ರಾಮದೇವರ ಅವತಾರ ಕಾಲ

ಗುರುಬೋಧೆ
Advertisement

ಚೈತ್ರಮಾಸದ ಶುಕ್ಲಪಕ್ಷದ ನವಮಿಯ ದಿವಸ ಮಧ್ಯಾಹ್ನ ಕಾಲದಲ್ಲಿ ಅಷ್ಟಮಿಯ ಸಂಪರ್ಕವಿಲ್ಲದ ತಿಥಿಯಲ್ಲಿ ಪುನರ್ವಸು ನಕ್ಷತ್ರವಿದ್ದಾಗ ಶ್ರೀರಾಮಚಂದ್ರನು ಅವತಾರ ಮಾಡಿದನು.
ಶ್ರೀರಾಮನು ಅವತಾರ ಮಾಡಿದಾಗ ಚಂದ್ರ ಹಾಗೂ ಬೃಹಸ್ಪತಿ ಗ್ರಹಗಳು ಯತಿಯಲ್ಲಿದ್ದರು. ಪಂಚಗ್ರಹಗಳು ಉಚ್ಚದಲ್ಲಿದ್ದರು. ಪೂರ್ವದಲ್ಲಿ ಉದಯವಾಗುತ್ತಿದ್ದ ಲಗ್ನವು ಕರ್ಕಾಟಕದಲ್ಲಿತ್ತು. ಸೂರ್ಯನು ಮೇಷ ರಾಶಿಯಲ್ಲಿ ಉಚ್ಚನಾಗಿದ್ದನು. ಇಂಥ ಸುಮುಹೂರ್ತದಲ್ಲಿ ಶ್ರೀರಾಮಚಂದ್ರನು ಕೌಸಲ್ಯೆಯ ಗರ್ಭದಿಂದ ಅವತಾರ ಮಾಡಿದನು.
24ನೇ ತ್ರೇತಾಯುಗದಲ್ಲಿ ಶ್ರೀರಾಮನ ಅವತಾರವಾಯಿತೆಂದು ಹಲವರು ಹೇಳುತ್ತಾರೆ. 28ನೇ ತ್ರೇತಾಯುಗದಲ್ಲಿಯೇ ರಾಮದೇವರು ಅವತಾರವನ್ನು ಮಾಡಿದ್ದಾರೆಂದು ಕೆಲವರು ಹೇಳುತ್ತಾರೆ.
ರಾಮದೇವರ ಪ್ರತಿಮೆಯು ಮನೆಯಲ್ಲಿದ್ದರೆ ಅದರ ಮುಂದೆ ಕಲಶವನ್ನಿಟ್ಟು ಪೂಜಿಸಬೇಕು. ಶ್ರೀರಾಮದೇವರ ಪ್ರತಿಮೆಯು ಇಲ್ಲದಿದ್ದರೆ ಕೇವಲ ಕಲಶದಲ್ಲಿ ಶ್ರೀರಾಮಚಂದ್ರ ದೇವರನ್ನು ಆವಾಹನೆ ಮಾಡಿ ಪೂಜಿಸಬೇಕೆಂದು ಕೆಲವರು ಹೇಳುತ್ತಾರೆ.
ಪ್ರತಿಯೊಂದು ವ್ರತಗಳಲ್ಲಿಯೂ ಕಲಶದಲ್ಲಿಯೇ ದೇವತೆಗಳನ್ನು ಆವಾಹನೆ ಮಾಡಿ ಪೂಜಿಸುವ ಕ್ರಮವಿದೆ. ಆದ್ದರಿಂದ ರಾಮನವಮಿಯಂದೂ ಕೂಡ ಕಲಶದಲ್ಲಿಯೇ ಭಗವಂತನನ್ನು ಆವಾಹನೆ ಮಾಡಿ ಪೂಜಿಸಬೇಕೆಂಬುದು ಇವರ ಅಭಿಪ್ರಾಯ.
ಕಲಶದಲ್ಲಿ ಪೂಜಿಸುವುದಾದರೆ ಹೀಗೆ ಮಾಡಬೇಕು. ಬೆಳ್ಳಿಯ ಎರಡು ದೊಡ್ಡ ಕಲಶಗಳನ್ನಿಡಬೇಕು ಅವೆರಡರಲ್ಲಿ ಶ್ರೀರಾಮಚಂದ್ರ ದೇವರನ್ನು ಹಾಗೂ ಸೀತಾದೇವಿಯನ್ನು ಆವಾಹನೆ ಮಾಡಬೇಕು. ಸುತ್ತಲೂ ಲಕ್ಷ್ಮಣ, ಭರತ, ಶತ್ರುಘ್ನ ಹಾಗೂ ಹನುಮಂತ ದೇವರಿಗೆ ಪ್ರತ್ಯೇಕವಾದ ಕಲಶಗಳನ್ನು ಇಡಬೇಕು. ಪ್ರತಿಯೊಂದು ಕಲಶಗಳನ್ನು ಗಂಧ, ಅಕ್ಷತೆ, ಪುಷ್ಪ, ತೆಂಗಿನಕಾಯಿ, ಸಕಲ ಔಷಧಿಗಳು, ಬಂಗಾರ, ರತ್ನ, ಬೆಳ್ಳಿ ಇವುಗಳಿಂದ ಅಲಂಕರಿಸಿರಬೇಕು.
ಆ ಕಲಶಗಳಿಗೆ ಹಸಿದಾರವನ್ನು ಸುತ್ತಿರಬೇಕು. ಅನಂತ ಪೂಜೆಯಲ್ಲಿ ಹೇಳ ಹೇಳಿದಂತೆ ಭೂಪ್ರಾರ್ಥನೆ ಕಲಶ ಪೂಜೆ ಮೊದಲಾದವುಗಳನ್ನು ವಿಧಿ ಪ್ರಕಾರವಾಗಿ ಮಾಡಬೇಕು. ಪ್ರಧಾನ ಕಲಶದ ಮೇಲೆ ರಾಮಯಂತ್ರವನ್ನು ಇಡಬೇಕು ಮತ್ತು ಸೀತಾರಾಮ ಪ್ರತಿಮೆಗಳನ್ನು ಇಡಬೇಕು. ಪ್ರಾಣಪ್ರತಿಷ್ಠೆ ಮೊದಲಾದವುಗಳನ್ನು ಆಚರಿಸಿ ಷೋಡಶೋಪಚಾರ ಪೂಜೆಗಳಿಂದ ಪೂಜಿಸಬೇಕು.