ರೈತರ ಪಾಲಿಗೆ ಸರ್ಕಾರ ಸತ್ತು ಹೋಗಿದೆ

Advertisement

ಹಾವೇರಿ: ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್‌ನವರಿಗೆ ಅಭ್ಯರ್ಥಿಗಳು ಸಿಗುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆಯ ಪಕ್ಷದ ನೂತನ ಜಿಲ್ಲಾಧ್ಯಕ್ಷರಾಗಿ ಅರುಣ್‌ಕುಮಾರ್ ಪೂಜಾರ್ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಆಗಲು ಯಾರೂ ತಯಾರಿಲ್ಲ. ಪ್ರಧಾನಿ ನರೇಂದ್ರ ಮೋದಿ ಹೊಡೆತಕ್ಕೆ ನಾವೆಲ್ಲಾ ಎಲ್ಲಿ ಸಿಲುಕಿ ಸಾಯೋಣ ಅಂತ ಒಬ್ಬ ಮಂತ್ರಿ ನನ್ನ ಬಳಿ ಹೇಳಿದರು. ಹಾವೇರಿಯಲ್ಲಿಯೂ ಒಬ್ಬ ಮಂತ್ರಿಗೆ ಅಭ್ಯರ್ಥಿ ಆಗಿ ಎಂದು ಕಾಂಗ್ರೆಸ್‌ನವರು ಕೇಳಿದ್ದಾರೆ. ಆದರೆ, ಚುನಾವಣೆಗೆ ನಿಲ್ಲಲು ಯಾರೂ ತಯಾರಿಲ್ಲ. ರಾಜ್ಯದಲ್ಲಿ ಮತ್ತೆ ಬಿಜೆಪಿಯ ಗರ ವೈಭವ ಮರುಕಳಿಸುತ್ತಿದೆ. ಯುವಕರಿಗೆ ಉತ್ಸಾಹ ಬಂದಿದೆ ಎಂದರು.
ಹಾವೇರಿ ಜಿಲ್ಲೆಯ ಬಿಜೆಪಿ ಗತ ವೈಭವ ಪುನಃ ನಿರ್ಮಾಣ ಆಗುತ್ತಿದೆ. ಅರುಣ್ ಕುಮಾರ್ ಪೂಜಾರ್ ಜಿಲ್ಲಾಧ್ಯಕ್ಷ ಆಗಿದ್ದಾರೆ. ಬರುವ ದಿನಗಳಲ್ಲಿ ಲೋಕಸಭಾ ಚುನಾವಣೆಗೆ ಪಕ್ಷ ಸಂಘಟಿಸುವ ಜವಾಬ್ದಾರಿ ಇದೆ. ಮತ ಕೇಳುವ ನೈತಿಕ ಹಕ್ಕು ಬಿಜೆಪಿಗೆ ಮಾತ್ರ ಇದೆ ಎಂದು ಹೇಳಿದರು.
ಹಾವೇರಿ ಜಿಲ್ಲೆಯ ಉದಯಕ್ಕೆ ದಿವಂಗತ ಸಿ.ಎಂ. ಉದಾಸಿಯವರು ಕಾರಣ. ಜಿಲ್ಲೆಯ ಅಭಿವೃದ್ಧಿಗೆ ಕಾರಣೀಭೂತರು ಮಾಜಿ ಸಿಎಂ ಯಡಿಯೂರಪ್ಪನವರು ಎಂದು ಹೇಳಿದರು.
2002ರಲ್ಲಿಯೇ ಕೃಷ್ಣ ಮೇಲ್ದಂಡೆ ಯೋಜನೆ ನೀರು ಹರಿಸುವುದಾಗಿ ಪ್ರವಾಸೋದ್ಯಮ ಸಚಿವ ಹೆಚ್.ಕೆ. ಪಾಟೀಲ್ ಹೇಳಿದ್ದರು. ಆದರೆ 2012 ಬಂದರೂ ಅವರ ಕಡೆಯಿಂದ ನೀರು ಹರಿಸಲು ಆಗಲಿಲ್ಲ. ನಾನು ಹಾಗೂ ಯಡಿಯೂರಪ್ಪನವರು ರೈತರ ಜಮೀನಿಗೆ ನೀರು ಹರಿಸಿದೆವು ಎಂದರು.
ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ನಮ್ಮ ಎಲ್ಲಾ ಯೋಜನೆಗಳನ್ನು ಕಾಂಗ್ರೆಸ್‌ನವರು ನಿಲ್ಲಿಸಿದ್ದಾರೆ. ರೈತರ ಪಾಲಿಗೆ ಈ ಸರ್ಕಾರ ಸತ್ತು ಹೋಗಿದೆ
ಸರ್ಕಾರದ ಗ್ಯಾರಂಟಿಗಳು ಯಾರಿಗೂ ಮುಟ್ಟಿಲ್ಲ. ನಾನು ಸಿಎಂ ಸಿದ್ದರಾಮಯ್ಯ ಅವರಿಗೆ ಚಾಲೆಂಜ್ ಮಾಡುತ್ತೇನೆ. 200 ಯುನಿಟ್ ಫ್ರೀ ಕರೆಂಟ್ ಯಾರಿಗೆ ಕೊಟ್ಟಿದಿರಿ ಅವರ ಹೆಸರು ಕೊಡಿ. ಫಲಾನುಭವಿಗಳ ಹೆಸರುಗಳನ್ನು ಬಿಡುಗಡೆ ಮಾಡಿ ಎಂದು ಸವಾಲು ಹಾಕಿದರು.
ಇವರು ಜನತೆಗೆ ಮೋಸ ಮಾಡಲು ಹೊರಟಿದ್ದಾರೆ. ಒಂದು ಕಾಳು ಅಕ್ಕಿ ಕೊಟ್ಟಿಲ್ಲ. ಇವರು ಕೊಟ್ಟಿರುವುದೆಲ್ಲಾ ಮೋದಿ ಅಕ್ಕಿ. ರಾಜ್ಯ ಸರ್ಕಾರ ಮೋದಿ ಸರ್ಕಾರದ ಋಣದಲ್ಲಿದೆ ಎಂದರು.
ಸರ್ಕಾರ ಪತನ
ಇನ್ನು ಲೋಕಸಭಾ ಚುನಾವಣೆಯಲ್ಲಿ 28ಕ್ಕೆ 28 ಕ್ಷೇತ್ರ ಗೆಲ್ಲಿಸಿದರೆ, ಲೋಕಸಭೆ ಚುನಾವಣೆ ಬಳಿಕ ಕೇವಲ ಎರಡು ಮೂರು ತಿಂಗಳಲ್ಲಿ ಈ ದರಿದ್ರ ಕಾಂಗ್ರೆಸ್ ಸರ್ಕಾರ ಬಿದ್ದು ಹೋಗುತ್ತದೆ. ಇದಕ್ಕೆ ನಾನು ಗ್ಯಾರಂಟಿ ಕೊಡುತ್ತೇನೆ ಎಂದರು.