ರಾಯಲ್-ಕ್ಯಾಪಿಟಲ್ ಫೈಟ್

RCB
Advertisement

ಬೆಂಗಳೂರು: ಆರಂಭಿಕ ಪಂದ್ಯದಲ್ಲಿ ಭರ್ಜರಿ ಗೆಲುವಿನೊಂದಿಗೆ ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಶುಭಾರಂಭಗೈದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ನಂತರ ಆಡಿದ ಎರಡೂ ಲೀಗ್ ಪಂದ್ಯಗಳಲ್ಲಿ ಸೋಲಿನ ಕಹಿ ಅನುಭವಿಸಿದ್ದರಿಂದ ಆರ್‌ಸಿಬಿ ಅಭಿಮಾನಿಗಳಿಗೆ ನಿರಾಸೆಯಾಗಿದೆ.
ಫಾಫ್ ಡು ಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಶನಿವಾರ ನಗರದ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ತನ್ನ ನಾಲ್ಕನೇ ಲೀಗ್ ಪಂದ್ಯ ಆಡಲು ಸಜ್ಜಾಗಿದೆ.
ತವರು ನೆಲದಲ್ಲಿ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಆಡಿದ ತನ್ನ ಮೊದಲ ಲೀಗ್ ಪಂದ್ಯದಲ್ಲಿ ಎಂಟು ವಿಕೆಟ್ ಭರ್ಜರಿ ಗೆಲುವು ಸಾಧಿಸಿ ಆರ್‌ಸಿಬಿ ಶುಭಾರಂಭಗೈದಿತು. ಆದರೆ ಕೊಲ್ಕತಾ ನೈಟ್ ರೈಡರ್ಸ್ ತಂಡದ ವಿರುದ್ಧ ಆಡಿದ ತನ್ನ ಎರಡನೇ ಲೀಗ್ ಪಂದ್ಯದಲ್ಲಿ ಬೌಲಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ಕಳಪೆ ಪ್ರದರ್ಶನ ತೋರಿದ ಪ್ಲೆಸಿಸ್ ಬಳಗ ೮೧ ರನ್ ಹೀನಾಯ ಸೋಲು ಅನುಭವಿಸಿತು.
ಕೈಕೊಟ್ಟ ಅದೃಷ್ಟ
ಆದರೆ ಲಖನೌ ಸೂಪರ್ ಜೈಂಟ್ಸ್ ತಂಡದ ವಿರುದ್ಧ ಆಡಿದ ತನ್ನ ಮೂರನೇ ಲೀಗ್ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದರೂ ಅದೃಷ್ಟ ಕೈಕೊಟ್ಟಿದ್ದರಿಂದ ಆರ್‌ಸಿಬಿ ಸೋಲು ಕಂಡಿತು.
ನಾಯಕ ಫಾಫ್ ಡು ಪ್ಲೆಸಿಸ್, ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಗ್ಲೇನ್ ಮ್ಯಾಕ್ಸವೆಲ್‌ರ ಮಿಂಚಿನ ಬ್ಯಾಟಿಂಗ್ ನೆರವಿನಿಂದ ಇನ್ನೂರರ ಗಡಿ ದಾಟಿ ಎದುರಾಳಿ ತಂಡಕ್ಕೆ ಕಠಿಣ ಗೆಲುವಿನ ಗುರಿ ನೀಡುವಲ್ಲಿ ಯಶಸ್ಸಿಯಾಯಿತು.
ಆರಂಭದಲ್ಲಿ ಆರ್‌ಸಿಬಿ ಬೌಲರ್‌ಗಳು ಲಖನೌ ಬ್ಯಾಟ್ಸಮನ್ನರನ್ನು ಕಟ್ಟಿಹಾಕಿ ತಂಡವನ್ನು ಜಯದತ್ತ ಕೊಂಡೈದಿದ್ದರು. ಆದರೆ ೧೩ ನೇ ಓವರ್ ಎಸೆದ ಕರಣ್ ಶರ್ಮಾ ೨೦, ೧೪ ನೇ ಓವರ್ ಎಸೆದ ಹರ್ಷಲ್ ಪಟೇಲ್ ೧೮ ರನ್ ಹಾಗೂ ೧೫ ನೇ ಓವರ್ ಎಸೆದ ವೇಯ್ನ್ ಪಾರ್ನೆಲ್ ೧೭ ರನ್ ನೀಡಿ ಪಂದ್ಯ ಲಖನೌ ಕಡೆಗೆ ವಾಲುವಂತೆ ಮಾಡಿದರು.
