ಹುಬ್ಬಳ್ಳಿ: `ಅಸತ್ಯಂ ಪ್ರಿಯಂ. ಸತ್ಯಂ ಅಪ್ರಿಯಂ’ ಎಂಬ ಶ್ಲೋಕದ ಪ್ರಕಾರ ಲೋಕಸಭಾ ಚುನಾವಣೆ ವಿಚಾರವಾಗಿ ನಾನು ಸತ್ಯವನ್ನು ಹೇಳಿದರೆ ಮಠ ಸೇರುವುದಿಲ್ಲ. ಮುಂದೆ ಕಾಲ ಕೂಡಿ ಬಂದಾಗ ಲೋಕಸಭೆ ಚುನಾವಣೆಯ ಬಗ್ಗೆ ಭವಿಷ್ಯ ನುಡಿಯುತ್ತೇನೆ ಎಂದು ಹಾರನಹಳ್ಳಿ ಕೋಡಿಮಠದ ಶಿವಾನಂದ ಶಿವಯೋಗಿ ಸ್ವಾಮೀಜಿ ಹೇಳಿದ್ದಾರೆ.
ಹುಬ್ಬಳ್ಳಿಯ ಶನಿವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸತ್ಯ ಯಾರಿಗೂ ಇಷ್ಟವಾಗುವುದಿಲ್ಲ. ಅಸತ್ಯವೇ ಎಲ್ಲರಿಗೂ ಇಷ್ಟವಾಗುತ್ತದೆ. ಲೋಕಸಭೆ ಚುನಾವಣೆಗೆ ಇನ್ನೂ ಬಹಳ ದಿನಗಳಿವೆ. ಈಗಲೇ ಸತ್ಯವನ್ನು ಹೇಳಿದರೇ ನಾನು ಮಠ ತಲುಪಲು ಸಾಧ್ಯವಾಗುವುದಿಲ್ಲ. ಸಮಯ ಬಂದಾಗ ಹೇಳುತ್ತೇನೆ ಎಂದು ಆತಂಕ ಹೊರಹಾಕಿದರು.
ಜಾಗತಿಕ ಮಟ್ಟದಲ್ಲಿ ಬಹುದೊಡ್ಡ ದುರಂತ, ಜಲಪ್ರಳಯದ ಭವಿಷ್ಯ ನುಡಿದ ಶ್ರೀಗಳು, ಜಾಗತಿಕ ಮಟ್ಟದಲ್ಲಿ ದುರಂತ ಸಂಭವಿಸಲಿದೆ. ಒಂದೆರಡು ರಾಷ್ಟ್ರಗಳು ಮುಚ್ಚಿ ಹೋಗಲಿವೆ. ಅಕಾಲ ಮೃತ್ಯುಗಳಾಗುವ ಸೂಚನೆ ಇದೆ. ವಿಜಯದಶಮಿಯಿಂದ ಸಂಕ್ರಾಂತಿವರೆಗೆ ಜಗತ್ತಿನಲ್ಲಿ ದುರ್ಘಟನೆ ನಡೆಯುತ್ತದೆ. ಆಳುವವರು ಅರಿತರೆ ಗಂಡಾಂತರದಿಂದ ಪಾರಾಗಬಹುದು. ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದರು.
ಇನ್ನು ರಾಜ್ಯ ರಾಜಕರಣದ ಬಗ್ಗೆ ಭವಿಷ್ಯ ನುಡಿದ ಶ್ರೀಗಳು, ಕರುನಾಡಿಗೆ ಕೆಲವೊಂದು ಆಪತ್ತು ಎದುರಾಗುತ್ತವೆ. ಸಾವು ನೋವುಗಳು ಆಗುತ್ತವೆ. ದೈವ ಕೃಪೆಯಿಂದ ಪಾರಾಗಬಹುದು. ಜಗತ್ತಿನ ಸಾಮ್ರಾಟರು ತಲ್ಲಣ ಆಗುತ್ತಾರೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಸಾರ್ವಜನಿಕ ದೃಷ್ಟಿಯಿಂದ ಒಳ್ಳೆಯದೇ. ಯಾವ ಹೆಣ್ಣಿಗೆ ಸ್ವಾತಂತ್ರ ಇರಲಿಲ್ಲ. ಅಂತಹ ಹೆಣ್ಣುಮಕ್ಕಳು ಈಗ ಸ್ವತಂತ್ರವಾಗಿ ಹೊರಗಡೆ ಬಂದಿದ್ದಾರೆ. ಈ ಬಾರಿ ರಾಜ್ಯದಲ್ಲಿ ಸಾಕಷ್ಟು ಮಳೆ ಬರುತ್ತದೆ. ಜಲಪ್ರಳಯ ಆಗುವ ಲಕ್ಷಣ ಇದೆ. ಬಾಯಿಯ ವಾಸನೆ ಮೂಗಿಗೆ ಬಡಿಯುವುದಿಲ್ಲ. ಆದರೆ, ಊರಿನ ಎಲ್ಲಾ ವಾಸನೆ ಮೂಗಿಗೆ ಮುಟ್ಟುತ್ತದೆ ಎಂದು ಮಾರ್ಮಿಕವಾಗಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.