ಬೆಂಗಳೂರು: ಡಾ. ಬಿ.ಆರ್. ಅಂಬೇಡ್ಕರ್ ಸ್ಮರಣಾರ್ಥವಾಗಿ ವಿಧಾನಸೌಧದ ಆವರಣದಲ್ಲಿ ʻಸ್ಫೂರ್ತಿ ಸೌಧʼ ನಿರ್ಮಾಣ ಮಾಡಲು 50 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ. ಅಲ್ಲದೇ ಕರ್ನಾಟಕದಲ್ಲಿ ಅಂಬೇಡ್ಕರ್ ಭೇಟಿ ನೀಡಿದ 10 ಸ್ಥಳಗಳಲ್ಲಿ ಸ್ಮಾರಕಗಳ ಅಭಿವೃದ್ಧಿಗೆ ಬಜೆಟ್‌ನಲ್ಲಿ ಅನುದಾನ ಒದಗಿಸಲಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ವಿಧಾನಸೌಧದಲ್ಲಿ ಇಂದು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಮಹಾಪರಿನಿರ್ವಾಣದ ನಿಮಿತ್ತ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಹಲವಾರು ಜಾತಿ, ಧರ್ಮ, ಪಂಥಗಳನ್ನು ಹೊಂದಿರುವ ಭಾರತದಲ್ಲಿ ಒಂದು ಸಂವಿಧಾನದ ರಚನೆ ಮಾಡುವ ಮೂಲಕ ದೀರ್ಘಕಾಲದ ಪ್ರಜಾಪ್ರಭುತ್ವಕ್ಕೆ ನಾಂದಿ ಹಾಡಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಚಿವರಾದ ಗೋವಿಂದ ಕಾರಜೋಳ, ಕೋಟ ಶ್ರೀನಿವಾಸ ಪೂಜಾರಿ, ಎಸ್.ಟಿ. ಸೋಮಶೇಖರ್, ಆರಗ ಜ್ಞಾನೇಂದ್ರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.