ಬೆಂಗಳೂರು: ಖಾತೆ ಬದಲಾವಣೆಗೆ 60 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟ ಬಿಬಿಎಂಪಿ ARO ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ೧೦ ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಬಿಎಂಪಿ ಎಆರ್‌ಒ ಅಧಿಕಾರಿ ಸೇರಿ ಇಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಬಿಬಿಎಂಪಿಯ ಹೆಗ್ಗನಹಳ್ಳಿ ಬಿಬಿಎಂಪಿ ಕಚೇರಿಯ ಸಹಾಯಕ ಕಂದಾಯ ಅಧಿಕಾರಿ(ಎಆರ್‌ಒ) ಚಂದ್ರಪ್ಪ ಬೀರಜ್ಜನವರ್ ಮತ್ತು ಗೋಪಾಲ್ ನಾಯ್ಕ ಬಂಧಿತರು.
ಆರೋಪಿ ಚಂದ್ರಪ್ಪ ಬೀರಜ್ಜನವರ್, ಹೆಗ್ಗನಹಳ್ಳಿ ನಿವಾಸಿ ಸೋಮಶೇಖರ್ ಎಂಬುವರರಿಗೆ ಖಾತಾ ದಾಖಲಾತಿ ನೀಡಲು ಒಟ್ಟು ೬೦ ಸಾವಿರಕ್ಕೆ ಲಂಚಕ್ಕೆ ಬೇಡಿಕೆ ಇಟ್ಟು, ೧೦ ಸಾವಿರ ರೂ. ಮುಗಂಡವಾಗಿ ಹಣ ಪಡೆಯುತ್ತಿದ್ದ ವೇಳೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಸಾಕ್ಷಿ ಸಮೇತ ಇಬ್ಬರನ್ನು ಬಂಧಿಸಿದ್ದಾರೆ. ನಂತರ ಚಂದ್ರಪ್ಪ ಬೀರಜ್ಜನವರ್ ಮನೆ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ೫ ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದು, ರಾಣಿಬೆನ್ನೂರಿನಲ್ಲಿ ಇರುವ ೬ ಎಕರೆ ಜಮೀನಿನ ದಾಖಲಾತಿಗಳನ್ನು ವಶಪಡಿಸಿಕೊಂಡಿದ್ದಾರೆ. ೩೦*೪೦ ವಿಸ್ತೀರ್ಣದ ನಿವೇಶನ ಮತ್ತು ಕೆ.ಆರ್.ಪುರದಲ್ಲಿ ಮೂರು ಹಂತಸ್ತಿನ ಕಟ್ಟಡ ಇರುವುದು ಪತ್ತೆಯಾಗಿದ್ದು, ಪರಿಶೀಲನೆ ಮುಂದುವರಿದಿದೆ.