ಧರ್ಮಕ್ಕೆ ಚ್ಯುತಿಬಂದಾಗ, ಧರ್ಮಶಾಸ್ತ್ರಗಳ ನಿರ್ಣಯದಲ್ಲಿ ಗೊಂದಲವುಂಟಾದಾಗ, ರಾಷ್ಟ್ರದ ಅಂತ:ಶಕ್ತಿಗೆ ಸವಾಲುಗಳು ಎದುರಾದಾಗ ರಾಜ ಅಥವಾ ಪ್ರಜೆಗಳಿಗಿಂತಲೂ ಮೊದಲು ಧ್ವನಿಯೆತ್ತಿ, ಸಮಾಜಜೀವನವನ್ನು ಸರಿದಾರಿಗೆ ತರುವಲ್ಲಿ ಬಹುವಾಗಿ ಶ್ರಮಿಸಿದ ಸಂನ್ಯಾಸಿಗಳ ಪರಂಪರೆಯೇ ಭಾರತದಲ್ಲಿದೆ. ತಾವು ಭಿಕ್ಷಾನ್ನ ಸ್ವೀಕರಿಸುತ್ತಲೇ ಜಗತ್ತಿನ ಕಟ್ಟಕಡೆಯ ವ್ಯಕ್ತಿಯೂ ಮೃಷ್ಟಾನ್ನಕ್ಕೆ ಪಾತ್ರನಾಗಬೇಕೆಂಬ ಉದಾತ್ತ ಯೋಚನೆ ಹೊಂದಿದ ಧರ್ಮದಂಡಧಾರಿ ಕಾಷಾಯವಸ್ತç ಸಂತರು ಭಾರತಕ್ಕಿತ್ತ ಶಕ್ತಿಯೇ ಅನಂತ, ಅಪರಿಮಿತ. ವಿದೇಶೀ ಆಕ್ರಮಣಗಳ ತರುವಾಯವಂತೂ ಧರ್ಮರಕ್ಷೆಯ ಜೊತೆಜೊತೆಗೆ ರಾಷ್ಟ್ರೀಯತೆಯ ಪ್ರಸಾರಕ್ಕೂ ವೇಗವಿತ್ತ ಸಂನ್ಯಾಸಿಗಳು ತಮ್ಮ ಮಠಗಳನ್ನೇ ಕ್ಷಾತ್ರಕೇಂದ್ರಗಳನ್ನಾಗಿ ಪರಿವರ್ತಿಸಿದ್ದೂ ಇದೆ. ಶ್ರೀ ಶ್ರೀ ವಿದ್ಯಾರಣ್ಯರು, ಸ್ವಾಮಿ ಶಂಕರದೇವ, ಸ್ವಾಮಿ ಜ್ಞಾನತೀರ್ಥ, ಸಮರ್ಥ ರಾಮದಾಸರೇ ಮೊದಲಾದ ನೂರಾರು ಸಂತರು ಸಶಕ್ತ ಭರತಖಂಡದ ನಿರ್ಮಿತಿಗೆ ಸರ್ವಸ್ವವನ್ನೂ ಧಾರೆಯೆರೆದುದು ಇತಿಹಾಸದ ಹೆಗ್ಗುರುತು. ಆ ಧೀಮಂತ ಸಾಧುಸಂತಾನದ ಯಶೋಗಾಥೆಗೆ ಆಧ್ಯಾತ್ಮ ಪ್ರಸಾರ ಹಾಗೂ ಸ್ವಾತಂತ್ರ‍್ಯ ಹೋರಾಟದ ದಿಶೆ ತೋರಿದ ಸ್ವಾಮಿ ವಿರಜಾನಂದ ಮತ್ತು ಸ್ವಾಮಿ ಸಹಜಾನಂದರು ಭಾರತ ಕಂಡ ಶ್ರೇಷ್ಠ ಯೋಗೀಂದ್ರರಲ್ಲಿ ಪ್ರಮುಖರು.
