ರಾಜ್ಯ ಸರ್ಕಾರದಿಂದ ಗುತ್ತಿಗೆದಾರರಿಗೆ ಕಿರುಕುಳ: ಬೊಮ್ಮಾಯಿ

Advertisement

ಹಾವೇರಿ: ರಾಜ್ಯದಲ್ಲಿ ಅನುತ್ಪಾದಕ ವೆಚ್ಚ ಹೆಚ್ಚಾಗಿದ್ದು, ಅಭಿವೃದ್ಧಿ ಕುಂಠಿತವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇಂದು ಹಾವೇರಿ ಜಿಲ್ಲಾ ಗುತ್ತಿಗೆದಾರರ ಸಂಘದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯ ಸರ್ಕಾರ ಅಭಿವೃದ್ಧಿ ಕೆಲಸ ಯಾವ ರೀತಿ ಮಾಡುತ್ತಿದೆ ಎಂದು ಗೊತ್ತಾಗುವುದೇ ಗುತ್ತಿಗೆದಾರರಿಗೆ. ಗುತ್ತಿಗೆದಾರರಿಗೆ ಎಷ್ಟು ಕೆಲಸ ಸಿಗುತ್ತಿದೆ. ಎಷ್ಟು ತೊಂದರೆ ಕೊಡುತ್ತಾರೆ. ಹಣ ಬಿಡುಗಡೆಗೆ ಎಷ್ಟು ಸಮಸ್ಯೆ ಆಗುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ ಎಂದರು.
ಅಭಿವೃದ್ಧಿ ಅನ್ನುವುದು ನಿರಂತರ ಪ್ರಕ್ರಿಯೆಯಾಗಿದೆ. ಒಂದು ಆರ್ಥಿಕ ಅಭಿವೃದ್ಧಿ, ಮತ್ತೊಂದು ಸಾಮಾಜಿಕ ಅಭಿವೃದ್ಧಿ, ಬಂಡವಾಳ ವೆಚ್ಚ ಈ ಬಜೆಟ್‌ನಲ್ಲಿ ಬಹಳ ಕಡಿಮೆಯಾಗಿದೆ. ಅನುತ್ಪಾದಕ ವೆಚ್ಚ ಹೆಚ್ಚಾಗಿದೆ. ಅಭಿವೃದ್ಧಿ ವೇಗ ಹೆಚ್ಚಾಗಬೇಕಿದೆ. ಕಳೆದ ವರ್ಷದ ಕೆಲಸ ಈ ವರ್ಷ ಇಲ್ಲ. ಗುತ್ತಿಗೆದಾರರಿಗೆ ಬಿಲ್ ವಿಳಂಬವಾದರೆ ಸಮಸ್ಯೆಯಾಗುತ್ತದೆ. ಸರ್ಕಾರದ ಕೆಲಸ ನಿರಂತರ ಚಲನೆಯಲ್ಲಿ ಇರಬೇಕು. ಜನರ ಸುತ್ತ ಅಭಿವೃದ್ಧಿ ಆಗಬೇಕು. ಈ ಸರ್ಕಾರದಲ್ಲಿ ಗುತ್ತಿಗೆದಾರರಿಗೆ ಎಷ್ಟು ಸಮಸ್ಯೆಯಾಗುತ್ತಿದೆ ಎನ್ನುವುದು ಗೊತ್ತಿದೆ. ನಾವು ಇದ್ದಾಗ ಸಣ್ಣ ಗುತ್ತಿಗೆದಾರರು, ಮಧ್ಯಮ ಗುತ್ತಿಗೆದಾರರು, ದೊಡ್ಡ ಗುತ್ತಿಗೆದಾರರಿಗೆ ಎಲ್ಲರನ್ನೂ ತೊಂದರೆಯಾಗದಂತೆ ಸಮಾನವಾಗಿ ನೋಡಿಕೊಂಡಿದ್ದೇವು.
ನಮ್ಮ ಅವಧಿಯಲ್ಲಿ ಬಿಬಿಎಂಪಿ ಗುತ್ತಿಗೆದಾರರು ಅನಗತ್ಯವಾಗಿ 40% ಕಮಿಷನ್ ಆರೋಪ ಮಾಡಿದರು‌ ನಾನು ಅದನ್ನು ಸವಾಲಾಗಿ ತೆಗೆದುಕೊಂಡು ಒಂದಾದರೂ ದಾಖಲೆ ಕೊಡಿ ಎಂದು ಕೇಳಿದೆ. ಆದರೆ, ಅವರ ಬಳಿ ಒಂದೂ ದಾಖಲೆ ಇರಲಿಲ್ಲ. ಈಗ ಸರ್ಕಾರ ತನಿಖೆಗೆ ಆಯೋಗ ಮಾಡಿದ್ದಾರೆ. ಆದರೆ, ಆರು ತಿಂಗಳಾದರೂ ಇದುವರೆಗೂ ಯಾವುದೇ ತನಿಖೆಯ ಪ್ರಗತಿ ಯಾಗಿಲ್ಲ. ನಾನು ಹಾವೇರಿ ಜಿಲ್ಲೆಯಲ್ಲಿ ಯಾವುದೇ ಗುತ್ತಿಗೆದಾರರ ಕಾರ್ಯಗಳಲ್ಲಿ ಹಸ್ತಕ್ಷೇ ಮಾಡಿಲ್ಲ ಎಂದು ಹೇಳಿದರು.