ಲಂಚ ಮಂಚದ ಸರಕಾರ: ಪ್ರಿಯಾಂಕ್ ಖರ್ಗೆ ಆರೋಪ

priyank kharge
Advertisement

ಕಲಬುರಗಿ: ರಾಜ್ಯದಲ್ಲಿ ಸರಕಾರಿ ಉದ್ಯೋಗ ಪಡೆಯಬೇಕು ಎನ್ನುವುದಾದರೆ ಯುವತಿಯರು ಮಂಚ ಏರಬೇಕು ಹಾಗೂ ಯುವಕರು ಹಣ ನೀಡಬೇಕು ಎನ್ನುವ ದುಸ್ಥಿತಿ ತಲೆದೋರಿದೆ ಎಂದು ಕೆಪಿಸಿಸಿ ವಕ್ತಾರ ಹಾಗೂ ಚಿತ್ತಾಪುರ ಕ್ಷೇತ್ರದ ಶಾಸಕ ಪ್ರಿಯಾಂಕ್ ಖರ್ಗೆ ಟೀಕಿಸಿದರು.
ಕಲಬುರಗಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆಗಾಗಿ ವಾರ್ಷಿಕ 2 ಕೋಟಿ ಉದ್ಯೋಗ ಸೃಷ್ಟಿ ಮಾಡುವ ಭರವಸೆ ನೀಡಲಾಗಿತ್ತು. ಆದರೆ, ಈಗ ಅದರ ಬದಲಾಗಿ ಸರ್ಕಾರಿ ಉದ್ಯೋಗಗಳನ್ನೇ ಹಣಕ್ಕೆ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
50 ವರ್ಷಗಳಲ್ಲಿ ಇಂತಹ ನಿರುದ್ಯೋಗ ಸಮಸ್ಯೆ ಎಂದೂ ಉದ್ಭವಿಸಿರಲಿಲ್ಲ.‌ ಕಳೆದ ಮೂರು ವರ್ಷಗಳಲ್ಲಿ ಶೂನ್ಯ ಉದ್ಯೋಗ ಸೃಷ್ಟಿಯಾಗಿದೆ. ಸರಕಾರಿ ಉದ್ಯೋಗ ಬಯಸುವ ಬಡವರು, ಮಧ್ಯಮ ವರ್ಗದ ಯುವಕರ ಬದುಕಿನೊಂದಿಗೆ ಸರಕಾರ ಚೆಲ್ಲಾಟ ಆಡುತ್ತಿದೆ. ಗ್ರಾಮೀಣ ಭಾಗದಲ್ಲಿ ಸರಕಾರಿ ನೌಕರಿಗಾಗಿ ಹೊಲ ಮನೆ ಮಾರಿಕೊಳ್ಳುತ್ತಿದ್ದಾರೆ. ಅಷ್ಟರಮಟ್ಟಿಗೆ ಸರಕಾರಿ ನೌಕರಿಗಳನ್ನು ಸರಕಾರ ಮಾರಾಟ ಮಾಡುತ್ತಿದೆ ಎಂದರು‌.
ಪಿಎಸ್ಐ ನೇಮಕಾತಿ ಪರೀಕ್ಷೆ ಹಾಗೂ ಎಸ್‌ಡಿಎ ಪರೀಕ್ಷೆಯಲ್ಲಿಯೂ ಬ್ಲೂಟೂತ್ ಬಳಸಿ ಅಕ್ರಮವೆಸಗಲಾಗಿದೆ ಎಂಬುದು ಈಗಾಗಲೇ ತನಿಖೆಗಳಿಂದ ಸಾಬೀತಾಗಿದೆ.
ಇತ್ತೀಚೆಗೆ ಸಚಿವ ಪ್ರಭು ಚವ್ಹಾಣ್ ಅವರಿಗೆ ಕನ್ನಡ ಕಲಿಸಲು ಬಂದಿದ್ದ ಜ್ಞಾನದೇವ ಎಂಬ ವ್ಯಕ್ತಿಯನ್ನು ಸಹ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಇದೆಲ್ಲವನ್ನೂ ನೋಡುತ್ತಿದ್ದರೆ ಈ ಸರಕಾರದಲ್ಲಿ ನಿರುದ್ಯೋಗಿ ಯುವಕರಿಗೆ ಭದ್ರತೆ ಇಲ್ಲ ಎಂಬುದು ಸಾಬೀತಾಗಿದೆ ಎಂದರು.
