ಬಾಗಲಕೋಟೆ: 200 ಯುನಿಟ್ ಉಚಿತವೆಂದು ಘೋಷಣೆಯೊಂದಿಗೆ ಅಧಿಕಾರ ಪಡೆದಿರುವ ಕಾಂಗ್ರೆಸ್ ಪಕ್ಷ ರಾಜ್ಯದ ಜನತೆಗೆ ಮೋಸವೆಸಗುವಲ್ಲಿ ಕಾರಣವಾಗಿ, ಇದೀಗ ದುಪ್ಪಟ್ಟು ಬಿಲ್ ಬಡವರಿಗೆ ಬಂದಿರುವುದನ್ನು ಖಂಡಿಸುತ್ತೇನೆ. ಅಲ್ಲದೆ ಈ ತಿಂಗಳ ಬಿಲ್ ಯಾರೂ ಕಟ್ಟಬೇಡಿಯೆಂದು ತೇರದಾಳ ಶಾಸಕ ಸಿದ್ದು ಸವದಿ ಖಡಾಖಂಡಿತವಾಗಿ ತಿಳಿಸಿದರು.
ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದೆಡೆ ಷರತ್ತು ವಿಧಿಸಿ 200 ಯುನಿಟ್ ಉಚಿತ ವಿದ್ಯುತ್, ಇನ್ನೊಂದೆಡೆ ದರ ಏರಿಕೆ. ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಹಚ್ಚಿದ ಕಾಂಗ್ರೆಸ್‌ನ ನಡೆ ಖಂಡಿಸುತ್ತೇನೆಂದು ಸವದಿ ಆಕ್ರೋಶ ಹೊರಹಾಕಿದರು.
ನೇಕಾರರ ಬೆನ್ನಿಗೆ ಬಿದ್ದರೆ ಹುಷಾರ್..!
ನೇಕಾರ ಸಮುದಾಯಕ್ಕೆಂದೇ ವಿದ್ಯುತ್ ರಿಯಾಯ್ತಿ ದರದಲ್ಲಿ ಸರಬರಾಜು ಆಗುತ್ತಿದೆ. ಇದರ ಮೇಲೂ ಕಣ್ಣಿಟ್ಟಿರುವ ಕಾಂಗ್ರೆಸ್ ಸರ್ಕಾರ ನೇಕಾರ ಸಮುದಾಯವನ್ನು ಅಳಿವಿನಂಚಿಗೆ ತರುವ ಹುನ್ನಾರ ನಡೆಸುತ್ತಿದ್ದು, ಯಾವುದೇ ಕಾರಣಕ್ಕೂ ನೇಕಾರ ಸಮುದಾಯದ ವಿರುದ್ಧ ವಿದ್ಯುತ್ ದರದ ಬಗ್ಗೆ ಚೆಲ್ಲಾಟ ನಡೆಸಿದರೆ ಉಗ್ರ ಸ್ವರೂಪದ ಹೋರಾಟ ನಡೆಯುವದು ನಿಶ್ಚಿತವಾಗಿದ್ದು, ಅಲ್ಲದೆ ಈಗಾಗಲೇ ನೇಕಾರಿಕೆ ಪೂರಕವಾಗಿರುವ ಕುಟುಂಬಗಳಿಗೆ ಹಾಗೂ ವ್ಯಾಪಾರಿಗಳಿಗೆ ದುಪ್ಪಟ್ಟು ಬಿಲ್ ಬಂದಿದೆ. ಇವೆಲ್ಲದಕ್ಕೂ ಮುಂದಿನ ದಿನಗಳಲ್ಲಿ ತಕ್ಕಪಾಠ ಕಲಿಸಲಿದ್ದಾರೆಂದು ಸವದಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.