ಚನ್ನಮ್ಮನ ಕಿತ್ತೂರು : ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿರುವ ರಾಜ್ಯ ಮಟ್ಟದ ‘ಚನ್ನಮ್ಮನ ಕಿತ್ತೂರ ಉತ್ಸವ-2022’ಕ್ಕೆ ವೀರ ಜ್ಯೋತಿ ಬರಮಾಡಿಕೊಳ್ಳುವ ಮೂಲಕ ಅದ್ಧೂರಿ ಚಾಲನೆ ನೀಡಲಾಯಿತು.
ಚನ್ನಮ್ಮ ವೃತ್ತದಲ್ಲಿ ಬೆಳಿಗ್ಗೆ ಅಶ್ವಾರೂಢ ಚನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಶಾಸಕರಾದ ಮಹಾಂತೇಶ ದೊಡಗೌಡರ, ಮಹಾಂತೇಶ ಕೌಜಲಗಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗಿಂದ್ರ ಸ್ವಾಮಿಗಳು ಹಾಗೂ ನಿಚ್ಚಣಕಿಯ ಶ್ರೀಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮಿಗಳು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ವಿಜಯಜ್ಯೋತಿಗೆ ಸ್ವಾಗತ…
ಕಿತ್ತೂರಿನ ವೀರರಾಣಿ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಬೆಳಿಗ್ಗೆ 10ಕ್ಕೆ ವಿಜಯಜ್ಯೋತಿ ಬರಮಾಡಿಕೊಳ್ಳಲಾಯಿತು. ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ಮಹಾಂತೇಶ ದೊಡಗೌಡರ, ಮಹಾಂತೇಶ ಕೌಜಲಗಿ, ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗಿಂದ್ರ ಸ್ವಾಮಿಗಳು ಹಾಗೂ ನಿಚ್ಚಣಕಿಯ ಶ್ರೀಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮಿಗಳು ವೀರಜ್ಯೋತಿ ಸ್ವಾಗತಿಸಿ ಸಂಸ್ಥಾನದ ಧ್ವಜಾರೋಹಣ ನೆರವೇರಿಸಿದರು. ವೀರಜ್ಯೋತಿಯು ನಿಚ್ಚಣಕಿಯ ಶ್ರೀಗುರು ಮಡಿವಾಳೇಶ್ವರ ಮಠದವರೆಗೆ ಸಂಚರಿಸಿತು.
ಕಿತ್ತೂರಿನ ಗಡಾದಿ ಮರಡಿಯಲ್ಲಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಕಿತ್ತೂರು ಉತ್ಸವದ ಉದ್ಘಾಟನಾ ಧ್ವಜಾರೋಹಣ ನೆರವೇರಿಸಿದರು.
ಕಳೆಗಟ್ಟಿದ ಕಲಾ ವಾಹಿನಿ, ರೂಪಕ ಮೆರವಣಿಗೆ:
ವೀರ ಜ್ಯೋತಿ ಸ್ವಾಗತದ ಬಳಿಕ ಕಿತ್ತೂರಿನ ವೀರರಾಣಿ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ವಿವಿಧ ಕಲಾ ತಂಡಗಳು, ರೂಪಕಗಳಿಗೆ ಚಾಲನೆ ನೀಡಲಾಯಿತು. ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಶಾಸಕ ಮಹಾಂತೇಶ ದೊಡಗೌಡರ ಸೇರಿದಂತೆ ಇತರ ಅಧಿಕಾರಿಗಳು ಜನಪ್ರತಿನಿಧಿಗಳು ಜಾನಪದ ಕಲಾವಾಹಿನಿಗೆ ಚಾಲನೆ ನೀಡಿದರು.
ವಿವಿಧ ತಾಲೂಕುಗಳ ಆಡಳಿತದಿಂದ ಕಿತ್ತೂರು ಚನ್ನಮ್ಮ, ಕಿತ್ತೂರು ಕೋಟೆ, ಗೊಮ್ಮಟೇಶ್ವರ, ಪಾರ್ವತಿ ಕಂದ, ಹಿಡಕಲ್ ಜಲಾಶಯ ಸೇರಿದಂತೆ ವಿವಿಧ ಸಾಂಸ್ಕೃತಿಕ ರೂಪಕಗಳು ಗಮನ ಸೆಳೆದವು. ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ವೀರಗಾಸೆ, ಡೊಳ್ಳು ಕುಣಿತ, ದಟ್ಟಿ ಕುಣಿತ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಲಾ ತಂಡಗಳು ಜನರನ್ನು ರಂಜಿಸಿದವು.