ಬಳ್ಳಾರಿ:ವಿಮ್ಸ್ ಆಸ್ಪತ್ರೆಯಲ್ಲಿ ವಿದ್ಯುತ್ ಕಡಿತದಿಂದ ನಾಲ್ವರು ಮರಣಕ್ಕೆ ಈಡಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸಲು ಬೆಂಗಳೂರಿನ ವಿಶೇಷ ತಂಡ ಶುಕ್ರವಾರ ಆಸ್ಪತ್ರೆಗೆ ಭೇಟಿನೀಡಿ ತನಿಖೆ ಕೈಗೊಂಡಿತು.
ಬಿಎಂಆರ್ ಅಂಡ್ ಸಿಐನ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಪ್ರಾಧ್ಯಾಪಕಿ ಡಾ. ಸ್ಮಿತಾ ನೇತೃತ್ವದ ತಂಡ ಬೆಳಗ್ಗೆ ೧೧ ಗಂಟೆ ಸುಮಾರಿಗೆ ವಿಮ್ಸ್ ಆವರಣ ಪ್ರವೇಶಿಸಿತು. ಮಧ್ಯಾಹ್ನ ೨.೨೦ರವರೆಗೆ ಪರಿಶೀಲನೆ ನಡೆಸಿತು. ಇಂದು ಸಂಜೆ ಅಥವಾ ನಾಳೆ ಬೆಳಗ್ಗೆ ವೇಳೆಗೆ ಸರ್ಕಾರಕ್ಕೆ ವರದಿ ಸಲ್ಲಿಸುವುತ್ತೇವೆ ಎಂದಷ್ಟೇ ಮಾಧ್ಯಮದವರಿಗೆ ನೀಡಿದ ತಂಡ ಅಲ್ಲಿಂದ ತರಾತುರಿಯಲ್ಲಿ ಬೆಂಗಳೂರು ಕಡೆ ಪಯಣ ಬೆಳೆಸಿತು.
ಬೆಳಗ್ಗೆ ತಂಡ ಮೊದಲು ನೇರವಾಗಿ ವಿಮ್ಸ್ನ ನಿರ್ದೇಶಕ ಡಾ. ಗಂಗಾಧರ ಗೌಡ ಅವರ ಕೊಠಡಿಗೆ ಭೇಟಿನೀಡಿ, ಮಾಹಿತಿ ಕಲೆಹಾಕಿತು. ಅಲ್ಲಿಂದ ತೀವ್ರ ನಿಗಾ ಘಟಕದ ಕಡೆ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಜಂಟಿ ನಿರ್ದೇಶಕ ಡಾ. ಸಿದ್ದಿಕಿ ಅಹಮದ್, ಬಿಎಂಸಿ ಅಂಡ್ ಆರ್‌ಐನ ಔಷಧ ವಿಭಾಗದ ಪ್ರಾಧ್ಯಾಪಕ ಡಾ. ದಿವಾಕರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂಜಿನಿರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರ ಯೋಗೇಶ್, ಬೆಂಗಳೂರು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಆಡಳಿತಾಧಿಕಾರಿ ಉಮಾ ಕೆ.ಎ. ಅವರನ್ನೊಳಗೊಂಡ ತಂಡ ಇಡೀ ಆಸ್ಪತ್ರೆಯನ್ನು ಸುತ್ತಾಡಿಕೊಂಡು ಮಾಹಿತಿ ದಾಖಲಿಸಿಕೊಂಡಿತು.
ತಂಡದ ಸದಸ್ಯರು ಒಟ್ಟಾಗಿ ಹೃದ್ರೋಗ ತೀವ್ರ ನಿಗಾ ಘಟಕ, ಶಸ್ತ್ರ ಚಿಕಿತ್ಸಾ ವಿಭಾಗದ, ಸಾಮಾನ್ಯ ವೈದ್ಯಕೀಯ ವಿಭಾಗದ ತೀವ್ರ ನಿಗಾ ಘಟಕಗಳಿಗೆ ಭೇಟಿನೀಡಿದರು. ಎಲ್ಲಾ ವಿಭಾಗದಲ್ಲಿನ ವೆಂಟಿಲೇಟರ್, ಇತರೆ ಉಪಕರಣಗಳ ಕಾರ್ಯಕ್ಷಮತೆ ಪರೀಕ್ಷೆ ಮಾಡಿದರು. ವೈದ್ಯಕೀಯ ಶಿಕ್ಷಣ ಇಲಾಖೆಯ ಇಂಜಿನಿಯರಿಂಗ್ ವಿಭಾಗದಿಂದ ವೆಂಟಿಲೇಟರ್‌ಗಳ ಗುಣಮಟ್ಟ ಪರಿಶೀಲನೆ ಮಾಡಲಾಯಿತು.