ರಾಷ್ಟ್ರಪತಿಗೆ ಸಿದ್ಧಾರೂಢರ ಬೆಳ್ಳಿ ಮೂರ್ತಿ ಅರ್ಪಣೆ: ಮೇಯರ್ ಅಂಚಟಗೇರಿ

ಸಿದ್ಧಾರೂಢ
Advertisement

ಹುಬ್ಬಳ್ಳಿ: ದೇಶದ ಪ್ರಥಮ ಪ್ರಜೆ, ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೆ. 26ರಂದು ಹುಬ್ಬಳ್ಳಿ ನಗರಕ್ಕೆ ಆಗಮಿಸಲಿದ್ದು, ಮಹಾನಗರ ಪಾಲಿಕೆಯಿಂದ ಪೌರ ಸನ್ಮಾನ ಮಾಡಿ ಸವಿನೆನಪಿಗಾಗಿ 1.5 ಕೆ.ಜಿ. ತೂಕದ ಶ್ರೀ ಸಿದ್ಧಾರೂಢರ ಸ್ವಾಮೀಜಿ ಬೆಳ್ಳಿಮೂರ್ತಿಯನ್ನು ಅರ್ಪಿಸಲಾಗುತ್ತಿದೆ ಎಂದು ಹು-ಧಾ ಮಹಾನಗರ ಪಾಲಿಕೆಯ ಮಹಾಪೌರ ಈರೇಶ ಅಂಚಟಗೇರಿ ಹೇಳಿದರು.
ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿಯ ದೇಶಪಾಂಡೆ ನಗರದ ಕರ್ನಾಟಕ ಜಿಮ್‌ಖಾನ ಮೈದಾನದಲ್ಲಿ ಸಮಾರಂಭ ಏರ್ಪಡಿಸಲಾಗಿದ್ದು, ಸಮಸ್ತ 12 ಲಕ್ಷ ಜನರ ಪರವಾಗಿ ಮಹಾನಗರದ ಪಾಲಿಕೆ ವತಿಯಿಂದ ಅವರಿಗೆ ಪೌರ ಸನ್ಮಾನ ಹಮ್ಮಿಕೊಳ್ಳಲಾಗಿದೆ ಎಂದರು.
ಹುಬ್ಬಳ್ಳಿ ನಗರಕ್ಕೆ ಆಗಮಿಸುತ್ತಿರುವ ಮೂರನೇ ರಾಷ್ಟ್ರಪತಿಯಾಗಿದ್ದಾರೆ. ಈ ಹಿಂದೆ ರಾಷ್ಟ್ರಪತಿಗಳಾದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಹಾಗೂ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ನಗರಕ್ಕೆ ಭೇಟಿ ನೀಡಿದ್ದರು ಎಂದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ ಎಂದರು.