ದಾವಣಗೆರೆ: ಎಐಸಿಸಿ ನಾಯಕ ರಾಹುಲ್ ಗಾಂಧಿ ಬೈದಿದ್ದು ಬಿಜೆಪಿಯವರನ್ನ ಹೊರತು ದೇಶವನ್ನಲ್ಲ. ಬಿಜೆಪಿಗರನ್ನ ಬೈದರೆ ದೇಶದ ಮಾನ ಹೇಗೆ ಹೋಗುತ್ತದೆ ಎಂದು ಲಂಡನ್‌ನಲ್ಲಿ ರಾಹುಲ್‌ಗಾಂಧಿ ಭಾರತದ ಬಗ್ಗೆ ನೀಡಿದ ಹೇಳಿಕೆಯನ್ನು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ಧರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.
ಹೊನ್ನಾಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ದೇಶದ ಬಗ್ಗೆ ಅವಹೇಳನ ಮಾಡಿಲ್ಲ. ಇಷ್ಟಕ್ಕೂ ಬಿಜೆಪಿ ದೇಶದ ಅಧಿಕಾರ ಹಿಡಿದಾಗಿನಿಂದ ಇವರ ಆಳ್ವಿಕೆಯಲ್ಲಿ ದೇಶದ ಪ್ರಜಾ ಪ್ರಭುತ್ವಕ್ಕೆ ಧಕ್ಕೆ ಬಂದಿದೆ. ಹಾಗಾಗಿ, ರಾಹುಲ್ ಆ ಬಗ್ಗೆ ಮಾತನಾಡಿದ್ದಾರೆ ಹೊರತು ದಏಶವನ್ನು ಹಿಯಾಳಿಸಿಲ್ಲ. ಬಿಜೆಪಿಗರು ತಮಗೆ ಬೈದಿರುವುದನ್ನು ದೇಶಕ್ಕೆ ಬೈದಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಇವರಿಗೆ ಮಾನ ಮಾರ್ಯಾದೆ ಇದೇಯಾ ಎಂದು ಗುಡುಗಿದರು.
ಭ್ರಷ್ಟಾಚಾರದ ಆರೋಪ ಹೊತ್ತಿರುವ ಶಾಸಕ ಮಾಡಾಳು ವಿರುಪಾಕ್ಷಪ್ಪನನ್ನ ಇಷ್ಟೊತ್ತಿಗಾಗಲೇ ಬಂಧಿಸಬೇಕಿತ್ತು ಜೊತೆಗೆ ಪಕ್ಷದಿಂದ ಉಚ್ಚಾಟಣೆ ಮಾಡಬೇಕಿತ್ತು. ಆದರೆ ಇವರು ಮಾಡಿಲ್ಲ. ಇವರೇ ಕುಮ್ಮಕ್ಕು ಕೊಟ್ಟು ರಕ್ಷಣೆ ಕೊಡುತ್ತಿದ್ದಾರೆ ಎಂದು ಆಪಾದಿಸಿದರು.
ಫರ್ನಾಂಡಿಸ್ ಸಚಿವರಾಗಿದ್ದಾಗ ಮೈಸೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮಂಜೂರು ಮಾಡಿಸಿ, ಅಡಿಗಲ್ಲು ಹಾಕಿದ್ದು ನಾನು. ಆದರೆ, ಈಗ ಬಿಜೆಪಿಯವರು ಕ್ರೆಡಿಟ್ ತೆಗೆದು ಕೊಳ್ಳುತ್ತಿದ್ದಾರೆ. ಈಗ ಹೆದ್ದಾರಿ ಕಾಮಗಾರಿ ಅಪೂರ್ಣವಾಗಿದ್ದರೂ ಕೂಡ ಚುನಾವಣೆ ಕಾರಣಕ್ಕೆ ಉದ್ಘಾಟನೆ ಮಾಡಿದ್ದಾರೆ ಎಂದು ದೂರಿದರು.
ಈಗ ರಾಜ್ಯದಲ್ಲಿ ಕಾಂಗ್ರೆಸ್‌ಪರ ಜನರ ಒಲವಿದೆ. ರಾಜ್ಯಕ್ಕೆ ಮೋದಿ ಎಷ್ಟು ಬಾರಿ ಬಂದರೂ ಏನೂ ಬದಲಾಗಲ್ಲ. ಕಳೆದ ಬಾರಿಯೂ ಮೋದಿ ಬಂದಿದ್ದರೂ ಏನಾಯಿತು ಎಂಬುದು ಗೊತ್ತಿದೆ. ಈಗಲೂ ಅದೇ ರೀತಿ ಆಗಲಿದೆ. ಪ್ರಸ್ತುತ ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಇದೆ. ಹಾಗಾಗಿ ಕಾಂಗ್ರೆಸ್ ಗೆಲ್ಲುವುದರಲ್ಲಿ ಸಂಶಯವಿಲ್ಲ ಎಂದರು.
ಮಾಜಿ ಸಂಸದ ಧ್ರುನಾರಾಯಣ ಪುತ್ರನಿಗೆ ಟಿಕೆಟ್ ಕೇಳಿದ್ದಾರೆ. ಆ ಬಗ್ಗೆ ಇನ್ನೂ ಚರ್ಚೆ ನಡೆಸಿಲ್ಲ. ಕಾಂಗ್ರೆಸ್ ಮೊದಲ ಪಟ್ಟಿ ಇದೇ ೧೭ಕ್ಕೆ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದರು.