ರಾಜ್ಯದಲ್ಲಿ ಭ್ರಷ್ಟಾಚಾರಕ್ಕೆ ಕೊಡಲಿಪೆಟ್ಟು ಕೊಡಲು ಎಸಿಬಿ ರದ್ದುಪಡಿಸಿ ಲೋಕಾಯುಕ್ತಕ್ಕೆ ಮತ್ತೆ ಅಧಿಕಾರ ನೀಡಿ ಹೈಕೋರ್ಟ್ ಆದೇಶ ಹೊರಡಿಸಿದೆ. ಈ ಕೆಲಸ ಹಲವು ವರ್ಷಗಳ ಹಿಂದೆ ನಡೆಯಬೇಕಿತ್ತು. ವಿಚಕ್ಷಣ ಮತ್ತು ಭ್ರಷ್ಟಾಚಾರ ನಿಗ್ರಹ ಹಿಂದಿನಿಂದಲೂ ನಡೆದು ಬಂದಿರುವ ವ್ಯವಸ್ಥೆ. ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನಿಟ್ಟೂರು ಶ್ರೀನಿವಾಸರಾವ್ ದೇಶದ ಮೊದಲ ವಿಚಕ್ಷöಣ ಆಯುಕ್ತರಾಗಿ ಕೆಲಸ ಮಾಡಿರು. ೧೯೬೫ ರಲ್ಲಿ ವಿಚಕ್ಷಣ ಆಯುಕ್ತರ ಹುದ್ದೆ ಬದಲಾಯಿತು. ೧೯೮೪ ರಲ್ಲಿ ರಾಮಕೃಷ್ಣ ಹೆಗಡೆಯವರು ಇದರ ಬಗ್ಗೆ ಗಂಭೀರ ಚಿಂತನೆ ನಡೆಸಿ ಚಿಂತಕರ ಚಾವಡಿ ರಚಿಸಿ ಹೊಸ ಆಡಳಿತ ವ್ಯವಸ್ಥೆ ಜಾರಿಗೆ ತರಲು ಪ್ರಯತ್ನಿಸಿದರು. ಪ್ರೊ. ಲಕ್ಷಿಸಾಗರ್ ಹಾಗೂ ಸಂತೋಷ್ ಹೆಗ್ಡೆ ಇದಕ್ಕೆ ಸಾಕಾರ ರೂಪ ನೀಡಿದರು. ಅದರ ಫಲವಾಗಿ ಹೊಸ ಲೋಕಾಯುಕ್ತ ಕಾಯ್ದೆ ಜಾರಿಗೆ ಬಂದಿತು. ಅವರಿಗೆ ಮುಖ್ಯಮಂತ್ರಿಯೂ ಸೇರಿದಂತೆ ಎಲ್ಲರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಅಧಿಕಾರ ನೀಡಲಾಗಿತ್ತು. ಲೋಕಪಾಲ ಕಾಯ್ದೆಯಂತೆ ಇದು ರಚನೆಯಾಗಿತ್ತು. ಜನರಿಗೆ ಸರ್ಕಾರದ ಕ್ರಮದಲ್ಲಿ ವಿಶ್ವಾಸ ಮೂಡಿತು. ಮಹಾರಾಷ್ಟ್ರ ಸರ್ಕಾರ ಮೊದಲು ಇದನ್ನು ಜಾರಿಗೆ ತಂದಿತು. ಕರ್ನಾಟಕದಲ್ಲಿ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಬಳ್ಳಾರಿಗಣಿ ಹಗರಣದ ಬಗ್ಗೆ ತನಿಖೆ ಅತ್ಯುತ್ತಮ ವರದಿ ನೀಡಿದರು. ಅದರಿಂದ ಇಡೀ ಸರ್ಕಾರವೇ ಅಲುಗಾಡಿತು. ೨೦೧೬ ರಲ್ಲಿ ಅಂದಿನ ಸರ್ಕಾರ ಕೇವಲ ಆಡಳಿತಾತ್ಮಕ ಆದೇಶದ ಮೂಲಕ ಎಸಿಬಿ ರಚಿಸಿ ಲೋಕಾಯುಕ್ತ ಅಧಿಕಾರವನ್ನು ಮೊಟಕುಗೊಳಿಸಿತು. ಅಂದಿನಿಂದ ಎಸಿಬಿ ವಿರುದ್ಧ ಹಲವು ಆರೋಪಗಳು ಕೇಳಿ ಬಂದಿವು. ಸರ್ಕಾರ ಇದರ ಬಗ್ಗೆ ಗಂಭೀರವಾಗಿ ಪರಿಗಣಿಸಿರಲಿಲ್ಲ. ಎಸಿಬಿ ಬಗ್ಗೆ ಹೈಕೋರ್ಟ್ನಲ್ಲಿ ದೂರುಗಳು ದಾಖಲಾದವು. ಇತ್ತೀಚೆಗೆ ಹೈಕೋರ್ಟ್ ನ್ಯಾಯಮೂರ್ತಿಗೆ ಬೆದರಿಕೆ ಬಂದಿದ್ದು ನ್ಯಾಯಾಂಗ ಗಂಭೀರವಾಗಿ ಪರಿಗಣಿಸಿತು. ಹೀಗಾಗಿ ಈಗ ಎಸಿಬಿಯನ್ನು ರದ್ದುಪಡಿಸಿ ಲೋಕಾಯುಕ್ತಕ್ಕೆ ಮತ್ತೆ ಅಧಿಕಾರ ನೀಡಲಾಗಿದೆ. ಸಾಮಾನ್ಯವಾಗಿ ಲೋಕಾಯುಕ್ತ ಹುದ್ದೆಗೆ ಬರುವವರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಥವ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಆಗಿರಬೇಕು ಎಂದಿದೆ. ಹೀಗಾಗಿ ಅಕ್ರಮಗಳನ್ನು ಪತ್ತೆಹಚ್ಚುವಾಗ ನ್ಯಾಯಬದ್ಧ ರೀತಿನೀತಿ ಅನುಸರಿಸುವುದು ನಡೆದುಕೊಂಡು ಬಂದಿದೆ. ಲೋಕಾಯುಕ್ತ ದಾಳಿ ನಡೆಸಿ ವಿಚಾರಣೆ ನಡೆಸಿ ಮೊಕದ್ದಮೆ ಹೂಡಿದರೆ ಅದನ್ನು ಪ್ರಶ್ನಿಸುವ ಸಂದರ್ಭ ಒದಗಿಬರುತ್ತಿರಲಿಲ್ಲ. ಎಸಿಬಿ ಅಧಿಕಾರಿಗಳು ಅಕ್ರಮದ ಬಗ್ಗೆ ತನಿಖೆ ನಡೆಸಿದರೂ ಲೋಪಗಳು ಎದ್ದು ಕಾಣುತ್ತಿತ್ತು. ಇದರ ಬಗ್ಗೆ ಹಲವು ಬಾರಿ ನ್ಯಾಯಾಲಯ ತೀವ್ರ ಆಕ್ಷೇಪಗಳನ್ನು ವ್ಯಕ್ತಪಡಿಸಿತ್ತು. ಆದರೂ ಸರ್ಕಾರ ಕಿವಿಗೊಟ್ಟಿರಲಿಲ್ಲ. ಕೊನೆಗೆ ಹೈಕೋರ್ಟ್ ಎಸಿಬಿಯನ್ನೇ ರದ್ದುಪಡಿಸುವುದು ಅನಿವಾರ್ಯವಾಯಿತು. ಈಗಲಾದರೂ ಸರ್ಕಾರ ಎಚ್ಚೆತ್ತು ಲೋಕಾಯುಕ್ತಕ್ಕೆ ಪ್ರಾಮಾಣಿಕರನ್ನು ನೇಮಿಸಬೇಕು. ಈಗಲೂ ಪ್ರಾಮಾಣಿಕ ಅಧಿಕಾರಿಗಳು ಇದ್ದರೆ. ಎಲ್ಲ ಕಡೆ ಭ್ರಷ್ಟಾಚಾರ ತುಂಬಿಕೊಂಡಿದೆ ಎಂಬ ಭ್ರಮೆ ಬೇಡ. ಇಡೀ ವ್ಯವಸ್ಥೆ ಹದಗೆಟ್ಟಿದೆ ಎಂಬ ಭಾವನೆ ಬೆಳೆದರೆ ಜನರಲ್ಲಿ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಉಳಿಯುವುದಿಲ್ಲ. ಹಿಂದೆ ದೆಹಲಿಯಲ್ಲಿ ಅಣ್ಣಾ ಹಜಾರೆ ಅವರು ಲೋಕಪಾಲ ಕಾಯ್ದೆಗಾಗಿ ಬೃಹತ್ ಹೋರಾಟ ನಡೆಸಿದರು. ಅದರಲ್ಲಿ ಕೇಜ್ರಿವಾಲ್ ಕೂಡ ಪಾಲ್ಗೊಂಡಿರು. ಅವರು ಅಧಿಕಾರಕ್ಕೆ ಬಂದ ಮೇಲೂ ಲೋಕಾಯುಕ್ತ ಜಾರಿಗೆ ತರುವುದು ಕಷ್ಟವಾಗಿದೆ. ಭ್ರಷ್ಟವ್ಯವಸ್ಥೆಗೆ ಗಂಟೆ ಕಟ್ಟುವವರು ಯಾರು ಎಂಬ ಪ್ರಶ್ನೆ ಈಗಲೂ ಕೇಳುತ್ತಿದ್ದರೆ. ಅಧಿಕಾರದಲ್ಲಿರುವವರು ಮನಸ್ಸು ಮಾಡಿದರೆ ಇದು ಕಷ್ಟದ ಕೆಲಸವೇನಲ್ಲ. ಆದರೆ ಕಟ್ಟುನಿಟ್ಟಿನ ಲೋಕಾಯಕ್ತರನ್ನು ನೇಮಿಸಿದರೆ ತಾವೇ ಅಧಿಕಾರದಲ್ಲಿರಲು ಸಾಧ್ಯವಾಗುವುದಿಲ್ಲ ಎಂಬ ಭಯ ಎಲ್ಲರನ್ನೂ ಕಾಡುತ್ತಿದೆ. ಅದರಿಂದ ಈಗ ನ್ಯಾಯಾಲಯವೇ ಈ ಕೆಲಸ ಮಾಡಬೇಕಾಗಿ ಬಂದಿದೆ. ಪ್ರಜಾಪ್ರಭುತ್ವದಲ್ಲಿ ಯಾವುದೇ ಅಂಗ ತನ್ನ ಕರ್ತವ್ಯ ನಿರ್ವಹಿಸುವುದರಲ್ಲಿ ವಿಫಲವಾದರೆ ಅದನ್ನು ಬೇರೆ ಅಂಗ ಕೈಗೊಳ್ಳುವುದು ಅನಿವಾರ್ಯ. ಆ ಕೆಲಸವನ್ನು ಹೈಕೋರ್ಟ್ ಕೈಗೊಂಡಿದೆ. ಈಗಲಾದರೂ ರಾಜ್ಯ ಸರ್ಕಾರ ತನ್ನ ಜವಾಬ್ದಾರಿ ಅರಿತು ನಡೆಯುವುದು ಅಗತ್ಯ. ಈವಿಷಯದಲ್ಲಿ ಮೇಲ್ಪಂಕ್ತಿ ಹಾಕುವ ರಾಜ್ಯ ಯಾವುದೂ ಕಂಡು ಬರುತ್ತಿಲ್ಲ. ಅಧಿಕಾರಕ್ಕೆ ಬರುವ ಎಲ್ಲ ಜನರ ಕೈಗಳು ಆಕಾಶ ತೋರಿಸುತ್ತವೆ. ಆದರೆ ಅವರ ಕಾಲುಗಳು ಕೆಸರಿನಲ್ಲಿವೆ ಎಂಬುದನ್ನು ಮರೆಯುವಂತಿಲ್ಲ. ಶಾಸನಸಭೆ ಪ್ರಾಮಾಣಿರಿಂದ ತುಂಬಿರಬೇಕು ಎಂದರೆ ಮತದಾರರು ಎಚ್ಚರವಹಿಸಬೇಕು. ಒಮ್ಮೆ ಚುನಾಯಿತರಾದವರಿಗೆ ಕಡಿವಾಣ ಹಾಕುವುದು ಕಷ್ಟ. ಎಲ್ಲ ಹಂತದಲ್ಲೂ ಭ್ರಷ್ಟಾಚಾರ ತುಂಬಿದೆ ಎಂಬುದನ್ನು ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಬಹಿರಂಗವಾಗಿ ಒಪ್ಪಿಕೊಂಡಿದ್ದರೆ. ದೆಹಲಿಯಲ್ಲಿ ಸರ್ಕಾರ ೧೦೦ ರೂ. ಅನುದಾನ ಬಿಡುಗಡೆ ಮಾಡಿದರೆ ಹಳ್ಳಿಗೆ ೨೦ ರೂ. ತಲುಪುವುದು ಕಷ್ಟ ಎಂದು ರಾಜೀವಗಾಂಧಿಯವರೇ ಹೇಳಿದರು. ಭ್ರಷ್ಟಾಚಾರ ಜಾಗತಿಕ ಸಮಸ್ಯೆ ಎಂದು ಇಂದಿರಾಗಾಂಧಿ ಹೇಳಿದರು. ಆದರೂ ಜನ ಬಯಸುವುದು ಭ್ರಷ್ಟರಹಿತ ಆಡಳಿತವನ್ನೇ. ಲಂಚ ಸರ್ವವ್ಯಾಪಿ ಎಂದು ಕೈಕಟ್ಟಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಲೋಕಾಯುಕ್ತರಿಗೆ ಹೆಚ್ಚಿನ ಅಧಿಕಾರ ನೀಡಿ ಜನಸಾಮಾನ್ಯರ ಬದುಕನ್ನು ನೆಮ್ಮದಿಯಿಂದ ಇರುವಂತೆ ಮಾಡಲು ಈಗಿನ ವ್ಯವಸ್ಥೆಯಲ್ಲೇ ಸಾಧ್ಯವಿದೆ.
ಹೊರದೇಶಗಳಲ್ಲೂ ಭ್ರಷ್ಟರಹಿತ ವ್ಯವಸ್ಥೆ ಜಾರಿಗೆ ತರಲು ಎಲ್ಲ ಪ್ರಯತ್ನಗಳು ನಡೆಯುತ್ತಿವೆ. ಯಾವುದೇ ರೀತಿಯ ಆಡಳಿತ ವ್ಯವಸ್ಥೆ ಇರಲಿ. ಪಾರದರ್ಶಕತೆ ಮತ್ತು ಕಂಪ್ಯೂಟರೀಕೃತ ವ್ಯವಸ್ಥೆ ಜಾರಿಗೆ ಬಂದಲ್ಲಿ ಜನಸಾಮಾನ್ಯರನ್ನು ಭ್ರಷ್ಟ ವ್ಯವಸ್ಥೆಯಿಂದ ಕಾಪಾಡಬಹುದು. ಆದರೂ ಉನ್ನತ ಮಟ್ಟದಲ್ಲಿ ನಡೆಯುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು ಎಂದರೆ ನಿಸ್ಪಹ ಜನರ ಸಂಖ್ಯೆ ಆಡಳಿತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರಬೇಕು. ಭ್ರಷ್ಟರನ್ನು ಶಿಕ್ಷಿಸುವ ಹಾಗೆ ಪ್ರಾಮಾಣಿಕರನ್ನು ಗುರುತಿಸಿ ಆಯಕಟ್ಟಿನ ಸ್ಥಾನಕ್ಕೆ ನೇಮಿಸುವ ಕೆಲಸ ನಡೆಯಬೇಕು. ಈಗ ಪ್ರಾಮಾಣಿಕರು ಅಸ್ಪಶ್ಯರಾಗುತ್ತಿದ್ದಾರೆ. ಅವರು ಇಡೀ ವ್ಯವಸ್ಥೆಯಲ್ಲಿ ಕೆಲಸಕ್ಕೆ ಬಾರದವರು ಎಂಬ ಭಾವನೆ ಮೂಡಿದೆ. ಎಲ್ಲ ಕಡೆ ಭ್ರಷ್ಟಾಚಾರದ ಹುತ್ತವನ್ನು ಬಡಿಯುವ ಕೆಲಸ ನಡೆಯುತ್ತಿದೆಯೇ ಹೊರತು ಹಾವನ್ನು ಸಾಯುವಂತೆ ಮಾಡುವ ಕೆಲಸ ನಡೆಯುತ್ತಿಲ್ಲ. ಹೀಗಾಗಿ ಜನಸಾಮಾನ್ಯರಿಗೆ ಇನ್ನೂ ಭ್ರಷ್ಟ ಮುಕ್ತ ವ್ಯವಸ್ಥೆಯನ್ನು ಕಾಣುವ ಹಂಬಲ ಗಗನಕುಸುಮವಾಗೇ ಉಳಿದುಕೊಂಡಿದೆ.