ಹಾವೇರಿ (ರಾಣೇಬೆನ್ನೂರ): ಸುಮಾರು ೧೨ ಸಾವಿರ ರೂ. ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದ ಇಲ್ಲಿಯ ತಹಸೀಲ್ದಾರ್ ಎಚ್.ಎನ್.ಶಿರಹಟ್ಟಿ ೧೫ ದಿನದಲ್ಲಿ ಮತ್ತೆ ರಾಣೇಬೆನ್ನೂರಿನ ತಾಲೂಕು ದಂಡಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಅಧಿಕಾರಿ ಟ್ರಾö್ಯಪ್ ಆದ ಸ್ಥಳಕ್ಕೆ ಮತ್ತೆ ಕೆಲಸ ಮಾಡಲು ಅವಕಾಶ ನೀಡಿದರೆ ಸಾಕ್ಷಿ ನಾಶ, ದೂರುದಾರನ ವಿರುದ್ಧ ಷಡ್ಯಂತ್ರ ಮಾಡುವ ಸಂಭವ ಇರುತ್ತದೆ ಎನ್ನುವ ಕಾರಣಕ್ಕೆ ಅಮಾನತುಗೊಳಿಸಿ ನಂತರ ಕೆಲ ದಿನಗಳಲ್ಲಿ ಬೇರೆಡೆ ನಿಯೋಜನೆ ಮಾಡಲಾಗುತ್ತದೆ. ಆದರೆ, ರಾಣೇಬೆನ್ನೂರ ತಹಸೀಲ್ದಾರ್ ಎಚ್.ಎನ್. ಶಿರಹಟ್ಟಿ ಅವರಿಗೆ ಈ ರೀತಿಯಾಗಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.
ಜ. ೫ರಂದು ಮಣ್ಣಿನ ಲಾರಿ ಬಿಡಲು ತನ್ನ ಚಾಲಕನ ಮೂಲಕ ೧೨ ಸಾವಿರ ರೂ. ತೆಗೆದುಕೊಳ್ಳುತ್ತಿದ್ದ ಸಮಯದಲ್ಲಿ ರೆಡ್‌ಹ್ಯಾಂಡ್ ಶಿರಹಟ್ಟಿ ಸಿಕ್ಕಿಬಿದ್ದಿದ್ದರು ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದರು.
ಆದರೆ ಪ್ರಕರಣ ನಡೆದು ೧೫ ದಿನ ಕಳೆದಿಲ್ಲ. ಆಗಲೇ ಮತ್ತೆ ತಹಸೀಲ್ದಾರ್ ಆಗಿ ಜ. ೨೨ರಂದು ಕರ್ತವ್ಯಕ್ಕೆ ಹಾಜರಾಗಿರುವುದು ಸಾರ್ವಜನಿಕರು ಆಶ್ಚರ್ಯದಿಂದ ನೋಡುವಂತಾಗಿದೆ. ಅವರ ನಿಯೋಜನೆ ಕುರಿತು ನಾವು ಹೇಳಲು ಬರುವುದಿಲ್ಲ ಎಂದಷ್ಟೆ ಜಿಲ್ಲಾಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆನ್ನಲಾಗಿದೆ.