‘ಯುವಕರ ಮನದಲ್ಲಿ ಮೂಡುವ ವೈಯಕ್ತಿಕ ಹಾಗೂ ಸಾಮುದಾಯಿಕ ಹಿತಾಸಕ್ತಿ ರಕ್ಷಣೆಯ ಸಂದೇಹಗಳಿಗೆ, ಜೀವನಪರೀಕ್ಷೆ ಗೆಲ್ಲುವುದು ಹೇಗೆಂಬ ಗೊಂದಲಗಳಿಗೆ ವಿವೇಕವಾಣಿಯೇ ಪರಿಹಾರ. ಲೌಕಿಕ ಸುಖಪ್ರಾಪ್ತಿಯೇ ಬದುಕಿನ ಅಂತಿಮ ಗುರಿಯೆಂಬ ಭ್ರಮೆಯಿಂದ ಹೊರಬಂದು, ಜೀವನದ ಸಾರ್ಥಕತೆಯ ವಿವಿಧ ಮಾರ್ಗಗಳನ್ನು ಹುಡುಕಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸುವ ಪ್ರತಿಯೊಬ್ಬನಿಗೂ ವಿವೇಕಾನಂದರೇ ಗುರು. ಏಕೆಂದರೆ ಅವರು ಕೇವಲ ವ್ಯಕ್ತಿಯಲ್ಲ, ಭೂಮಂಡಲವನ್ನೇ ಗೆಲ್ಲುವ ಸಾಮರ್ಥ್ಯ ತುಂಬುವ ದಿವ್ಯಶಕ್ತಿ’ ಎಂಬ ಶಕ್ತಿಶಾಲಿ ಮಾತುಗಳಿಂದ ಭಾರತೀಯ ಯುವಮನಗಳಲ್ಲಿ ವಿವೇಕವಿಚಾರಗಳ ಕುರಿತು ಅರಿವು ಮೂಡಿಸಿದ ಸ್ವಾಮಿ ವಿರಜಾನಂದರು, ಸ್ವಾಮಿ ವಿವೇಕಾನಂದ ಕೃತಿಶ್ರೇಣಿಯೆಂಬ ಆಧುನಿಕ ವೇದವನ್ನು ಕೊಡುಗೆಯಾಗಿತ್ತ ಮಹಾಮಹಿಮ. ಕಲ್ಕತ್ತೆಯ ವೈದ್ಯ ತ್ರೆಲೋಕ್ಯನಾಥ ಬಸು – ನಿಷಡ್ಕಾಳಿ ದೇವಿ ದಂಪತಿಗಳಿಗೆ ಜನಿಸಿದ ಕಾಳಿಕೃಷ್ಣ ಬಸು, ತಾಯಿಯ ಧಾರ್ಮಿಕ ಶಿಕ್ಷಣದ ಪ್ರಭಾವದಿಂದ ಆಧ್ಯಾತ್ಮಿಕ ಮಾನಸಿಕತೆ ರೂಢಿಸಿ ಬೆಳೆದ ಶಿಶು. ಭಜನೆ, ಕೀರ್ತನೆ, ಧಾರ್ಮಿಕ ಪಠ್ಯದ ಓದಿನಲ್ಲೇ ಸದಾ ಕಾಲ ಕಳೆಯುತ್ತಿದ್ದ ತರುಣನ ಬದುಕು ಆಧ್ಯಾತ್ಮದತ್ತ ವಾಲಿದ್ದು ಕಾಲೇಜು ಶಿಕ್ಷಣದ ವೇಳೆ. ಮಹೇಂದ್ರನಾಥ ಗುಪ್ತರೆಂಬ ಉಪನ್ಯಾಸಕರಿಂದ ಶ್ರೀ ರಾಮಕೃಷ್ಣ ಪರಮಹಂಸರ ಬಗ್ಗೆ ಕೇಳಿ ತಿಳಿದ ಕಾಳಿಕೃಷ್ಣರು ಪ್ರಭಾವಿತರಾಗಿ ಸಂನ್ಯಾಸದತ್ತ ಆಕರ್ಷಿತರಾದರು. ಸಾಧನಾಮಾರ್ಗ ಬಿಟ್ಟು ಮತ್ತಾವುದೂ ತನ್ನ ಬದುಕನ್ನು ಹಸನಾಗಿಸುವುದಿಲ್ಲವೆಂದು ಅರಿತು ಹದಿನೇಳರ ಹರೆಯದಲ್ಲೇ ಬಾರಾನಗರ್ ಮಠ ಸೇರಿ ಸೋದರ ಸಂನ್ಯಾಸಿಗಳ ಜೊತೆ ಹೊಸಜೀವನ ಆರಂಭಿಸಿದರು. ಅದೆಷ್ಟೋ ಜನ್ಮಗಳ ಪುಣ್ಯದ ಫಲ, ಭಗವಂತನ ಕೃಪೆಯಿಂದ ಲಬ್ಧವಾದ ಬಾಳನ್ನು ಭಗವತ್ಸೇವೆಗೆ ಮೀಸಲಿಡುವುದೇ ಬದುಕಿನ ಪರಮೈಶ್ವರ್ಯವೆಂದು ಭಾವಿಸಿದ ಬಸು, ರಾಮಕೃಷ್ಣರ ನೇರ ಶಿಷ್ಯರ ಸಂಪರ್ಕ, ಶಾರದಾಮಾತೆಯ ಪ್ರೇಮಪೂರ್ಣ ಮಾರ್ಗದರ್ಶನದಿಂದ ಆಧ್ಯಾತ್ಮಸಾಧನೆ ಹಾಗೂ ಶಾಸ್ತ್ರಾಧ್ಯಯನಗಳಲ್ಲಿ ತೊಡಗಿಸಿದರು. ವಿವೇಕಾನಂದರ ಪ್ರೀತಿ, ಅಭಿಮಾನ, ಮೆಚ್ಚುಗೆಗೆ ಪಾತ್ರರಾಗಿ ಸಂನ್ಯಾಸದೀಕ್ಷೆ ಸ್ವೀಕರಿಸಿ ಸ್ವಾಮಿ ವಿರಜಾನಂದರಾದ ಬಳಿಕ ಭಾರತಕ್ಕೆ ಲಭಿಸಿದ್ದೇ ಅಭಿನವ ರಾಷ್ಟ್ರವೈದಿಕ.
ಬಂಗಾಲದಲ್ಲಿ ಧರ್ಮಜಾಗೃತಿ, ಜೀವಸೇವೆಗಾಗಿ ಕಾರ್ಯಪ್ರವೃತ್ತರಾದ ಸ್ವಾಮೀಜಿ ನಿರಂತರ ಮೂರು ವರ್ಷ ಧ್ಯಾನ, ಅಧ್ಯಯನ ಹಾಗೂ ಆತ್ಮಸಾಧನೆಯಲ್ಲಿ ತೊಡಗಿಸಿದರು. ಅಮೇರಿಕೆಗೆ ತೆರಳಲು ಲಭಿಸಿದ ಅವಕಾಶವನ್ನು ನಯವಾಗಿಯೇ ತಿರಸ್ಕರಿಸಿ ಭಾರತದಲ್ಲೇ ತಪೋನಿಷ್ಠನಾಗುವ ತಮ್ಮ ನಿರ್ಣಯ ಪ್ರಕಟಿಸಿದರು. ಮಾಯಾವತಿಯ ಅದ್ವೈತ ಆಶ್ರಮದ ಅಧ್ಯಕ್ಷರಾಗಿ ಸ್ಮರಣೀಯ ಸೇವೆ ಸಲ್ಲಿಸಿ ‘ಪ್ರಬುದ್ಧ ಭಾರತ’ದ ಸಂಪಾದಕರಾಗಿ ಜನಸಾಮಾನ್ಯರಿಗೂ ಅರ್ಥವಾಗುವಂತೆ ಅತ್ಯಂತ ಸರಳವಾಗಿ ದಿವ್ಯತ್ರಯರ ಸಂದೇಶಗಳನ್ನು ಪಸರಿಸಿದ ಸ್ವಾಮೀಜಿ ಬದುಕಿನ ಮಹತ್ಸಾಧನೆ ವಿವೇಕಾನಂದ ಕೃತಿಶ್ರೇಣಿಯ ಮುದ್ರಣ. ಸ್ವಾಮಿ ವಿವೇಕಾನಂದರ ದಿವ್ಯಭವ್ಯ ಜೀವನ, ಸಂದೇಶಗಳನ್ನು ಜಗತ್ತಿಗೆ ಪರಿಚಯಿಸಿದ ವೇದಸದೃಶ ಗ್ರಂಥವನ್ನು ಸಮರ್ಪಿಸಿ ಕೃತಾರ್ಥರಾದ ವಿರಜಾನಂದರ ಸಾಧನೆ ಅತ್ಯದ್ಭುತ. ಹಗಲಿರುಳೆನ್ನದೆ ಹೊತ್ತಗೆಯ ಪ್ರಕಾಶಕ್ಕಾಗಿ ಶ್ರಮಿಸಿದ ಸ್ವಾಮೀಜಿ ತದನಂತರದಲ್ಲಿ ತಮ್ಮ ಸಾಧನಾ ಜೀವನವನ್ನು ಜನಸೇವೆಗಾಗಿ ಸಮರ್ಪಿಸಿದರು. ಆಶ್ರಮದ ಸುತ್ತಲಿನ ಹಳ್ಳಿಗಳ ಜನರಲ್ಲಿ ಸ್ವಾವಲಂಬನೆಯ ಕನಸನ್ನು ಬಿತ್ತಿ, ಆರೋಗ್ಯರಕ್ಷೆಯ ಅಗತ್ಯ ಪ್ರತಿಪಾದಿಸಿದ ಪೂಜ್ಯರು ರಾಮಕೃಷ್ಣ ಮಹಾಸಂಘದ ಕಾರ್ಯದರ್ಶಿ, ಉಪಾಧ್ಯಕ್ಷ, ಅಧ್ಯಕ್ಷರಾಗಿ ಕೈಗೊಂಡ ಕಾರ್ಯಗಳು ಮಹತ್ವದ್ದು. ರಾಮಕೃಷ್ಣ ಸೇವಾಧಾಮ, ಬೇಲೂರು ವಿದ್ಯಾಮಂದಿರ, ಶಾರದಾ ಪೀಠ ವಿದ್ಯಾಸಂಸ್ಥೆ ಸ್ಥಾಪಿಸಿ ರಾಮಕೃಷ್ಣ ಮಿಶನ್ ಮೂಲಕ ಶೈಕ್ಷಣಿಕ ಚಟುವಟಿಕೆಗಳಿಗೆ ಚಾಲನೆಯಿತ್ತರು. ಸ್ವಾಮಿ ವಿವೇಕಾನಂದ ವಿಶ್ವವಿದ್ಯಾಲಯ ಸ್ಥಾಪನೆಯ ರೂಪುರೇಷೆಯನ್ನೂ ಹಾಕಿದ್ದ ಸ್ವಾಮೀಜಿ ಸದಾ ಕಾಣುತ್ತಿದ್ದುದು ದೇಶಹಿತದ ಕನಸುಗಳನ್ನೇ. ರಾಮಕೃಷ್ಣ ಜನ್ಮಶತಮಾನೋತ್ಸವ ಸಂದರ್ಭದಲ್ಲಿ ನಡೆದ ಜಾಗತಿಕ ಧರ್ಮಸಂಸತ್ ವಿರಜಾನಂದರ ಸಂಘಟನಾಶಕ್ತಿ ಹಾಗೂ ಅರ್ಪಣಾ ಮನೋಭಾವಕ್ಕೆ ಸಾಕ್ಷಿಯಾಯಿತು. ವಿದ್ಯಾರ್ಥಿ – ತರುಣಕೇಂದ್ರಿತ ಚಟುವಟಿಕೆಗಳ ಮೂಲಕ ಮಠವನ್ನು ಜ್ಞಾನಪ್ರಸಾರದ ಇನ್ನೊಂದು ಮಗ್ಗುಲಿಗೆ ಹೊರಳಿಸಿ ಸ್ವಾಮಿ ವಿರಜಾನಂದರು, ಭಾರತತಪಸ್ವಿಯೆಂದರೆ ಅತಿಶಯೋಕ್ತಿಯಲ್ಲ.
‘ಸಾವಿರಾರು ವರ್ಷಗಳ ಕಾಲ, ಕೋಟ್ಯಂತರ ಜನರ ಹಸಿವಿಂಗಿಸಿದ ಭಾರತೀಯ ರೈತರು ನಿಮ್ಮ ಮನೆಯ ಕೂಲಿಯಾಳುಗಳಲ್ಲ. ದೇಶದ ಸಮಗ್ರ ಆರ್ಥಿಕ ವಿಕಾಸಕ್ಕಾಗಿ ದುಡಿಯುತ್ತಿರುವ ಕೈಗಳನ್ನು ಕಟ್ಟಿಹಾಕುವ ನಿಮ್ಮ ವ್ಯರ್ಥಪ್ರಯತ್ನಕ್ಕೆ ನಮ್ಮ ಧಿಕ್ಕಾರ. ನಮ್ಮ ಜಮೀನು, ನಮ್ಮ ಬೆಳೆ, ನಮ್ಮ ದುಡಿಮೆಯ ವಿಷಯದಲ್ಲಿ ಮೂಗು ತೂರಿಸುವ ಮುನ್ನ ಯೋಚಿಸಿ ಹೆಜ್ಜೆಯಿಡಿ. ಸರಕು ನಿಮ್ಮದು, ಲಾಭ ನಮ್ಮದೆಂಬ ಆಟವನ್ನು ಕೊನೆಗೊಳಿಸಿ. ಅನ್ನದಾತರು ಮೈಕೊಡವಿ ಎದ್ದುನಿಂತರೆ ಲಂಡನ್ ಗದ್ದುಗೆಯೂ ನಡುಗಬಹುದು’ ಎಂಬ ಕ್ರಾಂತಿಕಾರಿ ನೇರ ಮಾತುಗಳಿಂದ ಬ್ರಿಟಿಷ್ ಸರಕಾರವನ್ನು ಎಚ್ಚರಿಸಿ, ಕೃಷಿ ಪ್ರಣಾಳಿಕೆಯನ್ನು ರಚಿಸಿದ ಸ್ವಾಮಿ ಸಹಜಾನಂದ ಸರಸ್ವತಿ, ಅನ್ನದಾತರ ಆತ್ಮಬಂಧು, ರೈತರ ಭಗವಂತನೆಂದೇ ಲೋಕಪ್ರಸಿದ್ಧರು. ಉತ್ತರಪ್ರದೇಶದ ಸಂಪ್ರದಾಯಸ್ಥ, ವೈದಿಕ ಹಿನ್ನೆಲೆಯ ಕುಟುಂಬದಲ್ಲಿ ನವರಂಗ ರಾಯ್ ಜನ್ಮನಾಮದಿಂದ ಜನಿಸಿದ ಸ್ವಾಮಿ ಸಹಜಾನಂದರು, ಆಧ್ಯಾತ್ಮಿಕ ತಳಹದಿಯ ಮೇಲೆ ರಾಷ್ಟ್ರೀಯತೆಯ ಭವ್ಯಸೌಧ ಕಟ್ಟಿದ ನಿಪುಣಶಿಲ್ಪಿ. ಶಿಕ್ಷಾಭ್ಯಾಸದ ನಡುವೆ ಸ್ವಾತಂತ್ರ‍್ಯ ಹೋರಾಟದಲ್ಲೂ ಭಾಗವಹಿಸಿ ಸ್ವದೇಶೀ ಆಂದೋಲನದಲ್ಲಿ ಸಕ್ರಿಯರಾದರು. ಭಾರತೀಯರ ಬಳಿ ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಿ ನೂರಾರು ಪಟ್ಟು ಹೆಚ್ಚಿನ ಬೆಲೆಗೆ ಮತ್ತೆ ಭಾರತದ ಮಾರುಕಟ್ಟೆಯಲ್ಲೇ ಅದನ್ನು ವ್ಯಾಪಾರ ಮಾಡುವ ಆಂಗ್ಲರ ಕುತಂತ್ರವನ್ನು