ವಾಟ್ಸಾಪ್ ಯುನಿವರ್ಸಿಟಿಯಲ್ಲಿ ರಾಜೀನಾಮೆ ಕೇಳಿದರೆ ಅದಕ್ಕೆ ಬೆಲೆ ಇಲ್ಲ

Advertisement

ದೂರವಾಣಿ ಕರೆಯ ಸಂಭಾಷಣೆಯನ್ನು ಹರಿಯಬಿಟ್ಟು ರಾಜೀನಾಮೆ ಕೇಳಿದರೆ ಅದಕ್ಕೆ ಬೆಲೆ ಇಲ್ಲ. ನಾನು ವಿದ್ಯಾರ್ಥಿ ಜೀವನದಿಂದ ಕಾಂಗ್ರೆಸ್ಸಿನಲ್ಲಿದ್ದೇನೆ

ಮಂಗಳೂರು: ನನ್ನನ್ನು ಜಿಲ್ಲಾಧ್ಯಕ್ಷನನ್ನಾಗಿ ಆಯ್ಕೆ ಮಾಡಿರುವುದು ಹೈಕಮಾಂಡ್, ಅವರು ಹೇಳಿದರೆ ರಾಜೀನಾಮೆ ಕೊಡುತ್ತೇನೆ. ಸಾಮಾಜಿಕ ಮಾಧ್ಯಮಗಳಲ್ಲಿ ಯಾರು ಯಾರೋ ದೂರವಾಣಿ ಮೂಲಕ ನಾನು ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರೆ ಅದನ್ನು ನಾನು ಪಾಲಿಸಬೇಕಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಶುಕ್ರವಾರ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಹರೀಶ್ ಕುಮಾರ್ ಅವರು ನನ್ನನ್ನು ಆಯ್ಕೆ ಮಾಡಿದವರು ಕೇಳಿದರೆ ರಾಜೀನಾಮೆ ಕೊಡಬೇಕು ಎನ್ನುವುದು ಬದ್ಧತೆ. ದಕ್ಷಿಣ ಕನ್ನಡ ಲೋಕ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲಿನ ಜವಾಬ್ದಾರಿಯನ್ನು ನಾವೆಲ್ಲರೂ ಹೊರುತ್ತೇವೆ ಎಂದರು.

ಸೋಲಿನ ಹೊಣೆಯನ್ನು ತಾನು ಹೊರುವುದಾಗಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪದ್ಮರಾಜ್ ಹೇಳಿದ್ದಾರೆ. ಸೋಲಿಗೆ ಅವರು ಮಾತ್ರ ಹೊಣೆಯಲ್ಲ, ನಾವೆಲ್ಲರೂ ಹೊಣೆ ಹೊರುತ್ತೇವೆ ಎಂದೂ ಹರೀಶ್ ಕುಮಾರ್ ಹೇಳಿದರು.ಆದರೆ ನಾವೆಲ್ಲರೂ ರಮಾನಾಥ ರೈ ಅವರ ಉಸ್ತುವಾರಿಯಲ್ಲಿ ಒಗ್ಗೂಡಿ ಕೆಲಸ ಮಾಡಿದ್ದೇವೆ. ನಮ್ಮ ಅಭ್ಯರ್ಥಿಗೆ ಬಿದ್ದ ಮತಗಳ ಸಂಖ್ಯೆ ಹೆಚ್ಚಾಗಿದೆ ಎಂದವರು ನುಡಿದರು. ಯಾರೋ ಮನೆಯಲ್ಲಿ ಕುಳಿತು ವಾಟ್ಸಾಪ್ ಯುನಿವರ್ಸಿಟಿಯಲ್ಲಿ ತಮ್ಮ ದೂರವಾಣಿ ಕರೆಯ ಸಂಭಾಷಣೆಯನ್ನು ಹರಿಯಬಿಟ್ಟು ರಾಜೀನಾಮೆ ಕೇಳಿದರೆ ಅದಕ್ಕೆ ಬೆಲೆ ಇಲ್ಲ. ನಾನು ವಿದ್ಯಾರ್ಥಿ ಜೀವನದಿಂದ ಕಾಂಗ್ರೆಸ್ಸಿನಲ್ಲಿದ್ದೇನೆ. ಪಕ್ಷದ ವಿವಿಧ ಹುದ್ದೆಗಳಲ್ಲಿ ದುಡಿದಿದ್ದೇನೆ. ನನ್ನನ್ನು ಅಧ್ಯಕ್ಷನನ್ನಾಗಿಸುವುದಕ್ಕೆ ಜಿಲ್ಲೆಯ ೮ ಮಂದಿ ಪ್ರಮುಖರು ಕೆಪಿಸಿಸಿಗೆ ಪತ್ರ ಕೊಟ್ಟಿದ್ದಾರೆ. ಅಂತಹ ಜವಾಬ್ದಾರಿಯುತ ಸ್ಥಾನದಲ್ಲಿರುವವರಿಗೆ ನನ್ನ ರಾಜೀನಾಮೆ ಕೇಳಲು ಹಕ್ಕಿದೆಯೇ ಹೊರತು ಬೇರೆಯವರಿಗೆ ಇಲ್ಲ ಎಂದರು.
ಚುನಾವಣೆಯಲ್ಲಿ ಹಿಂದೆ ನಾನೂ ಸೋತಿದ್ದೇನೆ. ಆಗ ಸೋಲಿನ ಹೊಣೆಯನ್ನು ನಾನು ಬೇರೆಯವರ ಹೆಗಲಿಗೆ ವರ್ಗಾಯಿಸಿಲ್ಲ, ಬದಲು ನಾನೇ ಹೊತ್ತಿದ್ದೆ. ನಮ್ಮಲ್ಲಿ ಸಾಮಾನ್ಯವಾಗಿ ಒಂದು ಮನಸ್ಥಿತಿ ಇದೆ, ಗೆದ್ದರೆ ಅದು ಸ್ವಂತ ವರ್ಚಸ್ಸು, ಸೋತರೆ ಅದಕ್ಕೆ ಅವರು ಕಾರಣ, ಇವರು ಕಾರಣ ಎಂದು ದೂರು ಹಾಕುವುದು ಆ ಮನಸ್ಥಿತಿ ಎಂದೂ ಹರೀಶ್ ಕುಮಾರ್ ಹೇಳಿದರು.