ಶ್ರೀರಾಮನದುರು ಯುದ್ಧಕ್ಕೆ ಪುಷ್ಪಕ ವಿಮಾನದಲ್ಲಿ ಆಗಮಿಸಿದನು. ಸರ್ವಶಕ್ತನಾದ ಪುರುಷೋತ್ತಮಮನಾದ ಶ್ರೀರಾಮನ ಮೇಲೆ ಆಯುಧಗಳ ಮಳೆಯನ್ನೇ ಸುರಿಸಿದನು. ಅವನನ್ನು ಶ್ರೀರಾಮನು ಎದುರಿಸಿದನು.
ಶ್ರೀರಾಮನು ನೆಲದ ಮೇಲೆ ಯುದ್ಧಮಾಡುತ್ತಿದ್ದ ಸ್ಥಿತಿಯನ್ನು ಕಂಡು ದೇವಲೋಕದಿಂದ ದೇವೇಂದ್ರನು ತನ್ನ ಸಾರಥಿಯಾದ ಮಾತುಲಿಯ ಜೊತೆ ಆಯುಧದಿಂದ ಕೂಡಿದ ರಥವನ್ನು ಕಳುಹಿಸಿಕೊಟ್ಟನು. ಅವನ ಪುರಸ್ಕಾರವನ್ನು ಸ್ವೀಕರಿಸಿದ ಶ್ರೀರಾಮನು ರಥದಲ್ಲಿ ನಿಂತು ಯುದ್ಧಮಾಡಲು ಪ್ರಾರಂಭಮಾಡಿದನು.
ಸೂರ್ಯನು ಅಂಧಕಾರವನ್ನು ಕಬಳಿಸುವಂತೆ ರಾವಣನ ಜೊತೆ ಯುದ್ಧ ಮಾಡಿದನು. ತನ್ನ ಬಾಣದಿಂದ ಹತ್ತು ತಲೆಗಳನ್ನು ಏಕ ಕಾಲಕ್ಕೆ ಕತ್ತರಿಸಿದನು. ಕಡಿದ ತಲೆಗಳು ಬ್ರಹ್ಮನ ವರದಿಂದ ಪುನಃ ಮೂಡಿ ಬಂದವು. ಆಗ ಶ್ರೀರಾಮಚಂದ್ರನು ವಜ್ರಾಯುಧ ಸದೃಶವಾದ ಬಾಣದಿಂದ ರಾವಣನ ಎದೆಗೆ ಹೊಡೆದನು. ಎದೆಯೊಡೆದು ರಕ್ತವನ್ನು ಕಾರುತ್ತಾ ವಿಮಾನದಿಂದ ರಾವಣನು ಕೆಳಗೆ ಬಿದ್ದನು.
ರಾವಣನು ಶ್ರೀರಾಮಚಂದ್ರನಿಂದ ಹತನಾದಾಗ ತನ್ನ ಭಕ್ತನನ್ನೇಕೆ ಕೊಂದಿರುವಿ ಎಂದು ರುದ್ರನು ರಾಮನ ಮೇಲೆ ಯುದ್ಧಕ್ಕೆ ಬಂದನು. ಶ್ರೀರಾಮನು ಯುದ್ಧಕ್ಕೆ ರುದ್ರನನ್ನು ಆಹ್ವಾನ ಮಾಡಿ ಬಿಲ್ಲನ್ನು ಹಿಡಿದು ಬಾಣವನ್ನು ಹೂಡಿದ ಮಾತ್ರದಿಂದಲೇ ಭೂಮಿ ನಡುಗಿತು.
ಶಿವನು ಕಂಪನದಿಂದ ಕೆಳಗೆ ಬಿದ್ದು ಹೋದನು. ಅಸುರಾವೇಶದಿಂದ ಮುಕ್ತನಾದನು. ಕ್ಷಮೆ ಕೇಳಿದರು. ಪಾದಗಳಲ್ಲಿ ಬಿದ್ದು ನಮಿಸಿದನು. ಶ್ರೀರಾಮನು ಅವನನ್ನು ರಕ್ಷಿಸಿದನು. ಹೀಗೆ ಅವತಾರದ ಮುಖ್ಯ ಕಾರ್ಯವೆನಿಸಿದ ರಾವಣನ ಹನನವನ್ನು ನೋಡಿದ ಎಲ್ಲ ದೇವತೆಗಳು ಶ್ರೀರಾಮಚಂದ್ರನನ್ನು ಸ್ತೋತ್ರ ಮಾಡಿದರು.
ಜಗತ್ತಿಗೆ ಪಿತಾಮಹನಾದ ಬ್ರಹ್ಮನಿಗೂ ಪಿತೃ ಎನಿಸಿದ ಗುಣಾಭಿರಾಮನಾದ ಶ್ರೀರಾಮನನ್ನು ಕೈಮುಗಿದು ಸ್ತುತಿಸಿದರು. ಜಗಜ್ಜನಕನೇ ಯಾರಿಂದಲೂ ನಿನಗೆ ಸೋಲಿಲ್ಲ. ಎಲ್ಲೆಡೆಯೂ ನಿನೇ ಜಯಿಸುವಿ. ನಿನಗೆ ಜಯವಾಗಲಿ, ನಿನಗೆ ಜಯವಾಗಲಿಗಲಿ. ಆಶ್ರತರಾದ ನಾವೆಲ್ಲರೂ ನಿನ್ನನ್ನೇ ನಮಿಸುತ್ತೇವೆ.