ವೃತ್ತಿ ಶಿಕ್ಷಣ ವಂತಿಗೆ ಶುಲ್ಕ ಗಗನಕ್ಕೆ

Advertisement

ಕರ್ನಾಟಕದಲ್ಲಿ ಎಂಜಿನಿಯರಿಂಗ್ ಮತ್ತು ಮೆಡಿಕಲ್ ಶಿಕ್ಷಣ ಪಡೆಯಲು ಬಯಸುವ ವಿದ್ಯಾರ್ಥಿ- ವಿದ್ಯಾರ್ಥಿನಿಯರು ವಂತಿಗೆ ಶುಲ್ಕ ಪಾವತಿ ಮಾಡದೆ ಸೀಟು ಪಡೆಯಲು ಸಾಧ್ಯವಿಲ್ಲ. ಮೆರಿಟ್ ಸೀಟು ಎಲ್ಲರಿಗೂ ಲಭಿಸುವುದಿಲ್ಲ. ಸರ್ಕಾರ ಕೊಡುವ ಮೆರಿಟ್ ಸೀಟಿಗೆ ಇರುವ ಶಿಕ್ಷಣ ಶುಲ್ಕಕ್ಕೂ ವಂತಿಗೆ ಶುಲ್ಕ ಕೊಟ್ಟು ಪಡೆಯುವ ಸೀಟಿಗೂ ಶುಲ್ಕದಲ್ಲಿ ಅಜಗಜಾಂತರ ವ್ಯತ್ಯಾಸವಿದೆ.
ಮೆರಿಟ್ ಸೀಟು ಪಡೆದು ಬಂದ ವಿದ್ಯಾರ್ಥಿಯನ್ನು ಖಾಸಗಿ ಶಿಕ್ಷಣ ಸಂಸ್ಥೆ ದ್ವಿತೀಯ ದರ್ಜೆ ಪ್ರಜೆಯ ರೀತಿಯಲ್ಲಿ ನೋಡುವ ಸಾಧ್ಯತೆ ಹೆಚ್ಚು . ವಂತಿಗೆ ಶುಲ್ಕ ನೀಡಿ ಬಂದ ವಿದ್ಯಾರ್ಥಿಗೆ ರಾಜ ಮರ್ಯಾದೆ ದೊರಕುತ್ತಿದೆ. ಹೀಗಾಗಿ ಎಲ್ಲ ವೃತ್ತಿ ಶಿಕ್ಷಣ ಸಂಸ್ಥೆಗಳಲ್ಲಿ ಎರಡು ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳು ಪ್ರತಿ ವರ್ಷ ಹೊರಬರುತ್ತಿದ್ದಾರೆ.
ಕೋಟಿ ರೂ ಹಣ ಸುರಿದು ಪದವಿ ಅಥವ ಸ್ನಾತಕೋತ್ತರ ಪದವಿ ಪಡೆದವರು ಹಳ್ಳಿಗಳಲ್ಲಿ ಸೇವೆ ಸಲ್ಲಿಸಲು ಸಾಧ್ಯವೇ ಎಂಬುದನ್ನು ಪರಿಶೀಲಿಸುತ್ತಿಲ್ಲ. ಅದರಲ್ಲೂ ಎಂಬಿಬಿಎಸ್ ಮತ್ತು ಸ್ನಾತಕೋತ್ತರ ಪದವಿ ಪಡೆದವರು ಹಳ್ಳಿಗಳಲ್ಲಿ ಸೇವೆ ಸಲ್ಲಿಸಲೇ ಬೇಕು ಎಂದು ಸರ್ಕಾರ ನಿಯಮ ಮಾಡಿದೆ. ಇದು ಪಾಲನೆಯಾಗುತ್ತಿಲ್ಲ. ಹಳ್ಳಿಯಲ್ಲಿ ಸೇವೆ ಸಲ್ಲಿಸದೇ ಇರುವವರಿಗೆ ದಂಡ ವಿಧಿಸುವ ಕ್ರಮ ಮಾತ್ರ ಇದೆ. ಅವರು ದಂಡ ಕಟ್ಟಿ ನಗರಗಳಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾರೆ.
ಹಳ್ಳಿಗಳಲ್ಲಿ ಎಂದಿನಂತೆ ವೈದ್ಯರ ಕೊರತೆ ಇದ್ದೇ ಇದೆ. ನಮ್ಮಲ್ಲಿ ೪೦ ಕ್ಕೂ ಹೆಚ್ಚು ಖಾಸಗಿ ವೈದ್ಯಕೀಯ ಕಾಲೇಜುಗಳಿವೆ. ಅಲ್ಲದೆ ಸರ್ಕಾರಿ ವೈದ್ಯಕೀಯ ಕಾಲೇಜುಗಳು ಕೆಲಸ ಮಾಡುತ್ತಿವೆ. ಪ್ರತಿ ಎರಡು ಜಿಲ್ಲೆಗೆ ಒಂದಾದರೂ ವೈದ್ಯಕೀಯ ಕಾಲೇಜು ಇದೆ. ಇಲ್ಲಿ ವ್ಯಾಸಂಗ ಮಾಡುವವರಿಗೆ ಎರಡು ವರ್ಷ ಗ್ರಾಮೀಣ ಸೇವೆ ಕಡ್ಡಾಯ ಮಾಡಬೇಕು. ಅವರು ಓದುವಾಗಲೇ ಎರಡು ಜಿಲ್ಲೆಯಲ್ಲೇ ಸೇವೆ ಸಲ್ಲಿಸುವಂತೆ ಆದೇಶ ನೀಡಬೇಕು. ಇದು ಮೆರಿಟ್, ಪೇಮೆಂಟ್ ಮತ್ತು ಎನ್‌ಆರ್‌ಐ ಸೇರಿದಂತೆ ಎಲ್ಲ ವಿದ್ಯಾರ್ಥಿಗಳಿಗೆ ಅನ್ವಯಿಸಬೇಕು. ಅವರು ಗ್ರಾಮೀಣ ಸೇವೆ ಸಲ್ಲಿಸದೇ ಇದ್ದಲ್ಲಿ ಪದವಿ ಮತ್ತು ಸ್ನಾತಕೋತ್ತರ ಡಿಗ್ರಿ ಸರ್ಟಿಫಿಕೇಟ್ ನೀಡಬಾರದು. ಕೆಎಂಸಿಯಲ್ಲಿ ವೈದ್ಯರಾಗಿ ನೋಂದಾಯಿಸಲು ಮಾತ್ರ ಅವಕಾಶ ನೀಡಬೇಕು.
ಮೆಡಿಕಲ್ ಕೌನ್ಸಿಲ್, ತಾಂತ್ರಿಕ ಶಿಕ್ಷಣ ಮಂಡಲಿ ಶೈಕ್ಷಣಿಕ ಗುಣಮಟ್ಟವನ್ನು ಕಾಯ್ದುಕೊಂಡು ಬರುವ ಕೆಲಸ ಮಾಡುತ್ತದೆ. ಶಿಕ್ಷಣ ಶುಲ್ಕ ನಿಯಂತ್ರಣ ರಾಜ್ಯ ಸರ್ಕಾರದ ಕೈಯಲ್ಲಿದೆ.ರಾಜ್ಯ ಸರ್ಕಾರ ೧೯೮೪ ರಲ್ಲೇ ವಂತಿಗೆ ಶುಲ್ಕ ನಿಷೇಧಿಸಿ ಕಾಯ್ದೆ ರಚಿಸಿತು. ೧೯೯೩ ರಲ್ಲಿ ಹೊಸ ನಿಯಮಗಳನ್ನು ರಚಿಸಲಾಯಿತು. ಉನ್ನಿಕೃಷ್ಣನ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ನ ೧೧ ನ್ಯಾಯಮೂರ್ತಿಗಳು ವಂತಿಗೆ ಶುಲ್ಕವನ್ನು ನಿಷೇಧಿಸಬೇಕು ಎಂದು ತೀರ್ಪು ನೀಡಿದರು. ಖಾಸಗಿ ಶಿಕ್ಷಣ ಸಂಸ್ಥೆಗಳು ಲಾಭ- ನಷ್ಟವಿಲ್ಲದೆ ಸಂಸ್ಥೆಯನ್ನು ನಡೆಸಲು ಬೇಕಾಗುವ ವೆಚ್ಚವನ್ನು ಮಾತ್ರ ವಿದ್ಯಾರ್ಥಿಗಳಿಂದ ಪಡೆಯಬೇಕೆಂದು ತಿಳಿಸಿತು.
ಪ್ರತಿ ವರ್ಷ ಸೀಟುಗಳ ಸಂಖ್ಯೆ ಮತ್ತು ಶಿಕ್ಷಣ ಶುಲ್ಕ ನಿಗದಿಪಡಿಸಲು ಹೈಕೋರ್ಟ್ ಅಧೀನದಲ್ಲಿ ಎರಡು ಸಮಿತಿಗಳನ್ನು ರಚಿಸಬೇಕು ಎಂದು ಆದೇಶ ಇದೆ. ಆದರೆ ಈ ಸಮಿತಿಗಳ ರಚನೆ ನಾಮಕಾವಸ್ತೆ ಮಾತ್ರ ನಡೆಯುತ್ತಿದೆ.
ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ವರ್ಗ ಸರ್ಕಾರದೊಂದಿಗೆ ನೇರ ಮಾತುಕತೆ ನಡೆಸಿ ಪ್ರತಿ ವರ್ಷ ಶಿಕ್ಷಣ ಶುಲ್ಕವನ್ನು ಹೆಚ್ಚಿಸಿಕೊಳ್ಳುತ್ತಿದೆ. ಮೆರಿಟ್ ವರ್ಗದ ಸೀಟುಗಳು ಅಧಿಕಗೊಳ್ಳುತ್ತಿಲ್ಲ. ಆಡಳಿತ ವರ್ಷದ ಸೀಟುಗಳ ಸಂಖ್ಯೆ ಮತ್ತು ಶಿಕ್ಷಣ ಶುಲ್ಕ ಅಧಿಕಗೊಳ್ಳುತ್ತಿದೆ. ಇದು ಕೋಟಿ ರೂ. ದಾಟಿರುವುದು ಕಪ್ಪು ಹಣದ ಕ್ರೋಡೀಕರಣಕ್ಕೆ ಕಾರಣವಾಗುತ್ತಿದೆ. ಇದನ್ನು ತಡೆಗಟ್ಟಲು ಯಾವ ಪ್ರಯತ್ನಗಳೂ ನಡೆಯುತ್ತಿಲ್ಲ.
ಶಾಸಕಾಂಗ- ನ್ಯಾಯಾಂಗ- ಕಾರ್ಯಾಂಗ ಈ ವಿಷಯದಲ್ಲಿ ಸಕ್ರಿಯ ಪ್ರಯತ್ನ ಕೈಗೊಂಡಿಲ್ಲ. ಹಿಂದೆ ವಿದ್ಯಾರ್ಥಿ ಸಂಘಟನೆಗಳು ಬೀದಿಗಿಳಿದು ಹೋರಾಟ ನಡೆಸಿದ್ದವು. ಈಗ ಎಲ್ಲ ಸಂಘಟನೆಗಳು ಮೌನವಹಿಸಿವೆ. ವಂತಿಗೆ ಶುಲ್ಕವನ್ನು ಯುವ ಜನಾಂಗ ಒಪ್ಪಿಕೊಳ್ಳುವ ಹಂತ ತಲುಪುತ್ತಿದೆ. ಮೆರಿಟ್‌ಗೆ ಬೆಲೆ ಕಡಿಮೆಯಾದಂತೆ ಶಿಕ್ಷಣ ಮಟ್ಟ ಕುಸಿಯುತ್ತದೆ.
ಈಗ ಕರ್ನಾಟಕದ ಎಂಜಿನಿಯರ್ ಮತ್ತು ವೈದ್ಯರಿಗೆ ಜಗತ್ತಿನ ಎಲ್ಲ ಕಡೆ ಬೇಡಿಕೆ ಇದೆ. ಅದು ಕಾಲಕ್ರಮೇಣ ಕುಸಿಯಲಿದೆ. ಎಂಜಿನಿಯರಿಂಗ್‌ನಲ್ಲಿ ಪ್ರತಿ ಖಾಸಗಿ ಕಂಪನಿಯೂ ಪ್ರತ್ಯೇಕ ಸಂದರ್ಶನ ನಡೆಸಿ ಆಯ್ಕೆ ಮಾಡಿಕೊಳ್ಳುತ್ತಿದೆ.
ಕೆಲವು ಪ್ರತಿಷ್ಠಿತ ಕಾಲೇಜುಗಳನ್ನು ಹೊರತುಪಡಿಸಿದರೆ ಉಳಿದ ಕಾಲೇಜುಗಳಿಗೆ ಕಂಪನಿಗಳು ಹೋಗುವುದೇ ಇಲ್ಲ. ಅಲ್ಲಿಯ ವಿದ್ಯಾರ್ಥಿಗಳು ಪ್ರತಿಷ್ಠಿತ ಕಾಲೇಜುಗಳಿಗೆ ಹೆಚ್ಚಿನ ಹಣ ನೀಡಿ ಉದ್ಯೋಗ ಪಡೆಯಬೇಕಾದ ಸ್ಥಿತಿ ಬಂದಿದೆ. ರಾಜ್ಯದಲ್ಲಿ ೬೦೦ ಕ್ಕೂ ಹೆಚ್ಚು ಎಂಜಿನಿಯರಿಂಗ್ ಕಾಲೇಜುಗಳಿವೆ. ಇವುಗಳಲ್ಲಿ ಅತಿ ಹೆಚ್ಚು ಕಾಲೇಜು ಬೆಂಗಳೂರು ಸುತ್ತಮುತ್ತ ಆವರಿಸಿಕೊಂಡಿದೆ. ಎಂಜಿನಿಯರಿಂಗ್ ಸೀಟುಗಳ ಬೆಲೆ ಲಕ್ಷ ರೂ. ಮೀರಿದೆ.
ಎಂಬಿಬಿಎಸ್ ಸೀಟುಗಳಂತೂ ಕೋಟಿ ರೂ. ದಾಟಿದೆ. ಮೆರಿಟ್ ಕೋಟಾದಲ್ಲಿ ಸೀಟು ಪಡೆಯುವುದಕ್ಕೆ ಅದೃಷ್ಟ ಪಡೆದಿರಬೇಕು ಎಂಬ ಭಾವನೆ ಮೂಡಿದೆ. ವಂತಿಗೆ ಶುಲ್ಕ ವಿಷ ಏರಿದಂತೆ ಪ್ರತಿ ವರ್ಷ ಅಧಿಕಗೊಳ್ಳುತ್ತಿದೆ. ಸರ್ಕಾರವೇ ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರಭಾವಕ್ಕೆ ತಲೆಬಾಗುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಬದಲಾವಣೆ ಬರಬೇಕು ಎಂದರೆ ಯುವ ಜನಾಂಗ ಹೋರಾಟ ನಡೆಸಬೇಕು.