ಬೆಳಗಾವಿ: ಇದೇ ಫೆ.27 ರಂದು ಬೆಳಗಾವಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಗಳು ಕಿಸಾನ್ ಸಮ್ಮಾನ್ ನಿಧಿಯನ್ನು ನೇರವಾಗಿ ರೈತರ ಖಾತೆಗೆ ವರ್ಗಾವಣೆ ಮಾಡಲಿದ್ದಾರೆ ಎಂದು ಕೃಷಿ ಇಲಾಖೆಯ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಹೇಳಿದರು.
ಮಾನ್ಯ ಪ್ರಧಾನಮಂತ್ರಿಗಳ ಕಾರ್ಯಕ್ರಮ ನಡೆಯಲಿರುವ ಬಿ.ಎಸ್.ಯಡಿಯೂರಪ್ಪ ಮಾರ್ಗದಲ್ಲಿರುವ ಮಾಲಿನಿ ಸಿಟಿಯಲ್ಲಿ ವೇದಿಕೆ ನಿರ್ಮಾಣ ಮತ್ತಿತರ ಸಿದ್ಧತೆಗಳನ್ನು ಗುರುವಾರ ಬೆಳಿಗ್ಗೆ ಪರಿಶೀಲಿಸಿ ಅವರು ಮಾತನಾಡಿದರು.
ಇದು ಸಂಪೂರ್ಣ ರೈತರ ಕಾರ್ಯಕ್ರಮವಾಗಿದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಹಾಗೂ ವಿಶೇಷವಾಗಿ ರೈತ ಮಹಿಳೆಯರನ್ನು ಸೇರಿಸಲಾಗುವುದು ಎಂದು ತಿಳಿಸಿದರು.
ಮೊದಲ ಬಾರಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯನ್ನು ಬೆಳಗಾವಿಯ ಕಾರ್ಯಕ್ರಮದಲ್ಲಿ ರೈತರ ಖಾತೆಗೆ ವರ್ಗಾವಣೆ ಮಾಡಲಿದ್ದಾರೆ.
ರೋಡ್ ಶೋ ಮಾರ್ಗ ಇನ್ನೂ ಅಂತಿಮಗೊಂಡಿಲ್ಲ; ಎಸ್.ಪಿ.ಜಿ. ಅಧಿಕಾರಿಗಳ ಜತೆ ಚರ್ಚಿಸಿ ನಿರ್ಧರಿಸಲಾಗುವುದು.
ಪಿಎಂ-ಕಿಸಾನ್ ರೈತರ ಯೋಜನೆಯಾಗಿದೆ. ಕೃಷಿಯಲ್ಲಿ ರೈತ ಮಹಿಖೆಯರ ಪಾತ್ರ ದೊಡ್ಡದು. ಆದ್ದರಿಂದ ರೈತ ಮಹಿಳೆಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಲಾಗುವುದು ಎಂದು ಕರಂದ್ಲಾಜೆ ತಿಳಿಸಿದರು.
ಕಾರ್ಯಕ್ರಮದ ಸಿದ್ಧತೆ ಹಾಗೂ ವೇದಿಕೆ ನಿರ್ಮಾಣದ ಕುರಿತು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ವಿವರಿಸಿದರು.
ನಾಲ್ಕೂ ದಿಕ್ಕಿನಲ್ಲಿ ಊಟ ಹಾಗೂ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ.
ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಸಿಪಿಎಡ್ ಮೈದಾನಕ್ಕೆ ಆಗಮಿಸಲಿದ್ದಾರೆ. ಅಲ್ಲಿಂದ ರೋಡ್ ಶೋ ನಡೆಸಿ ಮಾಲಿನಿ ಸಿಟಿಯ ವೇದಿಕೆಗೆ ಆಗಮಿಸಲಿದ್ದಾರೆ ಎಂದು ವಿವರಿಸಿದರು.
ಪ್ರಾದೇಶಿಕ ಆಯುಕ್ತರಾದ ಎಂ.ಜಿ.ಹಿರೇಮಠ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ಅಭಯ್ ಪಾಟೀಲ, ಅನಿಲ್ ಬೆನಕೆ, ಪೊಲೀಸ್ ಆಯುಕ್ತರಾದ ಡಾ.ಎಂ.ಬಿ.ಬೋರಲಿಂಗಯ್ಯ, ಮಹಾನಗರ ಪಾಲಿಕೆಯ ಆಯುಕ್ತರಾದ ರುದ್ರೇಶ್ ಘಾಳಿ ಮತ್ತಿತರರು ಉಪಸ್ಥಿತರಿದ್ದರು.