ಲೆಕ್ಕಕ್ಕೆ ಹಚ್ಕೋ-ಪಕ್ಕಕ್ಕೆ ಸರ್ಕೋ…

Advertisement

ಮದ್ರಾಮಣ್ಣ ಏನೇನು ಕೊಟ್ಟಾರೆ ಗೊತ್ತ? ಅಯ್ಯೋ ನಮಗೆ ಇಷ್ಟು ಕೊಡುತ್ತಾನೆ ಎಂದು ಗೊತ್ತೇ ಇರಲಿಲ್ಲ. ಕೇಳಿದ್ದೆಲ್ಲ ಕೊಟ್ಟಾನ…ಏನರ ಬಿಟ್ಟಾನ? ಏನೂ ಇಲ್ಲ. ಈಗ ಓಣಿ ಓಣಿಗಳಲ್ಲಿ ಮದ್ರಾಮಣ್ಣನವರು ನಿಂತಿರುವ ಫ್ಲೆಕ್ಸ್ ಹಾಕಿಸಿ ಎಂದು ಗ್ರಾಮ ಪಂಚಾಯ್ತಿ ಮೆಂಬರ್ ತಿಗಡೇಸಿ ಓಣೋಣಿ ತಿರುಗಿ ಹೇಳಿದ್ದಲ್ಲದೇ ಡಂಗೂರ ಸಹಿತ ಹೊಡೆಸಿದ. ಕೆಲವರು ಅದಕ್ಕೆ ನಾವ್ಯಾಕೆ ಹಣ ಖರ್ಚು ಮಾಡಿ ಫ್ಲೆಕ್ಸ್ ಹಾಕಿಸಬೇಕು? ರೊಕ್ಕ ಕೊಟ್ಟರೆ ಬೇಕಾದರೆ ಹಾಕಿಸೇವು ಎಂದು ಒಟ ಒಟ ಅನ್ನತೊಡಗಿದರು. ಈ ಸುದ್ದಿ ತಿಗಡೇಸಿಗೆ ಗೊತ್ತಾಯಿತು. ಮರುದಿನವೇ ಮಹಿಳಾಮಂಡಳದ ಸಭೆ ಕರೆದ. ಕರಿಭಾಗೀರತಿ, ಬುಸ್ಯವ್ವ, ಮೇಕಪ್ ಮರೆಮ್ಮ, ಜಿಲಿಬಿಲಿ ಎಲ್ಲವ್ವ, ಹೋಟೆಲ್ ಶೇಷಮ್ಮ, ಕ್ವಾಟಿಗ್ವಾಡಿ ಸುಂದ್ರವ್ವ ಎಲ್ಲರೂ ಸೇರಿದ್ದರು. ಎರಡು ಸಲ ಕಂಟ್ರಂಗಮ್ಮತ್ತಿ ಅವರಿಗೆ ಹೇಳಿ ಕಳುಹಿಸಿದರೂ ಆಕೆ ನಾನು ನಾಲ್ಕು ದಿನ ಉಪವಾಸ ವೃತ ಹಿಡಿದಿದ್ದೇನೆ ಎಂದು ನೆಪ ಹೇಳಿ ತಪ್ಪಿಸಿಕೊಂಡಳು. ಹೋಗಲಿ ಬಿಡು ಎಂದು ತಿಗಡೇಸಿ ಮಹಿಳಾ ಮಂಡಳದ ಕಾರ್ಯಕ್ರಮಕ್ಕೆ ಹೋಗಿ… ನೋಡ್ರಮ್ಮೋರೆ… ಮದ್ರಾಮಣ್ಣನವರು ಎಲ್ಲ ಕೊಟ್ಟಾರೆ. ಇವತ್ತಿನ ದಿನಗಳಲ್ಲಿ ಯಾರು ಕೊಡುತ್ತಾರೆ ಹೇಳಿ… ಅವರು ನಿಜಕ್ಕೂ… ನನಗೆ ಮಾತನಾಡಲು ಆಗುವುದಿಲ್ಲ ಅಷ್ಟಕ್ಕೊಂದು ಕೊಟ್ಟು ಬಿಟ್ಟಾರೆ ಎಂದು ಹೇಳುತ್ತಿದ್ದಂತೆ ಸಟಕ್ಕನೇ ಎದ್ದು ನಿಂತ ಮೇಕಪ್ ಮರೆಮ್ಮ… ಅಯ್ಯೋ ತಿಗಡೇಸ್ಯಾ… ಅದೇನು ಕೊಟ್ಟಾನೆ ಅಂತ ಹೇಳುತ್ತೀಯ… ಫೇರ್ ಆಂಡ್ ಲವ್ಲಿ.. ಪಾಂಡ್ಸ್ ಪೌಡರ್…. ಫೇಸ್‌ವಾಶು ಯಾವುದೂ ಸೋವಿ ಮಾಡಿಲ್ಲ. ಏನು ಕೊಟ್ಟಾನೆ ಹೇಳು ಅಂದಾಗ… ನಾವು ನಮ್ಮದಷ್ಟೇ ನೋಡೋದು ಬೇಡ… ಬೇರೆ.. ಬೇರೆ ಕ್ಷೇತ್ರಕ್ಕೆ ಎಷ್ಟೆಷ್ಟು ಕೊಟ್ಟಾನ ನೋಡು ಅಂದಾಗ ಆಕೆ… ಬೇರೆಯವರದ್ದು ತೆಗೆದುಕೊಂಡು ನಾವೇನು ಮಾಡುವುದು.. ನಮ್ಮದು ನಾನು ಹೇಳಿದೆ ಅಂದಾಗ… ಹೋಟೆಲ್ ಶೇಷಮ್ಮ ಓಯ್ ತಿಗಡೇಸಿ… ಸಕ್ರಿ-ಚಾಪುಡಿಗೆ ಸಬ್ಸಿಡಿ ಕೊಡಲಿಲ್ಲ ಇದಕ್ಕೇನು ಹೇಳುತ್ತಿ? ಎಂದು ಕೇಳಿದಳು. ಜಿಲಿಬಿಲಿ ಎಲ್ಲವ್ವಳಂತೂ ತಿಗಡೇಸಿ.. ನಿನಗೆ ಬೇಕಿದ್ದರೆ ನೀನು ಹೋಗಿ ಆತನ ಮುಂದೆ ನಿಂತು ಹಲ್ಲುಗಿಂಜು… ನಾ ಮಾಡಿ ಉಳಿದ ಜಿಲೇಬಿಗಳನ್ನು ಸರ್ಕಾರವೇ ತೆಗೆದುಕೊಳ್ಳುವ ಹಾಗೆ ಆದೇಶ ಕೊಡಿಸು ಎಂದು ನಾನು ತಿಂಗಳ ಹಿಂದೆಯೇ ಮನವಿ ಮಾಡಿದ್ದೆ. ಆಯ್ತೇಳವ್ವ ನಾ ಮಾಡ್ತೀನಿ ಅಂದಾಂವ… ಅದರ ಬಗ್ಗೆ ಸುದ್ದಿಯೇ ಇಲ್ಲ. ನೀನು ಹೇಳಿಕೆ ಬರಬೇಡ ಅಂದಳು. ಅದು ಹಂಗಲ್ರಬೇ ಎಂದು ತಿಗಡೇಸಿ ಬಾಯಿ ತೆಗೆಯುತ್ತಿದ್ದಂತೆ. ಕರಿಭಾಗೀರತಿ ಎದ್ದು ನಿಂತು ನೀನು ಏನೂ ಹೇಳಬೇಡ ತಿಗಡೇಸಿ…ಮದ್ರಾಮಣ್ಣನು ಕೊಡುವ ಹಾಗೆ ಕೊಟ್ಟು ಲೆಕ್ಕಕ್ಕೆ ಹಚ್ಕೋ-ಪಕ್ಕಕ್ಕೆ ಸರ್ಕೋ ಅಂದಾನ… ಉದ್ರಿ ನಾವೆಲ್ಲ ಎಲ್ಲಿ ಹಚ್ಕೊಳೋಣ ಎಂದು ಮಾರ್ಮಿಕವಾಗಿ ನುಡಿದು ಸಭೆಯನ್ನು ಬರ್ಕಾಸ್ತ್ ಮಾಡಲು ಸೂಚಿಸಿದಳು.