ಜನವರಿ 24, 2022ರಲ್ಲಿ ನಡೆದ ಕೆಪಿಟಿಸಿಎಲ್ ಸಹಾಯಕ ಎಂಜಿನಿಯರ್, ಕಿರಿಯ ಎಂಜಿನಿಯರ್, ಕಿರಿಯ ಸಹಾಯಕ ಹುದ್ದೆ ಸೇರಿದಂತೆ 1492 ಹುದ್ದೆಗಳ ಪರೀಕ್ಷೆಯಲ್ಲಿಯೂ ಬ್ಲೂ ಟೂತ್ ಬಳಸಿರುವ ಬಗ್ಗೆ ದೂರುಗಳು ಬಂದಿವೆ. ಈ ಹುದ್ದೆಗಳಿಗಾಗಿ ಮೂರು ಲಕ್ಷ ಯುವಕರು ಅರ್ಜಿ ಸಲ್ಲಿಸಿದ್ದರು. ಹಾಗಾದರೆ, ಸರಕಾರಕ್ಕೆ ಪಾರದರ್ಶಕವಾಗಿ ಪರೀಕ್ಷೆ ನಡೆಸುವ ಯೋಗ್ಯತೆ ಇಲ್ಲವೇ? ಎಂದು ಮಾಜಿ ಸಚಿವ ಪ್ರಿಯಾಂಕ್ ಪ್ರಶ್ನಿಸಿದರು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವೇ ಕೆಪಿಟಿಸಿಎಲ್ ಪರೀಕ್ಷೆಗಳನ್ನು ನಡೆಸಿದೆ. ಇಷ್ಟಕ್ಕೂ ಪ್ರಾಧಿಕಾರವೇ ಪರೀಕ್ಷಾ ವಸ್ತ್ರ ಸಂಹಿತೆ ಜಾರಿಗೊಳಿಸಿದ್ದಾಗ್ಯೂ ಪರೀಕ್ಷಾ ಕೊಠಡಿಯಲ್ಲಿ ಬ್ಲೂ ಟೂತ್ ಹೇಗೆ ಪ್ರವೇಶಿಸಲು ಸಾಧ್ಯ? ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಸುಮಾರು 300 ಕೋಟಿ ರೂ. ಅವ್ಯವಹಾರ ನಡೆದಿರುವ ಬಗ್ಗೆ ಅನುಮಾನಗಳಿವೆ. ಪ್ರಕರಣದಲ್ಲಿ ಐಪಿಎಸ್ ಅಧಿಕಾರಿ ಅರೆಸ್ಟ್ ಆಗಿದ್ದಾರೆ. ಈ ವಿದ್ಯಮಾನದ ನಂತರವೂ ಬೇರೆ ಬೇರೆ ಪರೀಕ್ಷೆಗಳಲ್ಲಿ ಇಷ್ಟೊಂದು ಧೈರ್ಯವಾಗಿ ಪರೀಕ್ಷಾ ಅಕ್ರಮಗಳಿಗೆ ಹಾದಿ ಮಾಡಿಕೊಡಲಾಗುತ್ತಿದೆ ಎನ್ನುವುದಾದರೆ ರಾಜ್ಯ ಸರಕಾರ ಅಷ್ಟೊಂದು ನಿಷ್ಕ್ರಿಯವಾಗಿದೆಯೇ? ಎಂದು ದಿಗ್ಭ್ರಾಂತಿ ವ್ಯಕ್ತಪಡಿಸಿದರು.
