಅಕ್ಷಯ ತೃತೀಯ ದಿನದಂತೆ ಎನ್ನುವುದು ವಿಶೇಷ.
ಜೈನ ಧರ್ಮದಲ್ಲಿ ವಿಶೇಷ ಪ್ರಾಧಾನ್ಯ…
ಅಕ್ಷಯ ತೃತೀಯಕ್ಕೆ ಹಿಂದೂ ಹಾಗೂ ಜೈನ ಧರ್ಮದಲ್ಲಿ ವಿಶೇಷ ಪ್ರಾಧಾನ್ಯವಿದೆ. ಈ ದಿನದಂದು ಹಿಂದೂಗಳು ಚಿನ್ನ ಖರೀದಿಸುವುದಕ್ಕೆ ಪ್ರಾಶಸ್ತ್ಯ ನೀಡಿದರೆ, ಜೈನರು ಉಪವಾಸ, ವ್ರತಗಳನ್ನು ಕೈಗೊಳ್ಳುತ್ತಾರೆ. ಅಕ್ಷಯ ತೃತೀಯ ಆಚರಣೆ, ತಿಥಿ ಸಮಯ ಹಾಗೂ ಸಮೃದ್ಧಿಯ ಸಂಕೇತವಾದ ಅಕ್ಷಯ ತೃತೀಯವನ್ನು ‘ಅಖಾ ತೀಜ್’ ಎಂದೂ ಕರೆಯಲಾಗುತ್ತದೆ. ಈ ಹಬ್ಬಕ್ಕೆ ಹಿಂದೂ ಹಾಗೂ ಜೈನ ಸಂಪ್ರದಾಯದಲ್ಲಿ ವಿಶೇಷ ಪ್ರಾಧಾನ್ಯವಿದೆ. ಅನಾದಿ ಕಾಲದಿಂದಲೂ ಅಕ್ಷಯ ತೃತೀಯ ಆಚರಣೆ ರೂಢಿಯಲ್ಲಿತ್ತು. ಹಿಂದೂ ಪಂಚಾಂಗದ ಪ್ರಕಾರ ವೈಶಾಖ ಮಾಸ ಶುಕ್ಲ ಪಕ್ಷದ ಮೂರನೇ ದಿನದಂದು ಈ ಹಬ್ಬವನ್ನು ಆಚರಿಸಲಾಗುತ್ತದೆ.