ವೈದ್ಯಕೀಯ ಕಾಲೇಜುಗಳಲ್ಲಿ ಸೀಟುಗಳು ಖಾಲಿ ಇವೆ ಎಂದು ಕನಿಷ್ಟ ಅಂಕವೇ ಬೇಡ ಎನ್ನುವುದು ಮೆರಿಟ್‌ಗೆ ತಿಲಾಂಜಲಿ ನೀಡಿದಂತೆ. ವೈದ್ಯರ ಜ್ಞಾನ ಕೊರತೆ ರೋಗಿಗೆ ಮುಳುವಾಗಬಾರದು.
ದೇಶಾದ್ಯಂತ ಅಲೋಪತಿ ವೈದ್ಯರ ಗುಣಮಟ್ಟಕ್ಕೆ ಮೊದಲಿನಿಂದಲೂ ಆದ್ಯತೆ ನೀಡುತ್ತ ಬರಲಾಗಿದೆ. ಇದರಿಂದ ವೈದ್ಯರ ಸಂಖ್ಯೆ ಕಡಿಮೆ ಇದ್ದರೂ ಶಿಕ್ಷಣ ಮಟ್ಟವನ್ನು ಕಡಿಮೆ ಮಾಡುವ ತೀರ್ಮಾನ ಇದುವರೆಗೆ ಕೈಗೊಂಡಿರಲಿಲ್ಲ. ಇದೇ ಮೊದಲ ಬಾರಿ ರಾಷ್ಟ್ರೀಯ ವೈದ್ಯಕೀಯ ಆಯೋಗ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆಯಲು ಇದ್ದ ಅಂಕದ ಮಿತಿಯನ್ನು ತೆಗೆದುಹಾಕಿದೆ. ಅಂದರೆ ಪ್ರವೇಶ ಪರೀಕ್ಷೆ ತೆಗೆದುಕೊಂಡವರೆಲ್ಲೂ ಅರ್ಹರು ಎಂದು ಘೋಷಿಸಲಾಗಿದೆ. ಹೀಗಾಗಿ ಪಿಜಿ ನೀಟ್ ಪರೀಕ್ಷೆ ತನ್ನ ಮಹತ್ವವನ್ನು ಕಳೆದುಕೊಂಡಿದೆ. ಜಾಗತಿಕ ಮಟ್ಟದಲ್ಲಿ ಭಾರತೀಯ ವೈದ್ಯಕೀಯ ಶಿಕ್ಷಣಕ್ಕೆ ಉತ್ತಮ ಹೆಸರಿದೆ. ಅದಕ್ಕೆ ಮುಖ್ಯ ಕಾರಣ ನಮ್ಮಲ್ಲಿರುವ ಗುಣಮಟ್ಟ ಶಿಕ್ಷಣ. ಎಂಬಿಬಿಎಸ್ ನಮ್ಮಲ್ಲಿ ಓದಿದವರಿಗೆ ಪಿಜಿ ಪದವಿ ಪಡೆಯುವುದು ಅಷ್ಟು ಕಷ್ಟವಿಲ್ಲ. ವೈದ್ಯಕೀಯ ರಂಗದಲ್ಲಿ ಒಬ್ಬ ವೈದ್ಯ ಪಡೆಯಬೇಕಾದ ಎಲ್ಲ ಜ್ಞಾನವನ್ನು ನೀಡಲಾಗುತ್ತಿದೆ. ಅದರ ಆಧಾರದ ಮೇಲೆ ಪಿಜಿ ಪಡೆಯಲು ಸಹಕಾರಿಯಾಗುತ್ತಿದೆ. ಹೀಗಿರುವಾಗಿ ಪಿಜಿ ಪ್ರವೇಶಕ್ಕೆ ಇರುವ ಕಟ್ಟುನಿಟ್ಟಿನ ನಿಯಮಗಳನ್ನು ಸಡಲಿಸುವುದು ಸರಿಯಲ್ಲ. ವೈದ್ಯಕೀಯ ಶಿಕ್ಷಣದಲ್ಲಿ ರಾಜಕೀಯ ಹಸ್ತಕ್ಷೇಪ ಇರಬಾರದು. ರಾಜಕಾರಣಿಗಳು ಖಾಸಗಿ ವೈದ್ಯಕೀಯ ಕಾಲೇಜುಗಳನ್ನು ಆರಂಭಿಸಿದ್ದಾರೆ ಎಂಬ ಕಾರಣಕ್ಕೆ ಅದರ ಗುಣಮಟ್ಟ ಕಡಿಮೆ ಮಾಡುವುದು ಸರ್ವಥಾ ಸರಿಯಲ್ಲ.