ಈ ಸರಕಾರದಲ್ಲಿ 40 ಪರ್ಸೆಂಟ್ ಕಮಿಷನ್ ದಂಧೆಯಿಂದಾಗಿ ವಿಧಾನಸೌಧವೇ ವ್ಯಾಪಾರ ಸೌಧವಾಗಿ ಮಾರ್ಪಟ್ಟಿದೆ. ಹಾಗಾದರೆ ಸರಕಾರದ ಬಗ್ಗೆ ಭಯವೇ ಇಲ್ಲ ಎನ್ನುವುದಾದರೆ ಇದು ಎಂತಹ ಸರಕಾರ? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ನಡೆದಿರುವ ಪಿಎಸ್ಐ ಅಕ್ರ‌ಮ ಪರೀಕ್ಷೆ, ಎಸ್‌ಡಿಎ ಪರೀಕ್ಷೆ, ಕೆಪಿಟಿಸಿಎಲ್ ಪರೀಕ್ಷೆ ಸೇರಿದಂತೆ ಎಲ ರೀತಿಯ ಪರೀಕ್ಷಾ ಅಕ್ರಮಗಳ ಕುರಿತು ಪಾರದರ್ಶಕ ತನಿಖೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆಯಾಗಲು ಎಲ್ಲ ರೀತಿಯ ಪರೀಕ್ಷಾ ಅಕ್ರಮಗಳನ್ನು ಒಂದೇ ಸಂಸ್ಥೆಯಡಿ ತನಿಖೆಗೆ ಒಳಪಡಿಸಲು ಅನುಕೂಲ ಆಗುವಂತೆ ತ್ವರಿತ ವಿಲೇವಾರಿ ನ್ಯಾಯಾಲಯ
(ಫಾಸ್ಟ್ ಟ್ರ್ಯಾಕ್ ಕೋರ್ಟ್) ಸ್ಥಾಪಿಸಬೇಕು ಎಂದು ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು.

priyank kharge

ತಿರಂಗಾ ಹೆಸರಲ್ಲೂ ಲೂಟಿ
ಘರ್ ಘರ್ ತಿರಂಗಾ ಹೆಸರಿನಲ್ಲಿ ದೇಶದ ಗೌರವಾನ್ವಿತ ತ್ರಿವರ್ಣ ಧ್ವಜವನ್ನು ಸಹ ಕೇಂದ್ರ ಮತ್ತು ರಾಜ್ಯ ಸರಕಾರ ಮಾರಾಟಕ್ಕಿಟ್ಟಿವೆ. ಕೆಲವು ಉದ್ಯಮಿಗಳಿಗೆ ಅನುಕೂಲ ಮಾಡಿಕೊಡಲು ಖಾದಿ ಉದ್ಯಮವನ್ನು ಮುಚ್ಚುವ ಯತ್ನವನ್ನು ಸ್ವತಃ ಎರಡೂ ಸರಕಾರಗಳು ಮಾಡುತ್ತಿವೆ ಎಂದು ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಟೀಕಿಸಿದರು.
ಪಡಿತರ ಅಂಗಡಿಗಳು, ಗ್ರಾಮ ಪಂಚಾಯಿತಿಗಳ ಮೂಲಕ ಧ್ವಜವನ್ನು ಬಲವಂತವಾಗಿ ಮಾರಾಟ ಮಾಡಲಾಗುತ್ತಿದೆ ಎಂದು ಟೀಕಿಸಿದರು.
ಕಾಶ್ಮೀರ್ ಫೈಲ್ಸ್ ಚಿತ್ರ ವೀಕ್ಷಣೆಗೆ ಸ್ವತಃ ಸರಕಾರವೇ ತೆರಿಗೆ ವಿನಾಯಿತಿ ನೀಡಿತ್ತು. ಆದರೆ ತ್ರಿವರ್ಣ ಧ್ವಜವನ್ನು ಮಾತ್ರ ಹಣಕ್ಕಾಗಿ ಮಾರಾಟ ಮಾಡಲಾಗುತ್ತಿದೆ. ಹಾಗಾದರೆ ಇವರ ದೇಶಪ್ರೇಮದ ಹೆಸರಿನಲ್ಲಿ ತ್ರಿವರ್ಣ ಧ್ವಜ ಎದುರಿಟ್ಟುಕೊಂಡು ಲೂಟಿ ಮಾಡುವುದು ಯಾವ ಸೀಮೆಯ ದೇಶಭಕ್ತಿ? ಎಂದು ಕೇಳಿದರು.