ಹುಬ್ಬಳ್ಳಿ: ರಾಜ್ಯ ಸರಕಾರ ಶೇ. ೪೦ ರಷ್ಟು ಕಮೀಷನ್‌ನಿಂದ ಲಂಚ ಹೊಡೆದ ಹಣದಲ್ಲಿ ಜನಸ್ಪಂದನ ಸಮಾವೇಶ ಮಾಡುತ್ತಿದೆ. ಉಮೇಶ ಕತ್ತಿ ಅವರಂಥ ಹಿರಿಯ ಸಚಿವರನ್ನು ರಾಜ್ಯ ಕಳೆದುಕೊಂಡಿದೆ. ರಾಜ್ಯದಲ್ಲಿ ಸೂತಕದ ವಾತವರಣವಿದೆ. ಹೀಗಿರುವಾಗ ಸಚಿವರೊಬ್ಬರು ಸಮಾವೇಶದಲ್ಲಿ ಡ್ಯಾನ್ಸ್ ಮಾಡೋದು ಎಷ್ಟು ಸರಿ ಎಂದು ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೊನ್ನೆಯಷ್ಟೇ ಬಿಜೆಪಿಯ ಹಿರಿಯ ಸಚಿವರಾಗಿದ್ದ ಉಮೇಶ ಕತ್ತಿ ನಿಧನರಾಗಿದ್ದರು. ಕತ್ತಿ ಅವರ ನಿಧನದ ಹಿನ್ನಲೆಯಲ್ಲಿ ೩ ದಿನ ಶೋಕಾಚರಣೆ ಸಹ ಸರಕಾರ ಘೋಷಿಸಿದೆ. ಹೀಗಿರುವಾಗ ದೊಡ್ಡಬಳ್ಳಾಪುರದಲ್ಲಿ ಜನಸ್ಪಂದನ ಸಮಾವೇಶ ಮಾಡುತ್ತಿರುವುದು ಯಾವ ಪುರುಷಾರ್ಥಕ್ಕೆ ಎಂದು ಸಿದ್ಧರಾಮಯ್ಯ ಪ್ರಶ್ನಿಸಿದರು.
ರಾಜ್ಯದಲ್ಲಿ ನೆರೆಯಿಂದ ಜನ ತತ್ತರಿಸಿದ್ದಾರೆ. ಬೆಂಗಳೂರಿನಲ್ಲಿ ಜಲಪ್ರಳಯವೇ ಆಗಿದೆ. ಅವರ ಸಮಸ್ಯೆಗೆ ತುರ್ತು ಸ್ಪಂದನೆ ಮಾಡುವುದು ಬಿಟ್ಟು ಈ ರೀತಿ ಜನಸ್ಪಂದನ ಸಮಾವೇಶ ಮಾಡುತ್ತಿದ್ದಾರೆ. ಬಿಜೆಪಿಯವರು ಮೂರು ಬಿಟ್ಟವರು ಊರಿಗೆ ದೊಡ್ಡವರು ಎನ್ನುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ದಾವಣಗೆರೆಯಲ್ಲಿ ನನ್ನ ಜನ್ಮ ದಿನಾಚರಣೆ ಸಮಾವೇಶಕ್ಕೆ ಸೆಡ್ಡು ಹೊಡೆಯಲು ಬಿಜೆಪಿ ಜನಸ್ಪಂದನ ಸಮಾವೇಶ ಮಾಡುತ್ತಿದೆ. ಜನ ನನ್ನ ಜನ್ಮದಿನಕ್ಕೆ ಸ್ವಯಂಪ್ರೇರಣೆಯಿಂದ ಬಂದಿದ್ದರು. ಆದರೆ ಬಿಜೆಪಿಯವರು ಅಧಿಕಾರ ದುರ್ಬಳಕೆ ಮಾಡಿಕೊಂಡು ಜನರನ್ನು ಕರೆ ತರುವ ಕೆಲಸ ಮಾಡಿದ್ದಾರೆ. ಅಷ್ಟಾದರೂ ಜನಸ್ಪಂದನ ಸಮಾವೇಶಕ್ಕೆ ನಿರೀಕ್ಷಿತ ಜನ ಬಂದಿಲ್ಲ. ಇದರಿಂದಲೇ ಗೊತ್ತಾಗುತ್ತೆ ಇವರು ಎಷ್ಟರ ಮಟ್ಟಿಗೆ ಜನರಿಗೆ ಸ್ಪಂದಿಸಿದ್ದಾರೆ ಎನ್ನುವುದು ಎಂದರು.