ಬೆಂಗಳೂರು: ಪಠ್ಯಕ್ಕಿಂತಕೂ ಅನುಭವದ ಮೂಲಕ ಕಲಿಯುವುದು ಸಾಕಷ್ಟಿದೆ. ಸೃಷ್ಟಿಕರ್ತನನ್ನು ಹೊರತುಪಡಿಸಿ ನೋವನ್ನು ಕಡಿಮೆ ಮಾಡುವ ಶಕ್ತಿ ಇರುವುದು ವೈದ್ಯರಿಗೆ ಮಾತ್ರ. ಆದ್ದರಿಂದ ವೈದ್ಯರಿಗೆ ಮಾನವೀಯ ಗುಣ ಬಹಳ ಮುಖ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಆಕಾಶ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಂಡ್ ರಿಸರ್ಚ್ ಸೆಂಟರ್‌ನ ವತಿಯಿಂದ ಆಯೋಜಿಸಿದ್ದ 2016-17ರ ಪ್ರಥಮ ಎಂಬಿಬಿಎಸ್ ಬ್ಯಾಚ್‌ನ ಮೊದಲನೆ ಘಟಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ಯಾವುದನ್ನಾದರೂ ಪ್ರಥಮ ಬಾರಿಗೆ ಮಾಡಿದಾಗ ಅದು ಎಂದೆಂದಿಗೂ ನೆನಪಿನಲ್ಲಿ ಇರುತ್ತದೆ ಎಂದು ಅವರು 5 ವರ್ಷಗಳ ಕಾಲ ಮೆಡಿಕಲ್ ಓದಿದ ಮೇಲೆ ನಮ್ಮ ಭವಿಷ್ಯ ನಮಗೆ ಗೊತ್ತಿರಬೇಕು. ಒಮ್ಮೆ ವಿದ್ಯಾರ್ಥಿ ಆದವನು ಜೀವನ ಪರ್ಯಂತ ವಿದ್ಯಾರ್ಥಿಯಾಗೇ ಇರುತ್ತಾನೆ. ಇವತ್ತು ಸರ್ಟಿಫಿಕೇಟ್ ತೆಗೆದುಕೊಂಡ ಕೂಡಲೇ ಎಲ್ಲವೂ ಮುಗಿಯಿತು ಎಂದಲ್ಲ. ಕಾಲೇಜಿನಲ್ಲಿ ಪಠ್ಯ ಓದಿ ಪರೀಕ್ಷೆ ಬರೆಯುತ್ತೇವೆ. ಆದರೆ, ಜೀವನದಲ್ಲಿ ಪರೀಕ್ಷೆಗಳ ಮೂಲಕ ನಾವು ಕಲಿಯುತ್ತೇವೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ವೈದ್ಯರಾಗಿ ನಿಮಗೆ ಸಹಾನುಭೂತಿ ಇರಬೇಕು. ಯಾಕೆಂದರೆ ಎಷ್ಟೋ ಜನ ಬಡವರು ಚಿಕಿತ್ಸೆಗೆಂದು ಬರುತ್ತಾರೆ. ಅವರೊಂದಿಗೆ ಬೆರೆತು ಅವರ ಕಾಯಿಲೆಗೆ ಚಿಕಿತ್ಸೆ ನೀಡಬೇಕು. ಆಗಲೇ ನೀವು ಕಲಿತ ವಿದ್ಯೆ ನಿಮ್ಮ ಕೈ ಹಿಡಿಯುತ್ತದೆ ಎಂದು ತಿಳಿಸಿದರು.