ಕೊನೆಯ ಎಸೆತದಲ್ಲಿ ರನೌಟ್ ಮಾಡುವ ಅವಕಾಶವನ್ನು ಆರ್‌ಸಿಬಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಕೈಚಲ್ಲಿದ್ದರಿಂದ ಲಖನೌ ತಂಡ ಒಂದು ವಿಕೆಟ್ ರೋಚಕ ಜಯ ದಾಖಲಿಸಿತು.
ಆರ್‌ಸಿಬಿ ತಂಡದ ಪ್ರಮುಖ ಬ್ಯಾಟ್ಸಮನ್ನರಾದ ಫಾಫ್ ಡು ಪ್ಲೆಸಿಸ್, ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಗ್ಲೇನ್ ಮ್ಯಾಕ್ಸವೆಲ್ ಉತ್ತಮ ಫಾರ್ಮ್ನಲ್ಲಿದ್ದು, ಆಡಿದ ಮೂರು ಪಂದ್ಯಗಳ ಪೈಕಿ ಎರಡು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿ ತಂಡಕ್ಕೆ ನೆರವಾಗುತ್ತಿದ್ದಾರೆ.
ಮೊಹಮ್ಮದ್ ಸಿರಾಜ್, ಶಹಬಾಜ್ ಅಹ್ಮದ್, ಕರಣ್ ಶರ್ಮಾ, ಹರ್ಷಲ್ ಪಟೇಲ್, ವೇಯ್ನ್ ಪಾರ್ನೆಲ್ ಹಾಗೂ ಡೇವಿಡ್ ವಿಲ್ಲಿ ಅವರನ್ನೊಳಗೊಂಡ ಆರ್‌ಸಿಬಿ ಬೌಲಿಂಗ್ ಕೂಡ ಸಾಕಷ್ಟು ಬಲಿಷ್ಠವಾಗಿದೆ.
ಆರ್‌ಸಿಬಿ ತಂಡ ಈ ವರೆಗೆ ಮೂರು ಪಂದ್ಯಗಳನ್ನು ಆಡಿದ್ದು, ಒಂದು ಪಂದ್ಯದಲ್ಲಿ ಜಯ ಹಾಗು ಎರಡು ಪಂದ್ಯಗಳಲ್ಲಿ ಸೋಲಿನ ಕಹಿ ಅನುಭವಿಸಿ ಎರಡು ಅಂಕಗಳೊಂದಿಗೆ ಸಧ್ಯ ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.
ಜಯದ ನಿರೀಕ್ಷೆಯಲ್ಲಿ ಡೆಲ್ಲಿ
ಇನ್ನೊಂದೆಡೆ ಡೇವಿಡ್ ವಾರ್ನರ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ, ತನ್ನ ಐದನೇ ಲೀಗ್ ಪಂದ್ಯ ಆಡಲು ಸಜ್ಜಾಗಿದ್ದು, ಆಡಿದ ನಾಲ್ಕೂ ಪಂದ್ಯಗಳಲ್ಲಿ ಸೋಲಿನ ಕಹಿ ಅನುಭವಿಸಿ ಸದ್ಯ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ನಾಯಕ ಡೇವಿಡ್ ವಾರ್ನರ್ ಅಲ್ಲದೇ ಮನೀಶ್ ಪಾಂಡೆ, ರಿಲೀ ರೊಸೊವ್, ರೋವ್‌ಮನ್ ಪೊವೆಲ್, ಅಕ್ಷರ್ ಪಟೇಲ್, ಅನ್ರಿಚ್ ನಾರ್ಟ್ಜೆ, ಖಲೀಲ್ ಅಹ್ಮದ್, ಕುಲದೀಪ್ ಯಾದವ್, ಮುಖೇಶ್ ಕುಮಾರ್ ಅರನ್ನೊಳಗೊಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗಗಳೆರಡರಲ್ಲೂ ಬಲಿಷ್ಠವಾಗಿದ್ದರೂ, ನಿರೀಕ್ಷಿತ ಯಶ ಕಾಣದೇ ನಿರಾಸೆ ಅನುಭವಿಸುತ್ತಿದೆ.

ಪಂದ್ಯದ ಆರಂಭ: ಮಧ್ಯಾಹ್ನ 3:30 ರಿಂದ