ಶ್ರೀರಂಗಪಟ್ಟಣ : ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಪಟ್ಟಣದಲ್ಲಿ ಸತತವಾಗಿ ರೈತರು ನಡೆಸುತ್ತಿರುವ ಪ್ರತಿಭಟನೆಯು 50 ದಿನಗಳನ್ನೂ ಪೂರೈಸಿದ್ದು, ಸೋಮವಾರವೂ ಸಹ ಸಾಂಪ್ರದಾಯಿಕ ಉಡುಗೆ ತೊಟ್ಟು ಕೈಯಲ್ಲಿ ನೇಣಿನ ಕುಣಿಕೆ, ಒನಕೆ, ಬಾರುಕೋಲು ಹಿಡಿದು ಗಂಟೆ ಬಾರಿಸುವುದರ ಜೊತೆಗೆ ತಲೆಯ ಮೇಲೆ ಚಪ್ಪಡಿ ಕಲ್ಲು ಹೊತ್ತು ತಮ್ಮ ಆಕ್ರೋಶವನ್ನು ಹೊರ ಹಾಕಿದರು.
ಭೂಮಿತಾಯಿ ಹೋರಾಟ ಸಮಿತಿ ವತಿಯಿಂದ ಕೆ.ಎಸ್.ನಂಜುಂಡೇಗೌಡ ಹಾಗೂ ಸಮಿತಿ ಅಧ್ಯಕ್ಷ ಬಲ್ಲೇನಹಳ್ಳಿ ಕೃಷ್ಣೇಗೌಡ ನೇತೃತ್ವದಲ್ಲಿ ನೂರಾರು ರೈತರು ಬಿಳಿ ಷರ್ಟು ಮತ್ತು ಬಿಳಿ ಪಂಚೆ ಧರಿಸಿ ಪಟ್ಟಣದ ಕುವೆಂಪು ವೃತ್ತದಿಂದ ಮುಖ್ಯರಸ್ತೆ ಮಾರ್ಗವಾಗಿ ತಾಲ್ಲೂಕು ಕಚೇರಿ ವರೆಗೂ ಪ್ರತಿಭಟನಾ ಧರಣಿ ನಡೆಸಿ ಸರ್ಕಾರ ಹಾಗೂ ಕಾವೇರಿ ನಿರ್ವಹಣಾ ಪ್ರಾಧಿಕಾರದ ವಿರುದ್ದ ಘೋಷಣೆ ಕೂಗಿದರು.
ಕನ್ನಂಬಾಡಿ ಅಣೆಕಟ್ಟೆಯಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರ, ಇದೀಗ ರೈತರಿಗೆ ನಾಲೆಗಳಿಗೆ ನೀರು ಹರಿಸೋದಿಲ್ಲ ಎನ್ನುತ್ತಿದೆ. ಆದರೆ ತಮಿಳುನಾಡಿಗೆ ಮೂರನೇ ಬೆಳೆಗೆ ನೀರು ಬಿಡುವ ಮೂಲಕ ನಮ್ಮ ರೈತರಿಗೆ ನೇಣಿನ ಭಾಗ್ಯ ನೀಡಲು ಮುಂದಾಗಿದೆ. ಮೈಸೂರು ಮಹಾರಾಜರು ತಮ್ಮಲ್ಲಿದ್ದ ಒಡವೆಗಳನ್ನು ಮಾರಿ ಈ ಭಾಗದ ಜನತೆಗೆ ಅನುಕೂಲವಾಗಲೆಂದು ಕನ್ನಂಬಾಡಿ ಅಣೆ ಕಟ್ಟಿಸಿದ್ದರು. ಈ ಬೇಜವಾಬ್ದಾರಿ ಕಾಂಗ್ರೆಸ್ ಸರ್ಕಾರ ತಮಿಳುನಾಡಿನ ಓಲೈಕೆಗಾಗಿ ರಾಜ್ಯದ ರೈತರನ್ನು ಬಲಿಕೊಡಲು ಮದಾಗಿದೆ ಎಂದು ಆಕ್ರೋಷ ವ್ಯಕ್ತಪಡಿಸಿದರು.
ತಾಲ್ಲೂಕು ಕಚೇರಿ ಎದುರು ಸುಮಾರು ಒಂದು ಗಂಟೆಗೂ ಅಧಿಕ ಸಮಯ ಪ್ರತಿಭಟನೆ ನಡೆಸಿದ ರೈತರು, ಈ ಐವತ್ತು ದಿನಗಳಲ್ಲಿ ನಿರಂತರವಾಗಿ ಮಾಡುತ್ತಾ ಬಂದಿರುವ ಹೋರಾಟಗಳ ತುಣುಕನ್ನು ನೆನಪಿಸಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.