ಅರಿತು ಅದರ ಪ್ರತಿಯಾಗಿ ಅಳಿಲಸೇವೆ ಸಲ್ಲಿಸುವ ನಿರ್ಣಯ ಕೈಗೊಂಡರು. ಯುವ ಕ್ರಾಂತಿಕಾರಿಗಳ ಸಹವಾಸ, ರಾಷ್ಟçಸ್ತರದ ನಾಯಕರ ಬೆಂಬಲದಿಂದ ಸಾರ್ವಜನಿಕ ಜೀವನ ರೂಪಿಸಿದ ಸಹಜಾನಂದರು ಬಿಹಾರವನ್ನು ತಮ್ಮ ಕಾರ್ಯಚಟುವಟಿಕೆಗಳ ಕೇಂದ್ರವಾಗಿಸಿದರು. ಆಧ್ಯಾತ್ಮದತ್ತ ಸೆಳೆಯಲ್ಪಟ್ಟರೂ ತಮ್ಮ ಸಾಮಾಜಿಕ ಕಾರ್ಯಗಳಿಂದ ದೂರ ಉಳಿಯದೆ ರೈತಕೇಂದ್ರಿತ ಹೋರಾಟದ ನಾಯಕತ್ವ ವಹಿಸಿ, ಕೃಷಿ ಆಧಾರಿತ ಪ್ರಾಚೀನ ಭಾರತದ ಪುನರುಜ್ಜೀವನದತ್ತ ಲಕ್ಷ್ಯ ವಹಿಸಿದರು.
ಬಿಹಾರ ಪ್ರಾಂತೀಯ ಕಿಸಾನ್ ಸಭಾದ ಮೂಲಕ ಜಮೀನ್ದಾರಿ ಪದ್ಧತಿ ಹಾಗೂ ಬೆಳೆಯ ಮಾರಾಟ ವಹಿವಾಟಿನಲ್ಲಿ ಬ್ರಿಟಿಷರ ಮಧ್ಯಪ್ರವೇಶವನ್ನು ತೀವ್ರವಾಗಿ ವಿರೋಧಿಸಿದ ಸಹಜಾನಂದರು, ರೈತಜಾಗೃತಿ ಆಂದೋಲನಗಳಲ್ಲಿ ಭಾಗವಹಿಸಿದರು. ಕಾಂಗ್ರೆಸ್ ರಾಷ್ಟ್ರೀಯ ಅಧಿವೇಶನದಲ್ಲಿ ಅಖಿಲ ಭಾರತ ಕಿಸಾನ್ ಸಭಾ ಸ್ಥಾಪನೆಗೆ ಅನುಮೋದನೆ ದೊರೆತು ಅದರ ಅಧ್ಯಕ್ಷರಾಗಿ ನಿಯುಕ್ತರಾದ ಸ್ವಾಮೀಜಿ ಕೃಷಿಕರ ಮೃದುಧ್ವನಿಗೆ ತಮ್ಮ ದನಿಗೂಡಿಸಿದರು. ಬ್ರಿಟಿಷ್ ಸರಕಾರದ ಕುನೀತಿ, ಕೃಷಿತೆರಿಗೆಯ ಅಮಾನವೀಯ ಧೋರಣೆಗಳನ್ನು ಖಂಡಿಸಿದ ಸ್ವಾಮೀಜಿ ‘ಸ್ವಾವಲಂಬಿ ರೈತ ಚಳವಳಿ’ ಆರಂಭಿಸಿ ತಮಗೆ ಬೇಕಾದ ವಸ್ತುಗಳನ್ನು ತಾವೇ ಬೆಳೆದು ಆರ್ಥಿಕ ಸ್ವಾವಲಂಬನೆಯ ಮಾರ್ಗದರ್ಶಿ ಸೂತ್ರಗಳನ್ನು ವಿವರಿಸಿದರು. ಬ್ರಿಟಿಷರಿಗೆ ಪೈಸೆಯ ಲಾಭಾಂಶವನ್ನೂ ನೀಡದಂತೆ ರೈತರನ್ನು ಪ್ರೋತ್ಸಾಹಿಸಿ ಕೃಷಿ ಪ್ರಣಾಳಿಕೆಯನ್ನೂ ರಚಿಸಿದರು. ಶ್ರೇಷ್ಠ ತತ್ವಜ್ಞಾನಿ, ಆಧ್ಯಾತ್ಮ ಮಾರ್ಗದರ್ಶಕರಾಗಿ, ಸಮಾಜ ಸುಧಾರಕರಾಗಿ ನಾಡಿನಾದ್ಯಂತ ಮನೆಮಾತಾದ ಸ್ವಾಮೀಜಿ, ಚಲೇ ಜಾವ್ ಹೋರಾಟದಲ್ಲೂ ಸಕ್ರಿಯರಾಗಿ ಜೈಲು ಸೇರಿದರು. ‘ಅನ್ನದಾತರ ನಾಯಕ, ಯುವಮುಂದಾಳುಗಳ ಪ್ರೇರಕ, ದೇಶಪ್ರೇಮಿಗಳ ಸ್ನೇಹಿತ’ ಎಂದು ನೇತಾಜಿ ಸುಭಾಷಚಂದ್ರ ಬೋಸರ ಅಭಿಮಾನಕ್ಕೆ ಪಾತ್ರರಾದ ಸಹಜಾನಂದರು ಅತ್ಯುತ್ತಮ ಲೇಖಕರೂ ಹೌದು. ಭಾರತೀಯ ಇತಿಹಾಸ, ಬ್ರಾಹ್ಮಣ್ಯರಕ್ಷಣೆ, ರೈತ ಚಳವಳಿ, ಸ್ವಾಭಿಮಾನಿ ರಾಷ್ಟçನಿರ್ಮಾಣವೇ ಮೊದಲಾದ ಹತ್ತಾರು ವಿಷಯಗಳ ಬಗ್ಗೆ ಪುಸ್ತಕ ರಚಿಸಿದ ಸ್ವಾಮೀಜಿ ತಮ್ಮ ಆಶ್ರಮವನ್ನು ನಾಡಹಿತದ ಕೇಂದ್ರವಾಗಿ ಪರಿವರ್ತಿಸಿದ ಅತ್ಯಪರೂಪದ ಸಂತ. ಸ್ವಾತಂತ್ರ‍್ಯಾನಂತರ ಭಾರತದ ಕೃಷಿನೀತಿಯ ಬಲವರ್ಧನೆಗೆ ಸರಕಾರವನ್ನು ಆಗ್ರಹಿಸಿದ ರಾಷ್ಟ್ರೀಯವಾದಿ ಸಂತನ ರೈತಸ್ವಾತಂತ್ರ‍್ಯದ ಕನಸು ನನಸಾಗಿ ಕೃಷಿಕ್ಷೇತ್ರದಲ್ಲಿ ಭಾರತ ಸಂಪೂರ್ಣ ಸ್ವಾವಲಂಬಿಯಾಗುವುದೇ ಇಂದಿನ ಆವಶ್ಯಕತೆ. ಉಭಯ ಯತಿವರೇಣ್ಯರು ಬ್ರಹ್ಮಲೀನರಾದ ದಿನದಂದು ಅವರ ಸಂಸ್ಮರಣೆಯೊಂದಿಗೆ ಧರ್ಮೋತ್ಥಾನ ಮತ್ತು ರಾಷ್ಟ್ರೋನ್ನಯನದ ದೀಕ್ಷೆಯನ್ನು ಪಡೆಯುವುದೇ ನಾವು ಅವರಿಗರ್ಪಿಸುವ ಶ್ರದ್ಧಾಕುಸುಮ. ದೇಶಸೇವೆಯನ್ನೂ ಸಂನ್ಯಾಸಜೀವನದ ಭಾಗವನ್ನಾಗಿಸಿ ನಾಡಿನ ಸಮುನ್ನತಿಯೂ ಆತ್ಮೋನ್ನತಿಯ ಭಾಗವೆಂದು ಸಾರಿದ ಸಾಧುಕುಲತಿಲಕರ ಸಮರ್ಪಿತ ಜೀವನ ನಮ್ಮ ಬಾಳಿಗೆ ಬೆಳಕಾಗಲಿ.