ಹೊಸಪೇಟೆ: ಬಿಹಾರದ ಪಾಟ್ನಾ ಮೃಗಾಲಯದಿಂದ ತಾಲೂಕಿನ ಹಂಪಿ ಮೃಗಾಲಯಕ್ಕೆ ಕರೆತಂದ ಜಿರಾಫೆಯನ್ನು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ಶನಿವಾರ ಹಸಿರು ನಿಶಾನೆ ತೋರಿಸಿ ಸ್ವಾಗತಿಸಿದರು.
ದಿನೇ ದಿನೇ ಜನಪ್ರಿಯತೆ ಗಳಿಸುತ್ತಿರುವ ಕಮಲಾಪುರದ ಅಟಲ್ ಬಿಹಾರಿ ವಾಜಪೇಯಿ ಮೃಗಾಲಯಕ್ಕೆ ಈ ಹೊಸ ಅತಿಥಿಯ ಆಗಮನದಿಂದ ಇನ್ನೂ ಹೆಚ್ಚಿನ ಖ್ಯಾತಿಯನ್ನು ಪಡೆಯಲಿ ಎಂದು ಸಚಿವ ಆನಂದ್ ಸಿಂಗ್ ಅವರು ಹಾರೈಸಿದರು.
ಈ ಸಂದರ್ಭದಲ್ಲಿ ಹಂಪಿ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಎಂ.ಎನ್.ಕಿರಣ್ ಮಾತನಾಡಿ, ಮೃಗಾಲಯದ ಪ್ರಾಣಿಗಳ ವಿನಿಮಯ ಕಾರ್ಯಕ್ರಮದ ಅಡಿಯಲ್ಲಿ ಮೈಸೂರು ಮೃಗಾಲಯ ನೀಡಿದ ಜೀಬ್ರಾ, ಕಾಡೆಮ್ಮೆ ಮತ್ತಿತರ ಪ್ರಾಣಿಗಳ ಬದಲಾಗಿ ನಾಲ್ಕು ವರ್ಷದ ಹೆಣ್ಣು ಜಿರಾಫೆಯನ್ನು ಹಂಪಿ ಮೃಗಾಲಯಕ್ಕೆ ನೀಡಲಾಗಿದೆ. ಇದನ್ನು ತರಲು ಇಲ್ಲಿಂದ ವಿಶೇಷ ಬೋನು, ವಾಹನಗಳಲ್ಲಿ ಹೋಗಿ, ಸತತ ಒಂದು ವಾರ ಕಾಲ ನಿಧಾನವಾಗಿ ಪ್ರಯಾಣಿಸಿ ಕಮಲಾಪುರದ ಮೃಗಾಲಯಕ್ಕೆ ಬರಲಾಗಿದೆ. ಈ ಜಿರಾಫೆಗಾಗಿ ಈಗಾಗಲೇ ವಿಶೇಷವಾದ ಆವರಣವನ್ನು ಸಿದ್ಧಪಡಿಸಲಾಗಿದ್ದು, ಇದಕ್ಕೆ ಬೇಕಾದ ಆಹಾರ ಹಾಗೂ ಆರೈಕೆಯ ವ್ಯವಸ್ಥೆ ಮಾಡಲಾಗಿದೆ, ಸುದೀರ್ಘ ಪ್ರಯಾಣದಿಂದ ಚೇತರಿಸಿಕೊಂಡ ಜಿರಾಫೆ ಲವಲವಿಕೆಯಿಂದ ಓಡಾಡುತ್ತಿದೆ ಎಂದು ತಿಳಿಸಿದರು.