ಇದುವರೆಗೆ ಸಾಮಾನ್ಯ ಸೀಟುಗಳಿಗೆ ೫೦ ರಷ್ಟು ಅಂಕ ಮತ್ತು ದೈಹಿಕ ವಿಕಲಾಂಗರಿಗೆ ೪೫ ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ೪೦ ಅಂಕ ಪಡೆಯಲೇಬೇಕಿತ್ತು. ಹೀಗಾಗಿ ಪ್ರವೇಶ ಪರೀಕ್ಷೆಯಲ್ಲಿ ಅರ್ಹತೆ ಪಡೆಯುವುದು ಕಷ್ಟವಾಗಿತ್ತು. ಅಖಿಲ ಭಾರತ ಮಟ್ಟದಲ್ಲಿ ನಡೆಯುವ ಈ ಪರೀಕ್ಷೆಯಲ್ಲಿ ಶೇಕಡ ೫೦ ಸೀಟು ರಾಷ್ಟ್ರೀಯ ಮಟ್ಟದ ವಿದ್ಯಾರ್ಥಿಗಳಿಗೆ ಮೀಸಲಿದ್ದರೆ ಉಳಿದದ್ದು ರಾಜ್ಯಗಳಿಗೆ ನೀಡಲಾಗಿತ್ತು. ಎಂಬಿಬಿಎಸ್ ಪದವಿ ಪಡೆದ ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆಯಲು ಖಾಸಗಿ ತರಬೇತಿ ಕೇಂದ್ರಗಳಿಗೆ ಮೊರೆ ಹೋಗುತ್ತಿದ್ದಾರೆ. ಎಲ್ಲ ರಾಜ್ಯಗಳಲ್ಲಿ ಇದು ದೊಡ್ಡ ವಹಿವಾಟಿಗೆ ಕಾರಣವಾಗಿದೆ. ಎಂಜಿನಿಯರಿಂಗ್ ಮತ್ತು ಮೆಡಿಕಲ್ ಸೀಟುಗಳಿಗೆ ಇರುವ ವ್ಯತ್ಯಾಸವೆಂದರೆ ಮೆಡಿಕಲ್ ಸೀಟುಗಳಿಗೆ ಬೇಡಿಕೆ ಹೆಚ್ಚು. ಹೀಗಾಗಿ ಪೈಪೋಟಿ ಅಧಿಕ. ಅದರಲ್ಲೂ ಖಾಸಗಿ ಕಾಲೇಜುಗಳು ಮೆಡಿಕಲ್ ಸೀಟುಗಳ ಹಂಚಿಕೆ ದೊಡ್ಡ ವ್ಯವಹಾರವನ್ನೇ ನಡೆಸುತ್ತಿವೆ. ಪ್ರತಿ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಯನ್ನು ಆಧಾರವಾಗಿಟ್ಟುಕೊಂಡು ಇತರರ ರ‍್ಯಾಂಕ್ ತೀರ್ಮಾನವಾಗುತ್ತದೆ. ಹೀಗಾಗಿ ಅಖಿಲ ಭಾರತ ಮಟ್ಟದಲ್ಲಿ ರ‍್ಯಾಂಕ್ ಪಡೆಯಬೇಕು ಎಂದರೆ ಬಹಳ ಶ್ರಮ ಪಡಬೇಕು. ಸರ್ಕಾರಿ ಕೋಟಾ ದೊರತರೆ ಮಾತ್ರ ಮುಂದಕ್ಕೆ ಓದಬಹುದು. ದೇಶದಲ್ಲಿ ಅತಿ ಹೆಚ್ಚು ಮೆಡಿಕಲ್ ಸೀಟು ಇರುವುದು ಕರ್ನಾಟಕ ನಂತರ ತಮಿಳುನಾಡು. ತಮಿಳುನಾಡು ಸರ್ಕಾರ ನೀಟ್‌ನಿಂದ ಅನ್ಯಾಯವಾಗುತ್ತಿದೆ ಎಂದು ಅದನ್ನು ಕೈಬಿಟ್ಟು ರಾಜ್ಯ ಸರ್ಕಾರವೇ ಮತ್ತೊಂದು ಪರೀಕ್ಷೆ ನಡೆಸಲು ತೀರ್ಮಾನಿಸಿತ್ತು. ಈಗ ಕೇಂದ್ರ ಸರ್ಕಾರ ಪರೀಕ್ಷೆಯನ್ನು ತೆಗೆದುಕೊಂಡವರೆಲ್ಲ ಪಿಜಿ ಪ್ರವೇಶ ಪಡೆಯಲು ಅರ್ಹರು ಎಂದು ಘೋಷಿಸಿದೆ. ಇದಕ್ಕೆ ಕಾರಣವೇನೂ ನೀಡಿಲ್ಲ.
ಭಾರತೀಯ ವೈದ್ಯರ ಸಂಘವೂ ಸೇರಿದಂತೆ ಹಲವು ಸಂಘಟನೆಗಳು ರ‍್ಯಾಂಕ್ ನೀಡುವ ಅಂಕವನ್ನು ೫೦ ರಿಂದ ೩೦ಕ್ಕೆ ಇಳಿಸಲು ಕೇಳಿತ್ತು. ಅಲ್ಲದೆ ವೈದ್ಯಕೀಯ ಕಾಲೇಜುಗಳಲ್ಲಿ ಸೀಟುಗಳು ಖಾಲಿ ಇರುತ್ತಿದ್ದವು. ಇದರಲ್ಲಿ ಕ್ಲಿನಿಕಲ್ ಕ್ಷೇತ್ರಕ್ಕೆ ಬಾರದ ಇತರ ಹುದ್ದೆಗಳೂ ಖಾಲಿ ಇರುವುದು ಅಧಿಕವಾಗಿತ್ತು.ಇಲ್ಲಿ ಮೆರಿಟ್ ಕಡಿಮೆ ಇದ್ದರೂ ಪರವಾಗಿಲ್ಲ ಎಂದು ಭಾವಿಸುವುದು ಮುಂದಿನ ದಿನಗಳಲ್ಲಿ ವೈದ್ಯಕೀಯ ಚಿಕಿತ್ಸೆಯ ಗುಣಮಟ್ಟದ ಮೇಲೆ ಪರಿಣಾಮ ಬೀರುವುದಂತೂ ನಿಜ. ವಿಶ್ವ ಆರೋಗ್ಯ ಸಂಸ್ಥೆ ಪ್ರತಿ ೧ ಸಾವಿರ ಜನರಿಗೆ ಒಬ್ಬರು ವೈದ್ಯರು ಇರಬೇಕು ಎಂದು ಹೇಳಿದೆ. ನಮ್ಮಲ್ಲಿ ವೈದ್ಯರ ಸಂಖ್ಯೆ ಕಡಿಮೆ ಏನಿಲ್ಲ. ಖಾಸಗಿ ವೈದ್ಯಕೀಯ ಕಾಲೇಜುಗಳ ಸಂಖ್ಯೆ ಅಧಿಕಗೊಂಡಿದೆ ಎಂದು ಶಿಕ್ಷಣ ಮಟ್ಟ ಇಳಿಮುಖಗೊಳ್ಳಲು ಅವಕಾಶ ನೀಡಬಾರದು.