ಹುಬ್ಬಳ್ಳಿ: ರಾಹುಲ್ ಗಾಂಧಿ ಮಾತಿಗೆ ಕರ್ನಾಟಕದ ಜನ ಯಾವುದೇ ಬೆಲೆ ಕೊಡಲ್ಲಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಆದರ್ಶನಗರದ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ರಾಹುಲ್ ಗಾಂಧಿ ರಾಜ್ಯ ಭೇಟಿ ವಿಚಾರವಾಗಿ ಮಾತನಾಡಿದ ಅವರು, ರಾಹುಲ್ ಗಾಂಧಿ ಕಳೆದ ಬಾರಿ ಬಂದದ್ದಕ್ಕೂ ಈ ಬಾರಿ ಬಂದದ್ದಕ್ಕೂ ಬಹಳ ವ್ಯತ್ಯಾಸವಿದೆ. ಈ ಬಾರಿ ಅವರು ಬ್ರಿಟನ್ ವಿವಿ ಯಲ್ಲಿ ದೇಶ, ಪ್ರಜಾಪ್ರಭುತ್ವ ವಿರೋಧಿ ಮಾತುಗಳನ್ನಾಡಿದ್ದಾರೆ. ದೇಶವ್ಯಾಪಿ ಇದರ ಬಗ್ಗೆ ಖಂಡನೆಯಾಗಿದೆ. ರಾಹುಲ್ ಗಾಂಧಿ ಮಾತಿಗೆ ಕರ್ನಾಟಕದ ಜನ ಯಾವುದೇ ಬೆಲೆ ಕೊಡಲ್ಲ ಎಂದರು.
ಸಿದ್ಧರಾಮಯ್ಯ ಬೋಗಸ್ ಕಾರ್ಡ್ ಬಗ್ಗೆ ಮಾತನಾಡುತ್ತಿದ್ದಾರೆ. ಬೇರೆ ಬೇರೆ ರಾಜ್ಯಗಳಲ್ಲಿ ಈ ರೀತಿಯ ಆಶ್ವಾಸನೆಗಳನ್ನು ಕಾಂಗ್ರೆಸ್ ಈಡೇರಿಸಿಲ್ಲ. ರಾಜಾಸ್ಥಾನ, ಛತ್ತೀಸ್ ಗಡ ಮತ್ತಿತರ ಕಡೆ ಕೊಟ್ಟ ಆಶ್ವಾಸನೆ ಈಡೇರಿಸಿಲ್ಲ. ಜನರನ್ನು ಯಾಮಾರಿಸೋ ಕೆಲಸ ಕಾಂಗ್ರೆಸ್ ಮಾಡ್ತಿದೆ. ಕಾಂಗ್ರೆಸ್ ನವರದ್ದು ಗ್ಯಾರಂಟಿ ಕಾರ್ಡ್ ಅಲ್ಲ, ಅದೊಂದು ವಿಜಿಟಿಂಗ್ ಕಾರ್ಡ್ ಎಂದರು.
ಸಿದ್ಧರಮಯ್ಯ ವಿರುದ್ಧ ಸಾಕಷ್ಟು ಚಾರ್ಜ್ ಸೀಟ್ ಗಳಿವೆ. ಲೋಕಾಯುಕ್ತದಲ್ಲಿಯೂ ಅವರ ವಿರುದ್ಧ ದೂರಿದೆ. ಅಂಥವರು ಭ್ರಷ್ಟಾಚಾರದ ಬಗ್ಗೆ ಮಾತನಾಡ್ತಾರೆ ಅಂದ್ರೆ ಇದ್ಲಿ, ಮಸಿಗೆ ಬುದ್ಧಿ ಹೇಳಿದಂತೆ. ಭಾರತದಲ್ಲಿ ಕಾಂಗ್ರೆಸ್ ಪತನ ಶುರುವಾಗಿದೆ. ರೀಡೋ ವಾಚ್ ಬಗ್ಗೆ ನ್ಯಾಯಾಂಗ ತನಿಖೆ ಮಾಡ್ತಿದ್ದೇವೆ. ವಿಪಕ್ಷಗಳ 59 ಪ್ರಕರಣಗಳ ಪೈಕಿ ಕೆಲವನ್ನು ಲೋಕಾಯುಕ್ತಕ್ಕೆ ಕೊಟ್ಟಿದ್ದೇವೆ. ಕೆಲವನ್ನು ಮುಂದಿನ ದಿನಗಳಲ್ಲಿ ಕೊಡುತ್ತೇವೆ ಎಂದರು.
ಬಿಜೆಪಿ ಜನರ ಭಾವನಾತ್ಮಕ ವಿಚಾರಗಳ ಜೊತೆ ಆಟವಾಡ್ತಿದೆ ಎಂಬ ಆರೋಪಕ್ಕೆ ಉತ್ತರಿಸಿ, ಇತಿಹಾಸವನ್ನು ಮರೆಮಾಚುವ ಕೆಲಸ ನಡೆದಿದೆ.ಉರಿಗೌಡ ಅಂತ ಹೇಳಲ್ಲ. ಹಲವಾರು ಪ್ರಕರಣಗಳಲ್ಲಿ ಸತ್ಯ ಮರೆಮಾಚುವ ಕೆಲಸ ನಡೆದಿದೆ.ಅವುಗಳ ಸತ್ಯ ಹೇಳಿದರೆ ಇವರಿಗೆ ತಡೆದುಕೊಳ್ಳೋಕೆ ಆಗಲ್ಲ. ಸತ್ಯ ಶೋಧನೆ ಆದಾಗ ಎಲ್ಲವೂ ಹೊರಗೆ ಬರುತ್ತೆ, ಜಯ ಸಿಗುತ್ತೆ ಎಂದರು.
ಸಾರಿಗೆ ನೌಕರರ ಮುಷ್ಕರ ವಿಚಾರ ಅವರ ಬೇಡಿಕೆ ಈಡೇರಿಸಿದ್ದೇವೆ.ಪ್ರಮುಖ ಸಂಘಟನೆ ಮುಖಂಡರೊಂದಿಗೆ ಚರ್ಚಿಸಿ, ಬಗೆಹರಿಸಿದ್ದೇನೆ. ಅಭಿನಂದನೆ ಸಲ್ಲಿಸೊ ಜೊತೆಗೆ, ಮುಷ್ಕರ ವಾಪಸ್ ಪಡೆದಿದ್ದಾರೆ. ಪ್ರಮುಖ ಸಂಘಟನೆ ಜೊತೆ ಮಾತನಾಡಿದ್ದು, ಮುಷ್ಕರಕ್ಕೆ ಹೋಗೋ ಪ್ರಶ್ನೆಯೇ ಇಲ್ಲ ಎಂದರು
ಮಾರ್ಚ್ 24 ಕ್ಕೆ ರಾಜ್ಯಕ್ಕೆ ಅಮಿತ್ ಶಾ ಬರುತ್ತಾರೆ. ಮಾರ್ಚ್ 25 ಕ್ಕೆ ಪ್ರಧಾನಿ ಮೋದಿ ಬರುತ್ತಾರೆ. ಮಾರ್ಚ್ 26 ರಂದು ಅಮಿತ್ ಶಾ ಪ್ರವಾಸ ಮುಂದುವರೆಸಲಿದ್ದಾರೆ ಎಂದರು.