ಕುಷ್ಟಗಿ : ಹೈ ಮಾಸ್ಟ್ ವಿದ್ಯುತ್ ಕಂಬದ ದುರಸ್ತಿಗೆ ಬಂದಿರುವ ಲೈಟ್ ಬದಲಾವಣೆ ಮಾಡಲು ಕ್ರೇನ್ ಏರಿ ಕೆಲಸ ಮಾಡುತ್ತಿದ್ದ ವೇಳೆ ಬಕೇಟ್‌ನ ಪಟ್ಟಿ ಹರಿದು ಅದರಲ್ಲಿ ನಿಂತಿದ್ದ ಪುರಸಭೆ ಸಿಬ್ಬಂದಿ ಆಯಾತಪ್ಪಿ ಕೆಳಗೆ ಬಿದ್ದು ಎಡ ಕಾಲಿಗೆ ಗಂಭೀರ ಗಾಯವಾದ ಘಟನೆ ಪಟ್ಟಣದ ಬಸವೇಶ್ವರ ಸರ್ಕಲ್ ಬಳಿ ಸಂಭವಿಸಿದೆ. ಪುರಸಭೆ ನೌಕರದಾರ ನಾಗಪ್ಪ ಎಂಬುವರು ಗಂಭೀರ ಗಾಯಗೊಂಡ ವ್ಯಕ್ತಿ.
ಗಾಯಗೊಂಡ ವ್ಯಕ್ತಿಯನ್ನು ಕೂಡಲೇ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು, ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಬೇರೆಡೆ ಪಕ್ಕದ ಇಳಕಲ್ ಪಟ್ಟಣಕ್ಕೆ ಕಳುಹಿಸಿಕೊಡಲಾಗಿದೆ ಎಂದು ಮುಖ್ಯಾಧಿಕಾರಿ ಧರಣೇಂದ್ರಕುಮಾರ ಅವರು ಮಾಹಿತಿ ನೀಡಿದ್ದಾರೆ.
ಜೆಸ್ಕಾಂ ಸಿಬ್ಬಂದಿ ವಿರುದ್ಧ ಆಕ್ರೋಶ :
ಜೆಸ್ಕಾಂ ಸಿಬ್ಬಂದಿ ಮಾತ್ರ ಯಾವುದೇ ರೀತಿ ಕೆಲಸ ಮಾಡದೆ ಇರುವುದರಿಂದ ನಮ್ಮ ಸಿಬ್ಬಂದಿಗೆ ಇಂತಹ ಗತಿ ಬಂದಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರಕುಮಾರ ಅವರು ಜೆಸ್ಕಾಂ ಇಲಾಖೆಯ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.